ಹಿಟ್&ರನ್‌ನಿಂದ ಓರ್ವ ಸಾವು: ಮ್ಯಾಡ್ ಇನ್ ಕುಡ್ಲ ಯೂಟ್ಯೂಬರ್ ಬಂಧನ
ಮುಲ್ಕಿಯಲ್ಲಿ ಹಿಟ್& ರನ್ ಪ್ರಕರಣದಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ಯೂಟ್ಯೂಬರ್ ಮ್ಯಾಡ್ ಇನ್ ಕುಡ್ಲ ಯುಟ್ಯೂಬ್ ಚಾನೆಲ್‌ನ ಅರ್ಪಿತ್ ಇಂದ್ರವರ್ಧನ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು, ಫೆಬ್ರವರಿ 4: ಮಂಗಳೂರು ನಗರ ಹೊರವಲಯದ ಮುಲ್ಕಿಯಲ್ಲಿ ಹಿಟ್& ರನ್ ಮಾಡಿ ಇಬ್ಬರ ಜೀವ ಬಲಿ ಪಡೆದ ಮಂಗಳೂರಿನ ಪ್ರಸಿದ್ಧ ಯೂಟ್ಯೂಬರ್‌ನನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಪ್ರಸಿದ್ಧ ಯೂಟ್ಯೂಬರ್ ಮ್ಯಾಡ್ ಇನ್ ಕುಡ್ಲ ಯುಟ್ಯೂಬ್ ಚಾನೆಲ್‌ನ ಅರ್ಪಿತ್ ಇಂದ್ರವರ್ಧನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಜನವರಿ 31 ರ ರಾತ್ರಿ ಮಂಗಳೂರು ಹೊರವಲಯದ ಪಡುಪಣಂಬೂರು ಬಳಿ ಅರ್ಪಿತ್, ವೇಗವಾಗಿ ಕಾರು ಚಲಾಯಿಸಿ ಹೆದ್ದಾರಿ ಪಕ್ಕದಲ್ಲಿ ಲಾರಿ ಟೈಯರ್ ಚೇಂಜ್ ಮಾಡುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದರು. ಮೂವರಿಗೆ ಗಂಭೀರವಾಗಿ ಗಾಯವಾಗಿದ್ದರೂ ಅರ್ಪಿತ್ ಕಾರು ನಿಲ್ಲಿಸದೇ ಪರಾರಿಯಾಗಿದ್ದರು.
ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಫೆಬ್ರವರಿ 1ರಂದು ಮೃತಪಟ್ಟಿದ್ದಾರೆ. ಮತ್ತೊರ್ವನಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಮದ್ಯಪ್ರದೇಶದ ಬಬುಲು(23), ಅಚಲ್ ಸಿಂಗ್(30) ಮೃತಪಟ್ಟಿದ್ದಾರೆ.

ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದ ಕಾರ್‌ಅನ್ನು ಪತ್ತೆ ಹಚ್ಚಿದ ಪೊಲೀಸರು, ಯೂಟ್ಯೂಬರ್ ಅರ್ಪಿತ್‌ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮ್ಯಾಡ್ ಇನ್ ಕುಡ್ಲ ಯೂಟ್ಯೂಬ್ ಚಾನೆಲ್‌ನ ಅರ್ಪಿತ್ ಸ್ಯ್ಯಾಂಡ್ ಅಪ್ ಕಾಮಿಡಿ ಮೂಲಕ ಪ್ರಸಿದ್ಧಿ ಪಡೆದಿದ್ದರು. ಈ ಹಿಂದೆ ಆರ್.ಜೆ ಆಗಿಯೂ ಕೆಲಸ ಮಾಡಿದ್ದ ಅರ್ಪಿತ್, ಆ ಬಳಿಕ ಯೂಟ್ಯೂಬ್ ಚಾನೆಲ್‌ನಲ್ಲಿ ಸಕ್ರೀಯರಾಗಿದ್ದರು. ಅಲ್ಲದೇ ಕಾರ್ಯಕ್ರಮಗಳಿಗೆ ನಿರೂಪಕರಾಗಿಯೂ ಕೆಲಸ ಮಾಡುತ್ತಿದ್ದರು. ಜನವರಿ 31ರಂದು ಉಡುಪಿಯಲ್ಲಿ ಕಾರ್ಯಕ್ರಮ ನೀಡಿ ಮರಳಿ ಮಂಗಳೂರಿಗೆ ಬರುವಾಗ ಈ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications