ಸುಳ್ಯದ ಲಾಡ್ಜ್ ನಲ್ಲಿ ಯುವ ಜೋಡಿ ಆತ್ಮಹತ್ಯೆ
ಮಂಗಳೂರು, ಅಕ್ಟೋಬರ್ 20: ಮನೆಯವರು ತಮ್ಮ ಪ್ರೀತಿಯನ್ನು ನಿರಾಕರಿಸಿದರು ಎಂಬ ಕಾರಣಕ್ಕೆ ಸುಳ್ಯದ ವಸತಿ ಗೃಹವೊಂದರಲ್ಲಿ ಯುವಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ, ಅ.19ರಂದು ನಡೆದಿದೆ.
ಸುಳ್ಯ ತಾಲೂಕಿನ ಕಟ್ಟತ್ತಾರು ನಿವಾಸಿ ದರ್ಶನ್(19) ಹಾಗೂ ಧರ್ಮಸ್ಥಳ ಸಮೀದ ಕಾಯರ್ತ್ಕಡ್ಕದ ಇಂದಿರಾ (19) ಆತ್ಮಹತ್ಯೆ ಮಾಡಿಕೊಂಡವರೆಂದು ತಿಳಿದುಬಂದಿದೆ. ಇವರಿಬ್ಬರೂ ಅ.18ರಂದು ರಾತ್ರಿ ಸುಳ್ಯದ ವಸತಿ ಗೃಹಕ್ಕೆ ಸಂಬಂಧಿಕರು ಎಂದು ಹೇಳಿಕೊಂಡು ಬಂದು ಊರಿಗೆ ಹೊರಡಲು ಬಸ್ ಇಲ್ಲ ಎಂದು ವಸತಿ ಗೃಹದಲ್ಲಿ ರೂಂ ಪಡೆದುಕೊಂಡಿದ್ದರು. ಆನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ವಸತಿ ಸಿಬ್ಬಂದಿ ಕಿಟಕಿಯ ಮೂಲಕ ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಯುವಕ ದರ್ಶನ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು, ಇದೇ ಲಾಡ್ಜ್ ನಲ್ಲೂ ಈ ಹಿಂದೆ ಕೆಲ ಅವಧಿ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ. ಮನೆಯಲ್ಲಿ, ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದ. ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ತಕ್ಷಣವೇ ವಸತಿ ಗೃಹದವರು ಪೊಲೀಸರಿಗೆ ದೂರು ನೀಡಿದ್ದರು. ಸುಳ್ಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications