ಪುತ್ತೂರು: ನಡುರಸ್ತೆಯಲ್ಲೇ ಯುವತಿಯ ಕತ್ತು ಸೀಳಿದ ಪಾಗಲ್ ಪ್ರೇಮಿ ಬಂಧನ
ಮಂಗಳೂರು, ಆಗಸ್ಟ್, 24: ಪ್ರೇಮಿಗಳ ಗಲಾಟೆ ಯುವತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮಧ್ಯಾಹ್ನದ ವೇಳೆಯೇ ಪ್ರೇಮಿ ಯುವತಿಯ ಕತ್ತು ಸೀಳಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೃತ್ಯ ನಡೆದ ಕೆಲವೇ ನಿಮಿಷದಲ್ಲಿ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪುತ್ತೂರಿನ ವಸ್ತ್ರ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ ಬಂಟ್ವಾಳದ ಅಳಿಕೆ ಗ್ರಾಮದ ಗೌರಿ (25) ಕೊಲೆಯಾದ ಯುವತಿ. ಆರೋಪಿ ಪದ್ಮರಾಜ್ (30) ಮತ್ತು ಗೌರಿ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಕಳೆದ ಕೆಲ ತಿಂಗಳುಗಳಿಂದ ಗಲಾಟೆ ಮಾಡಿಕೊಂಡಿದ್ದರು. ಹಲವು ಬಾರಿ ಗಲಾಟೆ ವಿಪರೀತ ಮಟ್ಟಕ್ಕೆ ತಿರುಗಿ ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
ಇಂದು ಪುತ್ತೂರು ಬಸ್ ನಿಲ್ದಾಣದ ಬಳಿ ಗೌರಿ ಮತ್ತು ಪದ್ಮರಾಜ್ ಜಗಳವಾಡಿಕೊಂಡಿದ್ದಾರೆ. ಜಗಳ ಅತಿರೇಖಕ್ಕೆ ತಿರುಗಿ ಗೌರಿ ಮಹಿಳಾ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಬಳಿಕವೂ ಠಾಣೆಯ ಮುಂಭಾಗವೇ ಗೌರಿ ಮತ್ತು ಪದ್ಮರಾಜ್ ಜಗಳವಾಡಿಕೊಂಡಿದ್ದಾರೆ. ಜಗಳ ಬೇರೆ ಹಂತಕ್ಕೆ ತಲುಪಿ ರೊಚ್ಚಿಗೆದ್ದ ಪದ್ಮರಾಜ್ ಯುವತಿ ಗೌರಿಯ ಕತ್ತು ಸೀಳಿದ್ದಾನೆ .ಮೂರರಿಂದ ನಾಲ್ಕು ಬಾರಿ ಯುವತಿಯ ಕತ್ತಿಗೆ ಚೂರಿಯಿಂದ ಇರಿದಿದ್ದಾನೆ. ಹೀಗೆ ಗಂಭೀರವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪದ್ಮರಾಜ್ ಕಾಲ್ಕಿತ್ತಿದ್ದಾನೆ.
ಇತ್ತ ಗಂಭೀರವಾಗಿ ಗಾಯಗೊಂಡ ಗೌರಿಯನ್ನು ಸ್ಥಳೀಯರು ಕೂಡಲೇ ಪುತ್ತೂರು ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಗಂಭೀರ ಗಾಯಗಳಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರು ಆಸ್ಪತ್ರೆಗೆ ರವಾನಿಸುವಾಗ ಗೌರಿ ದಾರಿ ಮಧ್ಯೆ ಕೊನೆಯುಸಿರೆಳಿದಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಪುತ್ತೂರು ಎಸ್‌ಪಿ ರಿಷ್ಯಂತ್ ಸಿ.ಬಿ. ಭೇಟಿ ನೀಡಿದ್ದಾರೆ. ಸದ್ಯ ಪುತ್ತೂರು ನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.












Click it and Unblock the Notifications