ಕುಕ್ಕೆ ಸುಬ್ರಮಣ್ಯ; ಭಕ್ತರೇ ತಿಳಿಯಿರಿ ಈ ದಿನ ವಿವಿಧ ಸೇವೆ ಲಭ್ಯವಿಲ್ಲ
ಮಂಗಳೂರು, ಡಿಸೆಂಬರ್ 07; ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಮಣ್ಯಕ್ಕೆ ವಿವಿಧ ಸೇವೆಗಳನ್ನು ಮಾಡಿಸಲು ನೂರಾರು ಭಕ್ತರು ಆಗಮಿಸುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಮುಖ ಮಾಹಿತಿಯೊಂದಿದೆ. ಕೆಲವು ಸೇವೆಗಳು ಕೆಲವು ದಿನ ಲಭ್ಯವಿಲ್ಲ.
ಮಹಾತೋಭಾರ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ ಪತ್ರಿಕಾ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದೆ. ಡಿಸೆಂಬರ್‌ನಲ್ಲಿ ದೇವಾಲಯಕ್ಕೆ ತೆರಳಿ ವಿವಿಧ ಸೇವೆ ಮಾಡಿಸಬೇಕು ಎಂದು ಕೊಂಡಿರುವ ಭಕ್ತರು ಈ ಬಗ್ಗೆ ಮಾಹಿತಿ ತಿಳಿದು ಪ್ರವಾಸದ ಯೋಜನೆ ತಯಾರಿಸಬಹುದು.

ದೇವಾಲಯದಲ್ಲಿನ 2023-24ನೇ ಸಾಲಿನ ಲಕ್ಷದೀಪೋತ್ಸವ, ಚೌತಿ, ಚಂಪಾಷಷ್ಠಿ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವು ಸೇವೆಗಳನ್ನು ನಿಗದಿತ ದಿನಾಂಕದಂದು ರದ್ದುಗೊಳಿಸಲಾಗಿದೆ. ಅಲ್ಲದೇ ದಿನಾಂಕ 09/12/2023ರ ಶನಿವಾರ "ಮೂಲಮೃತಿಕಾ" ಪ್ರಸಾದ ತೆಗೆಯುವ ಕಾರ್ಯಕ್ರಮ ಇರುತ್ತದೆ. ಆದ್ದರಿಂದ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆ ತನಕ ಶ್ರೀ ದೇವರ ದರ್ಶನ ಹಾಗೂ ಸೇವೆ ನೆರವೇರಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ದಿನಾಂಕ ಮತ್ತು ಲಭ್ಯವಿಲ್ಲದ ಸೇವೆಗಳ ವಿವರ
* ದಿನಾಂಕ 12/12/2023 (ಲಕ್ಷದೀಪೋತ್ಸವ), ದಿನಾಂಕ 16/12/2023 (ಚೌತಿ) ಮತ್ತು ದಿನಾಂಕ 17/12/2023 (ಪಂಚಮಿ) ದಿನಗಳಲ್ಲಿ ಭಕ್ತಾದಿಗಳ ಪ್ರಾರ್ಥನೆ ಸೇವೆ ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ.
* ದಿನಾಂಕ 18/12/2023 (ಚಂಪಾಷಷ್ಠಿ) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ಇರುವುದಿಲ್ಲ.
* ದಿನಾಂಕ 18/12/2023ರ ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ.
* ದಿನಾಂಕ 12/12/2023 (ಲಕ್ಷದೀಪೋತ್ಸವ), ದಿನಾಂಕ 16/12/2023 (ಚೌತಿ), ದಿನಾಂಕ 17/12/2023 (ಪಂಚಮಿ), ದಿನಾಂಕ 18/12/2023 (ಚಂಪಾಷಷ್ಠಿ) ಮತ್ತು ದಿನಾಂಕ 24/12/2023ರಂದು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರುವುದಿಲ್ಲ.
* ವಾರ್ಷಿಕ ಚಂಪಾಷಷ್ಠಿ ಜಾತ್ರೆ ಪ್ರಯುಕ್ತ ದಿನಾಂಕ 10/12/2023 ರಿಂದ ದಿನಾಂಕ 24/12/2023ರವರೆಗೆ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ.
* ವಾರ್ಷಿಕ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ದಿನಾಂಕ 08/12/2023 ರಿಂದ ದಿನಾಂಕ 24/12/2023ರ ವರೆಗೆ ಸರ್ಪಸಂಸ್ಕಾರ ಸೇವೆ ಇರುವುದಿಲ್ಲ.
ಕುಕ್ಕೆ ಸುಬ್ರಮಣ್ಯ ನಾಗಾರಾದನೆಯ ಪ್ರಸಿದ್ಧವಾದ ಕ್ಷೇತ್ರ. ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಮತ್ತು ಸರ್ಪ ಸಂಸ್ಕಾರ ಸೇವೆಗಳನ್ನು ಮಾಡಿಸಲು ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಆದ್ದರಿಂದ ದೇವಾಲಯದ ಆಡಳಿತ ಮಂಡಳಿ ಸೇವೆಗಳು ಲಭ್ಯವಿಲ್ಲದ ದಿನಾಂಕಗಳನ್ನು ಮೊದಲೇ ತಿಳಿಸುವ ಮೂಲಕ ಭಕ್ತರಿಗೆ ಮಾಹಿತಿ ನೀಡುತ್ತದೆ.
ಈ ವಾರಾಂತ್ಯದಲ್ಲಿ ಕುಕ್ಕೆ ಸುಬ್ರಮಣ್ಯದಲ್ಲಿ "ಮೂಲಮೃತಿಕಾ" ಪ್ರಸಾದ ತೆಗೆಯಲಾಗುತ್ತದೆ. ಆದ್ದರಿಂದ ಅರ್ಧ ದಿನಗಳ ಕಾಲ ಸೇವೆ ಮತ್ತು ದರ್ಶನ ಲಭ್ಯವಿರುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ. ವಾರ್ಷಿಕ ಕಾರ್ಯಕ್ರಮಗಳ ಕಾರಣ ಸಹ ಕೆಲವು ಸೇವೆಗಳು ಕೆಲವು ದಿನಾಂಕಗಳ ಕಾಲ ಲಭ್ಯವಿರುವುದಿಲ್ಲ.












Click it and Unblock the Notifications