ಮಂಗಳೂರು- ಬೆಂಗಳೂರು ರೈಲು ಹಳಿಯ ಮೇಲೆ ಗುಡ್ಡ ಕುಸಿತ
ಮಂಗಳೂರು, ಆಗಸ್ಟ್ 29: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಘಟ್ಟ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಬೆಳ್ತಂಗಡಿ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಮಂಗಳವಾರ ಗುಡ್ಡ ಕುಸಿದಿದೆ.
ಬೆಳ್ತಂಗಡಿಯ ಗಡಿಭಾಗ ಶಿರಾಡಿ ಘಾಟ್ ನ ಎಡಕುಮೇರಿ ಎಂಬಲ್ಲಿ ಮಂಗಳೂರು- ಬೆಂಗಳೂರು ರೈಲು ಹಳಿಯ ಮೇಲೆ ಗುಡ್ಡ ಕುಸಿದಿದೆ. ಪರಿಣಾಮವಾಗಿ ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೆ ತಡೆಯುಂಟಾಗಿದೆ.

ನಾಲ್ಕು ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರೈಲು ಹಳಿಗಳ ಮೇಲೆ ಮಣ್ಣು ಬಿದ್ದ ಪರಿಣಾಮ ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಸಕಲೇಶಪುರ- ಸುಬ್ರಹ್ಮಣ್ಯ ರಸ್ತೆ ಮಧ್ಯೆ ಈ ಗುಡ್ಡ ಕುಸಿತ ಉಂಟಾಗಿದ್ದು, ಬೆಂಗಳೂರಿನಿಂದ ಮಂಗಳವಾರ ಮುಂಜಾನೆ ಹೊರಟ ಯಶವಂತಪುರ - ಮಂಗಳೂರು ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ಸಿರಿಬಾಗಿಲು ಬಳಿ ತಡೆಯಲಾಗಿದೆ.

ಕಾರವಾರದಿಂದ ಬೆಂಗಳೂರಿಗೆ ಹೊರಟಿರುವ ಕಾರವಾರ - ಯಶವಂತಪುರ ಎಕ್ಸ್ ಪ್ರೆಸ್ ರೈಲಿನ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಿಸಲಾಗಿದೆ. ಈ ರೈಲು ಶೋರ್ನೂರು, ಕಣ್ಣೂರು, ಪಾಲಕ್ಕಾಡ್, ಬಂಗಾರಪೇಟೆ ಮೂಲಕ ಬೆಂಗಳೂರಿಗೆ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.












Click it and Unblock the Notifications