ಚಿತ್ರಗಳು; ಮಂಗಳೂರಿನಲ್ಲಿ ಮಂತ್ರ ಮಾಂಗಲ್ಯ ವಿವಾಹ
ಮಂಗಳೂರು, ಏಪ್ರಿಲ್ 05; ಮಂಗಳೂರಿನ ಜೋಡಿಯೊಂದು ಕುವೆಂಪು ಪರಿಕಲ್ಪನೆಯ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆಯಾಗಿದ್ದಾರೆ. ಛಾಯಾಗ್ರಾಹಕ ವಿವೇಕ್ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬ ಜೋಡಿ ಮಂಗಳೂರಿನಲ್ಲಿ ಬಲು ಅಪರೂಪವಾದ ಮಂತ್ರ ಮಾಂಗಲ್ಯ ಮಾದರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಮಂಗಳೂರಿನ ಹಳೆಯ ಮನೆಯ ಮುಂಭಾಗ, ಮರಗಿಡಗಳ ನಡುವೆ ಹಾಕಲಾಗಿದ್ದ ಸಣ್ಣ ವೇದಿಕೆಯಲ್ಲಿ ಪುರೋಹಿತರು, ಮಂತ್ರಘೋಷ, ಉಡುಗೊರೆ, ಅದ್ಧೂರಿ ಊಟ ಇಲ್ಲದೇ ನೂರು ಜನ ಬಂಧುಮಿತ್ರರ ಸಮ್ಮುಖದಲ್ಲಿ ಜೋಡಿ ಮದುವೆಯಾಗಿದೆ.
ಮಂತ್ರ ಮಾಂಗಲ್ಯ ಅನ್ನೋದು ರಾಷ್ಟ್ರ ಕವಿ ಕುವೆಂಪು ಹುಟ್ಟು ಹಾಕಿದ ಪರಿಕಲ್ಪನೆಯಾಗಿದೆ. ಅದ್ಧೂರಿ ಮದುವೆ ಎಂಬುವುದು ಬಡ ಜನರ ಪಾಲಿಗೆ ಶಾಪವಾಗೋವುದನ್ನು ವಿರೋಧಿಸಿ ಕುವೆಂಪು ಈ ಪರಿಕಲ್ಪನೆಯನ್ನು ತನ್ನ ಮಗ ಪೂರ್ಣ ಚಂದ್ರ ತೇಜಸ್ವಿಗೆ ಮಂತ್ರ ಮಾಂಗಲ್ಯ ಮಾದರಿಯಲ್ಲೇ ಮದುವೆ ಮಾಡಿಸಿದ್ದರು.
ಮಂಗಳೂರಿನ ವಿವೇಕ್ ಗೌಡ ಮತ್ತು ಶಿವಾನಿ ಶೆಟ್ಟಿ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಹೆತ್ತವರ ಒಪ್ಪಿಗೆಯ ಪ್ರಕಾರ ಸಮಾನಮನಸ್ಕರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಪುರೋಹಿತರಿಲ್ಲದ ಮದುವೆಯಲ್ಲಿ ಮಂತ್ರ ಮಾಂಗ್ಯ ಪ್ರಮಾಣವಚನವನ್ನು ಸ್ವೀಕರಿಸಿ ಮಾಂಗಲ್ಯ ಕಟ್ಟಿ ನವ ಜೀವನಕ್ಕೆ ಈ ಜೋಡಿ ಕಾಲಿರಿಸಿದ್ದಾರೆ.

ಮಂತ್ರ ಮಾಂಗಲ್ಯದ ನಿಯಮಗಳು
ಮಂತ್ರ ಮಾಂಗಲ್ಯ ವಿವಾಹದ ನಿಯಮಗಳ ಪ್ರಕಾರ ವಿವಾಹದ ಯಾವೊಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಕೂಡದು. ಯಾವ ರೂಪದಿಂದಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವರದಕ್ಷಿಣೆಯನ್ನಾಗಲಿ ವಧುದಕ್ಷಿಣೆಯನ್ನಾಗಲಿ ಯಾರು ಸ್ವೀಕರಿಸಬಾರದು. ವರದಕ್ಷಿಣೆ ಸ್ವೀಕರಿಸುವ ದುಡ್ಡಿನ ದಲ್ಲಾಳಿ ವ್ಯವಹಾರದಲ್ಲಿ ಭಾಗಿಗಳಾಗುವ ಹಿರಿಯರು ಮಂತ್ರೋಪದೇಶಕ್ಕೂ, ಪ್ರತಿಜ್ಞಾವಿಧಿ ಉಪದೇಶಕ್ಕೂ, ವಧು-ವರರು ಮಂತ್ರೋಚ್ಚಾರಕ್ಕೂ, ಪ್ರತಿಜ್ಞೆ ತೆಗೆದುಕೊಳ್ಳಲೂ ಅನರ್ಹರಾಗಿರುತ್ತಾರೆ.
ಗಂಡಿನ ಕುಟುಂಬದವರು ಹಾಗೂ ಹೆಣ್ಣಿನ ಕುಟುಂಬದವರು ಎರಡೂ ಕಡೆಯಿಂದಲೂ ಒಟ್ಟು 200 ಜನರನ್ನು ಮೀರದಂತೆ ಆಹ್ವಾನಿಸಬೇಕು. ವಿವಾಹ ವೇದಿಕೆಯ ಮೇಲೆ ಎಲ್ಲರೆದುರು ವಧು-ವರರಿಗೆ ಉಡುಗೊರೆಗಳನ್ನು ಕೊಡುವುದು ನಿಷಿದ್ಧ. ವಿವಾಹವಾದ ನಂತರ ಯಾವಾಗ ಬೇಕಾದರೂ ಉಡುಗೊರೆಗಳನ್ನು ಕೊಡಬಹುದು. ಯಾವುದೇ ವಾದ್ಯ ಓಲಗ ತಮಟೆ ಧ್ವನಿವರ್ಧಕ ಮುಂತಾದ ಪ್ರಚಾರ ಸಾಮಗ್ರಿಗಳನ್ನು ಬಳಸಬಾರದು.

ಯಾವ ಮುಹೂರ್ತವೂ ಇಲ್ಲ
ಮಂತ್ರಮಾಂಗಲ್ಯ ವಿವಾಹಕ್ಕೆ ರಾಹುಕಾಲ ಗುಳಿಕಕಾಲ ಯಮಗಂಡಕಾಲ ಯಾವುದೂ ಇಲ್ಲ. ಹಾಗಾಗಿ ಗುರು ಹಿರಿಯರು ಸೇರಿ ತಮ್ಮೆಲ್ಲರಿಗೂ ಅನುಕೂಲವಾದ ದಿನಾಂಕ ಮತ್ತು ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕು. ಜೋಯಿಸರಿಂದ ಜಾತಕ ನೋಡಿಸುವುದು ನಿಷಿದ್ಧ. ಯಾವ ವೃತ್ತಿ ಪುರೋಹಿತರಿಗೂ ಪ್ರವೇಶವಿಲ್ಲ. ಓದು, ಬರಹ ಕಲಿತ ಮಂತ್ರಗಳನ್ನು ಓದಿ ಅರ್ಥಮಾಡಿಕೊಳ್ಳಬಲ್ಲ ವಧು ವರರ ತಂದೆತಾಯಿಗಳಾದ ಗುರುಹಿರಿಯರಲ್ಲಿ ಯಾರಾದರೊಬ್ಬರು ಮಂತ್ರಮಾಂಗಲ್ಯದ ಮಂತ್ರಗಳನ್ನು ಮತ್ತು ವಿವಾಹ ಸಂಹಿತೆಯನ್ನು ವಧುವರರಿಗೆ ಬೋಧಿಸಬಹುದು. ವಧು-ವರರು ವೇದಿಕೆ ಮೇಲೆ ಇಟ್ಟಿರುವ ಮಹಾಪುರುಷರ ಫೋಟೋಗಳಿಗೂ, ತಂದೆ-ತಾಯಿಗಳಿಗೂ, ಅಲ್ಲಿ ನೆರೆದಿರುವ ಗುರುಹಿರಿಯರಿಗೂ, ಕೊನೆಯದಾಗಿ ವೇದಿಕೆ ಮೇಲೆ ಇಟ್ಟಿರುವ ಮಾಂಗಲ್ಯಕ್ಕೂ ನಮಸ್ಕರಿಸಿ ಮಾಂಗಲ್ಯ ಕಟ್ಟಬೇಕು.
ಇದು ಅತ್ಯಂತ ಸರಳವಾದ ವಿವಾಹ ಪದ್ಧತಿಯಾಗಿರುವುದರಿಂದ ಆಡಂಬರದ ಏರ್ಪಾಡು ಇರಕೂಡದು. ಸುಮಾರು 200 ಜನರು ಸೇರುವಂತ ಒಂದು ಸಣ್ಣ ಜಾಗವನ್ನು ಆರಿಸಿಕೊಂಡು ವೇದಿಕೆಯನ್ನು ಸರಳವಾಗಿ ಅಲಂಕರಿಸಬೇಕು. ಪವಿತ್ರ ಸಮಾರಂಭಕ್ಕೆ ಆಧ್ಯಾತ್ಮಿಕ ಸಾಕ್ಷಿಗಳಾಗಿ ನಾಲ್ವರು ಮಹಾಪುರುಷರ ಫೋಟೋಗಳನ್ನು ಇಡಬೇಕು.

ಸರಳವಾದ ವಿವಾಹ
ವೇದಿಕೆಯ ಮೇಲೆ ವಧು-ವರರು, ಅವರ ತಂದೆ ತಾಯಿಗಳು ಮತ್ತು ಮಂತ್ರ ಬೋಧಿಸುವ ಹಿರಿಯರನ್ನು ಬಿಟ್ಟು ಬೇರಾರು ಇರಕೂಡದು. ಹಿರಿಯರು ಬೋಧಿಸಿದ ಮಂತ್ರಮಾಂಗಲ್ಯದ ಪ್ರತಿಜ್ಞಾ ವಿಧಿಯನ್ನು ವಧು-ವರರು ಓದಿದ ನಂತರ ತಾಳಿ ಕಟ್ಟಬೇಕು. ತಪ್ಪದೇ ಪುಸ್ತಕದ ಕೊನೆಯಲ್ಲಿ ವಧು-ವರರು ಮತ್ತು ಸಾಕ್ಷಿಗಳು ಸಹಿ ಮಾಡಬೇಕು. ಭಾರತದ ಸಂವಿಧಾನದಲ್ಲಿ ಖಚಿತಪಡಿಸಿರುವಂತೆ ಮದುವೆ ಆಗುತ್ತಿರುವ ವಧು-ವರರ ವಯಸ್ಸು ಇರಬೇಕು. ವಧು-ವರರು ತಮ್ಮ ವಿವಾಹವನ್ನು ತಪ್ಪದೇ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ನೋಂದಾಯಿಸುವುದು ಕಡ್ಡಾಯ.

ಪ್ರಮಾಣ ವಚನವೇನು?
ಈ ದಿನ ಇಲ್ಲಿ ಮಂತ್ರ ಮಾಂಗಲ್ಯದ ರೀತಿಯಲ್ಲಿ ಮದುವೆಯಾಗುವುದರ ಮೂಲಕ ನಾವು ನಮ್ಮ ಎಲ್ಲಾ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯ ಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೇವೆ. ನಾವು ಇನ್ನು ಮುಂದೆ ಈ ಭೂಮಂಡಲದ ಯಾವುದೇ ಜಾತಿ ಮತ್ತು ಜನಾಂಗ ಗಳಿಗಿಂತ ಶ್ರೇಷ್ಠರಲ್ಲ, ಹಾಗೆಯೇ ಯಾವುದೇ ಜಾತಿ ಮತ್ತು ಜನಾಂಗಗಳ ಗಿಂತ ಕೀಳಾದವರೂ ಅಲ್ಲ. ನಾವು ಇಂದು ಮನುಷ್ಯ ಸಮಾಜದ ಎಲ್ಲಾ ಕೃತಕ ಜಾತಿಗಳಿಂದ ಮುಕ್ತರಾಗಿದ್ದೇವೆ. ಎಲ್ಲಾ ಸಂಕುಚಿತ ಮತ ಧರ್ಮಗಳಿಂದ ಮುಕ್ತರಾಗಿದ್ದೇವೆ, ಎಲ್ಲಾ ಆಚಾರ ಸಂಪ್ರದಾಯಗಳಿಂದ ಮುಕ್ತರಾಗಿದ್ದೇವೆ, ಎಲ್ಲಾ ಆಸತ್ಯ ಮತ್ತು ಮೂಡ ನಂಬಕೆಗಳಿಂದ ಮುಕ್ತರಾಗಿದ್ದೇವೆ,
ಮನುಷ್ಯನ ಜೀವಿತ ಕಾಲವೇ ಒಂದು ಸುಮುಹೂರ್ತ. ಹಾಗಾಗಿ ನಾವು ಯಾವುದೇ ಕಾಲ, ಮುಹೂರ್ತಗಳನ್ನು ನೋಡದೆ, ಯಾವುದೇ ಧಾರ್ಮಿಕ ಚೌಕಟ್ಟುಗಳಿಗೆ ಒಳಗಾಗದೆ ಸತಿ-ಪತಿಗಳಾಗುತ್ತಿದ್ದೇವೆ. ಮಾನವರೆಲ್ಲರೂ ಸಮಾನರು. ಪುರುಷನು ಸ್ತ್ರೀಂತ ಉತ್ತಮ ಎಂದು ಹೇಳುವ ಎಲ್ಲ ಧರ್ಮಗಳನ್ನೂ ಎಲ್ಲಾ ಸಂಪ್ರದಾಯಗಳನ್ನೂ ನಾವು ಇಂದು ತಿರಸ್ಕರಿಸಿದ್ದೇವೆ. ಹೆಂಡತಿಯಾಗಲಿ, ಗಂಡನಾಗಲಿ ಪರಸ್ಪರ ಅಭಿನರೂ ಅಲ್ಲ, ಅಜ್ಞಾನುವರ್ತಿಯೂ ಅಲ್ಲ, ಹೆಂಡತಿಯೂ ಗಂಡನಷ್ಟೇ ಸ್ವತಂತ್ರರೂ ಸಮಾನತೆಯುಳ್ಳವಳೂ ಆಗಿರುತ್ತಾಳೆ.

ವರದಕ್ಷಿಣೆ, ವಧು ದಕ್ಷಿಣೆ ಯಾವುದೂ ಇಲ್ಲ
ಗಂಡ-ಹೆಂಡತಿಯನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಪ್ರೀತಿಯೊಂದೆ. ನಾವಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗುತ್ತಿದ್ದೇವೆ. ಒಬ್ಬರನ್ನೊಬ್ಬರು ಪ್ರೀತಿಸದವರು ತಾಳಿ ಕಟ್ಟಿಕೊಂಡರೂ ವ್ಯರ್ಥ, ಅಗ್ನಿಯನ್ನು ಸುತ್ತಿದರೂ ವ್ಯರ್ಥ, ಯಾವ ಶಾನ್ಯಾಚಾರದ ಪ್ರಕಾರ ಮದುವೆಯಾದರೂ ವ್ಯರ್ಥ, ಹಾಗಾಗಿ ಮುಂದಿನ ನಮ್ಮ ದಾಂಪತ್ಯ ಜೀವನದಲ್ಲಿಯೂ ಪರವಂಚನೆ ಮತ್ತುಆತ್ಮವಂಚನೆ ಮಾಡಿಕೊಳ್ಳದೆ ಪರಸ್ಪರ ಪ್ರೀತಿ, ನಂಜಕ ಮತ್ತು ಗೌರವವನ್ನು ಉಳಿಸಿಕೊಳ್ಳುತ್ತೇವೆ.
ವರದಕ್ಷಿಣೆ ಅಥವಾ ವಧುದಕ್ಷಿಣಿ ವ್ಯವಹಾರಗಳಿಗೆ ಒಳಗಾಗದೆ ನಾವು ನಮ್ಮ ಸ್ವಂತ ಪ್ರಯತ್ನದಿಂದ ನಮ್ಮ ತಂದೆ ತಾಯಿಗಳಿಗೆ ಯಾವ ರೀತಿಯ ಆರ್ಥಿಕ ಹೊರೆಯಾಗದಂತೆ ವಿವಾಹ ಮಾಡಿಕೊಳ್ಳುತ್ತಿದ್ದೇವೆ. ನಾವು ಇಂದು ಎಲ್ಲಾ ಮತಧರ್ಮ, ಕಂದಾಚಾರ, ಅಜ್ಞಾನಗಳಿಂದ ವಿಮುಕ್ತರಾಗಿ ಸಮಾಜವನ್ನೂ ನಮ್ಮಂತೆಯೇ ವಿಮುಕ್ತರನ್ನಾಗಿ ಮಾಡುವ ಪವಿತ್ರ ಕರ್ತವ್ಯವನ್ನು ಮಾಡುತ್ತೇವೆ.
ಪ್ರಮಾಣ ವಚನ ಪತ್ರಕ್ಕೆ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ, ಬಂಧು ಬಳಗ, ಸ್ನೇಹಿತರೊಬ್ಬರ ಸಹಿ, ಮತ್ತು ವಿವಾಹ ಸಂಹಿತೆ ಬೋಧಿಸಿದವರ ಸಹಿಯನ್ನು ಹಾಕಲಾಗಿದೆ. ಮಲೆನಾಡು ಭಾಗದಲ್ಲಿ ಕಾಣಸಿಗುವ ಈ ಮಂತ್ರಮಾಂಗಲ್ಯ ಪರಿಕಲ್ಪನೆ ಮಂಗಳೂರಿನಲ್ಲಿ ಅತೀ ಅಪರೂಪಕ್ಕೆ ನಡೆದಿದ್ದು, ಜನರಲ್ಲಿ ಮಂತ್ರ ಮಾಂಗಲ್ಯ ಎಂದರೇನು? ಅಂತಾ ತಿಳಿಯುವ ಕುತೂಹಲ ಮೂಡಿಸಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications