ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ನಗ್ನ ಚಿತ್ರ ತೋರಿಸಿ ಬೆದರಿಕೆ

ಮಂಗಳೂರು, ಆಗಸ್ಟ್ 9; ಧಾರ್ಮಿಕವಾಗಿ ಪರಮ ಪಾವಿತ್ರ್ಯವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗ ಶಿಕ್ಷಕನೊಬ್ಬರ ನೀಚ ಕೃತ್ಯ ಬಯಲಿಗೆ ಬಂದಿದೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಶಿಕ್ಷಕ ನಗ್ನ ಚಿತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದು ಸಹ ಬಹಿರಂಗವಾಗಿದ್ದು, ಸ್ಥಳೀಯರು ಶಿಕ್ಷಕನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದ ಪ್ರೌಢ ಶಾಲಾ ಶಿಕ್ಷಕ ಗುರುರಾಜ್ ಇಂತಹ ನೀಚ ಕೃತ್ಯ ಮಾಡಿದ ಆರೋಪಿ. ತನ್ನ ಶಾಲೆಯ ವಿದ್ಯಾರ್ಥಿನಿ ಮೇಲೆ ಸತತ ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡಿರುವ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.

ಮಕ್ಕಳು ಎಳೆ ಪ್ರಾಯಕ್ಕೆ ಬಂದಾಗ ಹೆತ್ತವರು ಮಕ್ಕಳನ್ನು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಾರೆ. ಹದಿಹರೆಯದ ಮಕ್ಕಳು ಎಲ್ಲಿ ತಪ್ಪು ದಾರಿ ಹಿಡಿಯುತ್ತಾರೆ? ಎನ್ನುವ ಭಯ ಹೆತ್ತವರನ್ನು ಕ್ಷಣ ಕ್ಷಣಕ್ಕೂ ಕಾಡುತ್ತಿರುತ್ತದೆ. ಸ್ಪೆಷಲ್ ಕ್ಲಾಸ್ ಅಂತಾ ಹೋದ ಮಕ್ಕಳು ಮನೆಗೆ ಐದು ನಿಮಿಷ ತಡವಾಗಿ ಬಂದರೂ ಹೆತ್ತವರ ಎದೆ ಢವಢವ ಅಂತಾ ಹೊಡೆದುಕೊಳ್ಳುತ್ತದೆ.

Dakshina Kannada High School Student Raped Teacher Arrested

ಇಂತಹ ಪರಿಸ್ಥಿತಿಯ ನಡುವೆ ಸುಬ್ರಹ್ಮಣ್ಯದ ಕುಗ್ರಾಮದ ಫ್ರೌಢ ಶಾಲೆಯ ವಿದ್ಯಾರ್ಥಿನಿ ಶಿಕ್ಷಕನ ಮನೆಗೆ ಪ್ರಾಜೆಕ್ಟ್ ವರ್ಕ್ ಸಲುವಾಗಿ ಹೋಗುತ್ತಿದ್ದಳು. ಹೆತ್ತವರೂ ಶಿಕ್ಷಕನ ಮನೆಯಲ್ಲಿ ಕ್ಲಾಸ್ ನಡೆಯುವುದರಿಂದ ನಿರಾತಂಕವಾಗಿದ್ದರು. ಮಗಳು ಚೆನ್ನಾಗಿ ಓದಿ ವಿದ್ಯಾವಂತೆ ಆಗುತ್ತಾಳೆ ಎಂಬ ಆಶಾವಾದ ಹೆತ್ತವರಲ್ಲಿತ್ತು. ಆದರೆ ಈಗ ವಿದ್ಯಾರ್ಥಿನಿ ಹೇಳಿರುವ ಭಯಾನಕ ಸತ್ಯ ಹೆತ್ತವರನ್ನು ದಂಗು ಬಡಿಸಿದೆ.

ಮೂರು ವರ್ಷಗಳ‌ ಕಾಲ ತಾನು ಶಿಕ್ಷಕನ ಮನೆಯಲ್ಲಿ ಅನುಭವಿಸಿದ್ದ ಕರಾಳತೆಯನ್ನು ವಿದ್ಯಾರ್ಥಿನಿ ಈಗ ಪೋಷಕರ ಮುಂದೆ ತೆರೆದಿಟ್ಟಿದ್ದು, ಪೋಷಕರಿಗೆ ಆಕಾಶವೇ ಧರೆಗುರುಳಿದಂತಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ದೂರು ನೀಡಿದ್ದು, ಕಾಮುಕ ಶಿಕ್ಷಕನ ಮುಖವಾಡ ಕಳಚಿ ಬಿದ್ದಿದೆ.

ಸುಬ್ರಹ್ಮಣ್ಯ ಸರ್ಕಾರಿ ಫ್ರೌಢ ಶಾಲೆಯ ಶಿಕ್ಷಕ ಗುರುರಾಜ್ ಮೂಲತಃ ರಾಯಚೂರು ಜಿಲ್ಲೆಯವನು. ಹಲವು ವರ್ಷಗಳಿಂದ ಸುಬ್ರಹ್ಮಣ್ಯ ಫ್ರೌಢ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಮೃದು ಮಾತು, ಹಿತ-ಮಿತವಾದ ನಡವಳಿಕೆಯಿಂದ ಬೇಗನೇ ಎಲ್ಲರ ಮನಸ್ಸನ್ನೂ ಕದ್ದಿದ್ದ. ಆದರೆ ಈಗ ಶಿಕ್ಷಕ ಗೋಮುಖ ವ್ಯಾಘ್ರ ಅನ್ನೋದು ಗೊತ್ತಾಗಿದೆ.

2018ರಿಂದ ಸುಬ್ರಹ್ಮಣ್ಯ ನಿವಾಸಿಯಾದ ವಿದ್ಯಾರ್ಥಿನಿಯನ್ನು ಗುರುರಾಜ್ ಮನೆಗೆ ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಕರೆಸಿಕೊಳ್ಳುತ್ತಿದ್ದ. ಆದರೆ ಮೂರು ವರ್ಷದಲ್ಲಿ ಶಿಕ್ಷಕ ವಿದ್ಯಾರ್ಥಿನಿ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿರುವ ವಿಚಾರ ಈಗ ವಿದ್ಯಾರ್ಥಿನಿಯಿಂದ ಬಯಲಾಗಿದೆ. ಅತ್ಯಾಚಾರದ ನಂತರ ವಿದ್ಯಾರ್ಥಿನಿ ಬೆತ್ತಲೆ ಫೋಟೋ ತೆಗೆಯುತ್ತಿದ್ದ.

ಪೋಟೋ ತೆಗೆದು ಮನೆಯಿಂದ ಹಣ ತರುವಂತೆ ಒತ್ತಾಯ ಹೇರುತ್ತಿದ್ದ. ಹಣ ತರದಿದ್ದರೆ ಫೋಟೋ ಬಯಲು ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ. ಮಾನ ಹರಾಜಾಗುವ ಭಯದಿಂದ ವಿದ್ಯಾರ್ಥಿನಿ ಇಷ್ಟು ದಿನಗಳ ಕಾಲ ಸುಮ್ಮನಿದ್ದು, ಈಗ ಎಲ್ಲವನ್ನೂ ಪೋಷಕರ ಮುಂದೆ ಹೇಳಿದ್ದಾಳೆ.

ವಿದ್ಯಾರ್ಥಿನಿಗೆ ಗರ್ಭ ಧರಿಸದಿರುವಂತೆ ಔಷಧಗಳನ್ನು ಸ್ವತಃ ಶಿಕ್ಷಕನೇ ನೀಡುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕನ ಕಾಟ ಮತ್ತೆ ಹೆಚ್ಚಾದ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ಹೆತ್ತವರ ಮುಂದೆ ಎಲ್ಲವನ್ನೂ ಹೇಳಿದ್ದಾಳೆ. ಮೂಲಗಳ ಮಾಹಿತಿಯ ಪ್ರಕಾರ ಶಿಕ್ಷಕನ ಈ ಎಲ್ಲಾ ಕೆಲಸಗಳಿಗೆ ಆತನ ಹೆಂಡತಿಯೇ ಸಾಥ್ ನೀಡುತ್ತಿದ್ದಳು ಎಂಬ ವಿಚಾರವೂ ಬಯಲಿಗೆ ಬಂದಿದೆ.

ಸುಬ್ರಹ್ಮಣ್ಯ ಠಾಣೆಯಲ್ಲಿ ವಿದ್ಯಾರ್ಥಿನಿಯ ತಾಯಿ ದೂರು ನೀಡುತ್ತಿದ್ದಂತೆಯೇ ಸುಬ್ರಹ್ಮಣ್ಯ ಪೊಲೀಸರು ಕಾಮುಕ ಶಿಕ್ಷಕನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸುಳ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಿದ್ಯಾರ್ಥಿನಿಯಿಂದ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದು, ಆರೋಪಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಊರಿನ ಜನರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+