Kukke Subrahmanya: ಮಳೆ ನೀರಿನಲ್ಲಿ ಮುಳುಗಿದ ಕುಕ್ಕೆಯ ಕುಮಾರಧಾರ ಸ್ನಾನಘಟ್ಟ
ಮಂಗಳೂರು ಜೂನ್ 27: ಕಳೆದ ಕೆಲ ದಿನಗಳಿಂದ ಕೊಂಚ ವಿರಾಮ ಪಡೆದಿದ್ದ ಮಳೆ ಈಗ ಮತ್ತೆ ಚುರುಕುಗೊಂಡಿದೆ. ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಕುಕ್ಕೆಯ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಕಳೆದೆರೆಡು ದಿನಗಳಿಂದ ಮೋಡ ಹಾಗೂ ಮಳೆ ಸುಬ್ರಹ್ಮಣ್ಯದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿದೆ. ಜೋರು ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡು ನದಿ ತೀರದಲ್ಲಿ ಆತಂಕ ಹೆಚ್ಚಾಗಿದೆ.

ಕುಮಾರಧಾರದ ಉಪನದಿಯಾದ ದರ್ಪಣತೀರ್ಥವು ತುಂಬಿ ಹರಿದು ದರ್ಪಣತೀರ್ಥ ಸೇತುವೆಯು ಮುಳುಗಡೆಗೊಂಡಿತ್ತು. ಇದರಿಂದಾಗಿ ಸುಬ್ರಹ್ಮಣ್ಯ-ಪುತ್ತೂರು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕುಕ್ಕೆಯ ಪರಿಸರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನದಿ ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ.
ಮಲೆನಾಡು ಪ್ರದೇಶದಲ್ಲಿ ಸುರಿದ ಮಳೆಯ ಪರಿಣಾಮ ಕುಮಾರಧಾರ ನದಿಯು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಕುಮಾರಧಾರ ಸ್ನಾನಘಟ್ಟವು ಮುಂಜಾನೆ ಮುಳುಗಡೆಗೊಂಡಿದೆ. ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯ ನೀರಿನಿಂದ ಅವೃತಗೊಂಡಿದೆ. ಅಲ್ಲದೆ, ಸ್ನಾನಘಟ್ಟದಲ್ಲಿದ್ದ ದೇವರ ಅವಭರತ ಕಟ್ಟೆಯು ಭಾಗಶ: ಮುಳುಗಡೆಗೊಂಡಿದೆ, ಕುಮಾರಧಾರ ನದಿಯಲ್ಲಿ ಪ್ರವಾಹ ಅಧಿಕಗೊಂಡು ಕುಲ್ಕಂದ, ಪರ್ವತಮುಖಿ ಪರಿಸರದಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ.
ಮಳೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುವ ಭಕ್ತರಿಗೂ ತೊಂದರೆ ಆಗಿದೆ. ಕಳೆದ ರಾತ್ರಿ ಜೋರಾಗಿ ಸುರಿದ ಮಳೆಗೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಕುಮಾರಧಾರ ಕಿಂಡಿ ಆಣೆಕಣ್ಣು ಮುಳಗಡೆಯಾಗಿದೆ. ನದಿ ಉಕ್ಕಿ ಹರಿಯುತ್ತಿದ್ದರಿಂದ ಭಕ್ತರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಅಲ್ಲದೆ ನದಿತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿ, ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಭಕ್ತರು ಜಾಗರೂಕರಾಗಿರುವಂತೆ ಸೂಚನೆ ನೀಡಿ ಫಲಕಗಳನ್ನು ಹಾಕಲಾಗಿದೆ.
ಕರ್ನಾಟಕದ ಪ್ರಮುಖ ಮತ್ತು ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಒಂದಾಗಿದೆ. ಈ ದೇವಸ್ಥಾನ ಆಧ್ಯಾತ್ಮಿಕ ಪ್ರಾಮುಖ್ಯತೆಯಿಂದಾಗಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಹಿಂದೂ ದೇವಾಲಯ.
ಈ ದೇವಾಲಯವು ನಾಗದೋಷಕ್ಕೆ ಸಂಬಂಧಿಸಿದ ಆಚರಣೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ದೇವಾಲಯಕ್ಕೆ ಸಂಬಂಧಿಸಿದ ಪುರಾಣಗಳು ತರ್ಕವನ್ನೇ ಮೀರಿಸುವಂತಹುದ್ದಾಗಿದೆ. ಬನ್ನಿ, ಇಂದಿನ ಓದಿನಲ್ಲಿ 5,000 ವರ್ಷಕ್ಕೂ ಅಧಿಕ ಹಿನ್ನೆಲೆಯನ್ನು ಹೊಂದಿದೆ.
ಈ ದೇವಾಲಯವು ಶಿವ ಪಾರ್ವತಿಯ ಪುತ್ರ ಕಾರ್ತಿಕೇಯನಿಗೆ ಸಮರ್ಪಿತವಾಗಿದ್ದು ಇಲ್ಲಿ ಕಾರ್ತಿಕೇಯನನ್ನು ಸುಬ್ರಹ್ಮಣ್ಯ ಎಂದು ಪೂಜಿಸಲಾಗುತ್ತದೆ. ದೈವಿಕ ಸರ್ಪ ವಾಸುಕಿ ಮತ್ತು ಇತರೆ ಸರ್ಪಗಳು ಗರುಡನಿಂದ ಬೆದರಿಕೆಗೆ ಒಳಗಾದಾಗ ಸುಬ್ರಹ್ಮಣ್ಯನ ಆಶೀರ್ವಾದದೊಂದಿಗೆ ಆಶ್ರಯ ಪಡೆದಿರುವ ಕಥೆಯನ್ನು ಇದು ಹೇಳುತ್ತದೆ.












Click it and Unblock the Notifications