ಮಂಗಳೂರಿನಲ್ಲಿ ಸಂಜೆ ಪಾಲಿಟೆಕ್ನಿಕ್ ಆರಂಭ
ಮಂಗಳೂರು : ಮಂಗಳೂರಿನ ಸರಕಾರಿ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು 'ಎಜ್ಯುಕೇಶನ್ ಹಬ್' ಎಂದೇ ಖ್ಯಾತಿ ಪಡೆದಿದ್ದು, ಇದೀಗ ಹೊಸದೊಂದು ಸೇರ್ಪಡೆ ಎಂಬಂತೆ ಸಂಜೆ ಪಾಲಿಟೆಕ್ನಿಕ್ ಮಂಜೂರಾಗಿದೆ. ಇದು ರಾಜ್ಯದಲ್ಲೇ ಮೂರನೇ ಸರಕಾರಿ ಪಾಲಿಟೆಕ್ನಿಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಸಂಜೆ ಪಾಲಿಟೆಕ್ನಿಕ್ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ.
ರಾಜ್ಯ ತಾಂತ್ರಿಕ ವಿಭಾಗವು ಸಂಜೆ ಪಾಲಿಟೆಕ್ನಿಕ್ ಗೆ ಮಂಜೂರಾತಿ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷ ೨೦೧೭-೧೮ ನೇ ಸಾಲಿನ ಮೂರೂ ವರ್ಷಗಳ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಹಾಗೂ ಮೆಕಾನಿಕ್ ಇಂಜಿನಿಯರಿಂಗ್ ಡಿಪ್ಲೊಮೊ ಕೋರ್ಸುಗಳನ್ನು ಕಲಿಯಲು ಅವಕಾಶ ನೀಡಲಾಗುತ್ತದೆ. [ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಕಿರಣ್ ಕನ್ಸಲ್ಟೆನ್ಸಿ ಎಜುಕೇಷನ್ ಸೊಸೈಟಿ]

ಎಲ್ಲೆಲ್ಲ ಸಂಜೆ ಪಾಲಿಟೆಕ್ನಿಕ್ ಇದೆ?: ರಾಜ್ಯದ ಮೊದಲ ಸಂಜೆ ಪಾಲಿಟೆಕ್ನಿಕ್ ಬೆಂಗಳೂರಿನ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯ ಹಾಗೂ ಎರಡನೇ ಸಂಜೆ ಪಾಲಿಟೆಕ್ನಿಕ್ ಮೈಸೂರಿನಲ್ಲಿದೆ. ಇದೀಗ ಮಂಗಳೂರಿನದು ರಾಜ್ಯದಲ್ಲೇ ಮೂರನೆಯದಾಗಿದೆ.
ಸರಕಾರಿ ಸಂಜೆ ಪಾಲಿಟೆಕ್ನಿಕ್ ನಿಂದ ಮಂಗಳೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮತ್ತೊಂದು ಗರಿ ಬಂದಂತಾಗಿದೆ. ಬಹಳಷ್ಟು ಮಂದಿ ಕಲಿಯಲು ಆಸಕ್ತಿ ಹೊಂದಿದ್ದರೂ ಆರ್ಥಿಕ ಸ್ಥಿತಿ ಅನುವು ಮಾಡಿಕೊಡುವುದಿಲ್ಲ, ಆದರೆ ಈ ರೀತಿಯ ಸಂಜೆ ಕಾಲೇಜುಗಳಿಂದ ಬೆಳಗ್ಗಿನ ಜಾವ ಓದಲಿಚ್ಛಿಸುವ ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಹೋಗಲು ಅನುವು ಮಾಡಿಕೊಟ್ಟಂತಾಗುತ್ತದೆ. ಬೆಳಗ್ಗೆ ಕೆಲಸ ಮಾಡಿ ಸಂಜೆ ಕಾಲೇಜಿಗೆ ಬರಬಹುದು. ವಿದ್ಯಾಭ್ಯಾಸ ಮುಂದುವರಿಸಬಹುದು.

ಈಗಾಗಲೇ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ನ ಪ್ರಿನ್ಸಿಪಾಲ್ ಅವರಿಗೆ ಬೆಂಗಳೂರಿನ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕರಿಂದ ಪತ್ರವೊಂದು ಬಂದಿದ್ದು, ಅದರಲ್ಲಿ ಸಂಜೆ ಪಾಲಿಟೆಕ್ನಿಕ್ ಗೆ ಬೇಕಾಗುವ ಸಿಬ್ಬಂದಿಗಳ ಕುರಿತು ಪ್ರಸ್ತಾಪ ಸಲ್ಲಿಸುವಂತೆ ಸೂಚಿಸಿದ್ದಾರೆ. ೨೦೧೭-೧೮ ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವಂತೆಯೂ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.












Click it and Unblock the Notifications