Mangalore Bank Robbery: ದರೋಡೆ ಯೋಜನೆ ತಯಾರಾಗಿದ್ದು ಜೈಲಿನಲ್ಲಿ!
ಮಂಗಳೂರು, ಜನವರಿ 27: ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ. ಸಿ. ರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 18.314 ಕೆಜಿ ಚಿನ್ನ ಮತ್ತು 3.80 ಲಕ್ಷ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ದರೋಡೆ ಪ್ರಕರಣದ ಸಂಚು ರೂಪಿಸಿದ್ದು ಜೈಲಿನಲ್ಲಿ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಈ ದರೋಡೆ ಪ್ರಕರಣದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮುರುಗಂಡಿ ಥೇವರ್ (36), ಮುಂಬೈನ ಯೋಸುವ ರಾಜಂದ್ರನ್ (35) ಮತ್ತು ಮುಂಬೈನ ಕಣ್ಣನ್ ಮಣಿ (36) ಬಂಧಿಸಲಾಗಿದೆ. ಮುರುಗಂಡಿಗೆ ಆಶ್ರಯ ನೀಡಿದ್ದ ಆತನ ತಂದೆ ಎಂ. ಷಣ್ಮುಗಸುಂದರಂ ಸಹ ಬಂಧಿಸಲಾಗಿದೆ. ಶಶಿ ಥೇವರ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆದಿದೆ.

ಜೈಲಿನಲ್ಲಿ ಒಟ್ಟಿಗಿದ್ದರು: 2016ರಲ್ಲಿ ಮುರುಗಂಡಿ ಥೇವರ್, ಯೋಸುವ ರಾಜಂದ್ರನ್ ಮತ್ತು ಕಣ್ಣನ್ ಮಣಿ ಮುಂಬೈನ ತಲೋಜಾ ಜೈಲಿನಲ್ಲಿ 2016ರಲ್ಲಿ ಒಟ್ಟಿಗಿದ್ದರು. ಕೆ. ಸಿ. ರೋಡ್‌ನ ಬ್ಯಾಂಕ್‌ನಲ್ಲಿ ಅಪಾರ ಪ್ರಮಾಣದ ಚಿನ್ನ ಇರುವ ಬಗ್ಗೆ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಇರುವ ಲೋಪದ ಕುರಿತು ಶಶಿ ಥೇವರ್ ಮೂವರಿಗೂ ಮಾಹಿತಿ ನೀಡಿದ್ದ.
ಆರು ತಿಂಗಳ ಮೊದಲು ಈ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿದ್ದು, ಸ್ಥಳೀಯರ ಸಹಕಾರ ಇರುವ ಕುರಿತು ಅನುಮಾನವಿದೆ. ಪೊಲೀಸರು ಶಶಿ ಥೇವರ್ ಸೇರಿದಂತೆ ನಾಲ್ವರಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ. ದರೋಡೆಯಾಗಿದ್ದು 18.674 ಕೆಜಿ ಚಿನ್ನ ಮತ್ತು 11.67 ಲಕ್ಷ ರೂ. ನಗದು. ಸದ್ಯ ಸಿಕ್ಕಿರುವುದು 18.314 ಕೆಜಿ ಚಿನ್ನ ಮತ್ತು 3.80 ಲಕ್ಷ ನಗದು.
2024ರ ಆಗಸ್ಟ್‌ನಲ್ಲಿ ಮುರುಗಂಡಿ ಥೇವರ್ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ. ಸಿ. ರೋಡ್ ಶಾಖೆಗೆ ಭೇಟಿ ನೀಡಿದ್ದ. ಬಳಿಕ ಅವನ ತಂಡದ ಸದಸ್ಯರು ಅಕ್ಟೋಬರ್‌ನಲ್ಲಿ ಆಗಮಿಸಿದ್ದರು. ನವೆಂಬರ್ 27ರಂದು ಮುರುಗಂಡಿ ಥೇವರ್, ಯೋಸುವ ರಾಜಂದ್ರನ್ ಮತ್ತೆ ಬ್ಯಾಂಕಿಗೆ ಬಂದಿದ್ದರು. ಶುಕ್ರವಾರ ಜನರ ಓಡಾಟ ಕಡಿಮೆ ಇರುವ ಕುರಿತು, ಅದೇ ದಿನ ದರೋಡೆ ನಡೆಸುವ ಕುರಿತು ಸಂಚು ಮಾಡಿದ್ದರು.
ಜನವರಿ 16ರಂದು ಮುರುಗಂಡಿ ಥೇವರ್ ಮೂವರ ಜೊತೆ ಫಿಯೆಟ್ ಕಾರಿನಲ್ಲಿ, ಕಣ್ಣನ್ ಮಣಿ ಮತ್ತು ಇತರ ಆರೋಪಿಗಳು ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ದರೋಡೆ ಬಳಿಕ ಮುರುಗಂಡಿ ಥೇವರ್, ಯೋಸುವ ರಾಜಂದ್ರನ್ ಕಾರಿನಲ್ಲಿ ಕೇರಳಕ್ಕೆ, ಉಳಿದವರು ಆಟೋದಲ್ಲಿ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಮುಂಬೈಗೆ ಪರಾರಿಯಾಗಿದ್ದರು.
ದರೋಡೆಗೆ ಬಳಕೆ ಮಾಡಿದ ಕಾರು ಮುಂಬೈನ ನೋಂದಣಿ ಸಂಖ್ಯೆಯನ್ನು ಹೊಂದಿತ್ತು. ಈ ಬಗ್ಗೆ ಸುಳಿವು ಪಡೆದು ಪೊಲೀಸರು ತನಿಖೆ ಮುಂದುವರೆಸಿದ್ದರು. ಅತಿ ಹೆಚ್ಚು ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದುಕೊಂಡ ರಾಜ್ಯದ 2ನೇ ಪ್ರಕರಣ ಇದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications