ನವರಾತ್ರಿ ಬಂತಂದ್ರೆ ಸಾಕು ಕಡಲ ನಗರಿಯಲ್ಲಿ 'ಪಿಲಿ ಡ್ಯಾನ್ಸ್' ಸಂಭ್ರಮ
ಮಂಗಳೂರು, ಸೆಪ್ಟೆಂಬರ್ 21 : ನವರಾತ್ರಿ, ಮಹಾನವಮಿ ಎಂದರೆ ಸಾಕು ಕರಾವಳಿ ಜನರಿಗೆ ಥಟ್ಟನೆ ನೆನಪಾಗುವುದು 'ಪಿಲಿ' ಕುಣಿತ (ಹುಲಿ ಕುಣಿತ). ನವರಾತ್ರಿ ಆರಂಭವಾಗುತ್ತಿದ್ದಂತೆ ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ ಕಾಣಬಹುದು,
ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಯಲ್ಲಿ ಹುಲಿ ಕುಣಿತ ಆಕರ್ಷಣೆಯಾಗಿರುತ್ತದೆ.
ಮಂಗಳೂರಿನಲ್ಲಿ ಹುಲಿವೇಷದ 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ 25 ವೇಷಧಾರಿಗಳವರೆಗೂ ಇರುತ್ತಾರೆ. ಕರಾವಳಿಯ ಹುಲಿವೇಷ ವಿಶಿಷ್ಟ. ತಾರ್ಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆ ಇತರೆಡೆಗಿಂಥ ಇಲ್ಲಿ ಭಿನ್ನ.
ಇಲ್ಲಿನ ದಸರಾದಲ್ಲಿ 'ಪಿಲಿ' ಡ್ಯಾನ್ಸ್ ವಿಶೇಷವಾಗಿದ್ದು, ಅದರ ವಿಶೇಷತೆಗಳೇನು ಎನ್ನುವುದನ್ನು ಮುಂದೆ ಓದಿ.

ಮಂಗಳೂರು ದಸರಾದಲ್ಲಿ "ಪಿಲಿ" ಸ್ಪೆಷಲ್
ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುವ ಗಜಪಡೆಗಳನ್ನು ನೋಡುವುದೇ ಒಂದು ಹಬ್ಬ. ದಸರಾ ಸಂದರ್ಭ ಮೈಸೂರು ನಗರ ಹೇಗೆ ದೀಪಾಲಂಕಾರದಿಂದ ಕಂಗೊಳಿಸುತ್ತದೆಯೋ ಅದೇ ರೀತಿ ಮಂಗಳೂರಿನ ಬೀದಿಗಳೆಲ್ಲವೂ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಕಡಲ ನಗರಿಯಲ್ಲಿ "ಮಂಗಳೂರು ಪಿಲಿ(ಹುಲಿ)" ಸ್ಪೆಷಲ್. ತುಳುವಿನಲ್ಲಿ ಹುಲಿಯನ್ನು "ಪಿಲಿ" ಅಂತಾ ಕರೀತಾರೆ, ಆದ್ದರಿಂದ ನವರಾತ್ರಿಯ ಒಂಭತ್ತು ದಿನಗಳಂದು ಬೇರೆ ಬೇರೆ ಪಿಲಿ ತಂಡಗಳು ತಮ್ಮ ಕಸರತ್ತು ತೋರಿಸುತ್ತವೆ. ಈ ಮಂಗಳೂರು ದಸರಾದಲ್ಲಿ "ಪಿಲಿ" ಸ್ಪೆಷಲ್ ಆಗಿದೆ.

ಸತತ ಹತ್ತು ವರ್ಷದಿಂದ ಈ ಹುಲಿ ತಂಡ ಭಾಗಿ
ಬಳ್ಳಾಲ್ ಭಾಗ್ ಫ್ರೆಂಡ್ಸ್ ರಿ. ನೇತೃತ್ವದಲ್ಲಿ ಸತತ ಹತ್ತು ವರ್ಷಗಳಿಂದ ಹುಲಿ ತಂಡ ಭಾಗವಹಿಸುತ್ತಿದೆ. ಈ ತಂಡದಿಂದ ಪ್ರತಿ ವರ್ಷ ಸುಮಾರು 80 ಹುಲಿಗಳು ಭಾಗವಹಿಸುತ್ತಿದ್ದು, ಇದರ ನೇತೃತ್ವವನ್ನು ಪ್ರವೀಣ್ ಶೆಟ್ಟಿ, ರಕ್ಷಿತ್ ಕೊಟ್ಟಾರಿ, ಕೀರ್ತಿರಾಜ್ ಪೂಜಾರಿ ನಡೆಸುತ್ತಿದ್ದಾರೆ. ತಮ್ಮದೇ ಸ್ವಂತ ಖರ್ಚಿನಲ್ಲಿ ಈ ಹುಲಿ ತಂಡ ಭಾಗವಹಿಸುತ್ತಿದ್ದು, ಇವರಿಗೆ ಬಂದ ಹಣದಿಂದ ಅನಾಥಶ್ರಮ, ಮಕ್ಕಳಿಗೆ ವಿದ್ಯಾಭ್ಯಾಸ ಹೀಗೆ ಹತ್ತು ಹಲವು ಸಾಮಾಜಿಕ ಕಾರ್ಯಗಳಿಗೆ ನೀಡುತ್ತಾರೆ.

ಆಕರ್ಷಕ ಬಣ್ಣಗಳಲ್ಲಿ ಕಂಗೊಳಿಸುವ ಹುಲಿಗಳು
ಕಾಡಿನಲ್ಲಿ ಸಿಗುವ ರಿಯಲ್ ಹುಲಿಗಳಿಗಿಂತ ಭಿನ್ನ ವಿಭಿನ್ನ ಹುಲಿಗಳು ಕಾಣಬೇಕೆಂದ್ರೆ ನೀವು ಮಂಗಳೂರಿಗೆ ಬರಲೇಬೇಕು. ಅದರಲ್ಲೂ ಬಳ್ಳಾಲ್ ಭಾಗ್ ಫ್ರೆಂಡ್ಸ್ ತಂಡದಲ್ಲಿ ಕಾಣ ಸಿಗುವ ಹುಲಿಗಳು ಅಂದ್ರೆ ಪಟ್ಟೆಹುಲಿ, ಚಿಟ್ಟೆ ಹುಲಿ, ಬೆಂಗಾಲಿ ಹುಲಿ, ಬ್ಲ್ಯಾಕ್ ಟೈಗರ್ ಹೀಗೆ ಹತ್ತು ಹಲವು ನವನವೀನ ಹುಲಿಗಳು ಜನರ ಕಣ್ಮನ ಸೆಳೆಯುತ್ತವೆ. ಜತೆಗೆ ಕಾಡಿನಲ್ಲಿ ಕೇವಲ ಬೇಟೆಯಾಡಿ ಸುತ್ತಾಡುವ ಹುಲಿಗಳು ಕಂಡ್ರೆ ಮಂಗಳೂರಿನ ಹುಲಿಗಳು ವಿವಿಧ ಸ್ಟಂಟ್ ನಡೆಸುವ ಮೂಲಕ ಮೈ ರೋಮಾಂಚನಗೊಳ್ಳುವಂತೆ ಮಾಡುತ್ತದೆ. ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳು ಹೇಗೆ ಕಂಗೊಳಿಸುತ್ತವೆಯೋ ಅದೇ ರೀತಿ ಇಲ್ಲಿನ ಹುಲಿಗಳು ಬೇರೆ ಬೇರೆ ಆಕರ್ಷಕ ಬಣ್ಣಗಳಲ್ಲಿ ಕಂಗೊಳಿಸುತ್ತವೆ.

ಸರ್ಕಾರದ ಧನ ಸಹಾಯ ಅಗತ್ಯ
ಈ ಹಬ್ಬ ಇಡೀ ತುಳುನಾಡಿಗೆ ವಿಶಿಷ್ಟ ಹಬ್ಬ ಆದರೆ ಕೆಲವು ತಂಡಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವುದರಿಂದ ಎಷ್ಟೋ ತಂಡಗಳು ಈ ಕಾರ್ಯಕ್ರಮದಿಂದ ಹೊರಗುಳಿಯುವಂತಾಗಿದೆ. ಇಂತಹ ತಂಡಗಳಿಗೆ ರಾಜ್ಯ ಸರಕಾರ ಅಥವಾ ಜಿಲ್ಲಾಡಳಿತ ಧನ ಸಹಾಯ ನೀಡುವ ಮೂಲಕ ತುಳುನಾಡಿನ "ಪಿಲಿ ನಲಿಕೆ" ಸಂಸ್ಕøತಿಯನ್ನು ಉಳಿಸುವತ್ತ ಹೆಜ್ಜೆ ಇಡಬೇಕಾಗಿದೆ ಎನ್ನುವುದು ತುಳುವಿಗರ ಅಭಿಮತ.












Click it and Unblock the Notifications