ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆ ಹೀನಾಯ ಪರಿಸ್ಥಿತಿ: ಖಾದರ್ ನೀಡಿದ ಕಾರಣವೇನು?
ಮಂಗಳೂರು, ಸೆಪ್ಟೆಂಬರ್ 03: ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಳ್ಳಾಲದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ವಿಮರ್ಶೆ ನಡೆಸಲಾಗುತ್ತಿದೆ. ಉಳ್ಳಾಲ ನಗರಸಭೆಗೆ ನಡೆದ ಚುನಾವಣೆಯಲ್ಲಿ ಜನ ಅವರ ತೀರ್ಪು ನೀಡಿದ್ದಾರೆ. ಜನ ಯಾರಿಗೂ ಸ್ಪಷ್ಟ ಬಹುಮತವನ್ನು ನೀಡಿಲ್ಲ. ಉಳ್ಳಾಲದಲ್ಲಿ ಕಾಂಗ್ರೆಸ್ ನಿರೀಕ್ಷಿಸಿದಷ್ಟು ಸ್ಥಾನ ಬಂದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿರುವುದರಲ್ಲಿ ಪಕ್ಷದ ಕೆಲವು ನ್ಯೂನತೆ ಕಾರಣ ಇರಬಹುದು. ಪಕ್ಷದ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಉಳ್ಳಾಲದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನ ಲಭ್ಯವಾಗಿಲ್ಲ.

ಹಾಗಂತ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೂ, ಚಿಂತೆ ಇಲ್ಲ. ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳದವರ ಜೊತೆ ಸೇರಿ ಅಧಿಕಾರ ನಡೆಸಲ್ಲ. ಉಳ್ಳಾಲ ನಗರಸಭೆ ಗೆ ಸಂಬಂಧಿಸಿದಂತೆ ಎಸ್ ಡಿಪಿಐ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಂಟ್ವಾಳ ಪುರಸಭೆಯಲ್ಲಿಯೂ ಅತಂತ್ರ ಸ್ಥಿತಿ ಇದೆ. ಇಲ್ಲಿ ಯಾವ ರೀತಿ ? ಯಾರೊಂದಿಗೆ ಹೊಂದಾಣಿಕೆ? ಮೈತ್ರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಹಿರಿಯರೊಡನೆ ಕುಳಿತು ನಿರ್ಣಯ ಕೈಗೊಳ್ಳಲಿದ್ದಾರೆ.
ಬಂಟ್ವಾಳದಲ್ಲಿ ಎಸ್ ಡಿ ಪಿ ಐ ನಿರ್ಣಾಯಕ ಆಗಿದ್ದು ಬಿಜೆಪಿ ಅಥವಾ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬೇಕಿದ್ದರೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಖಾದರ್ ತಿಳಿಸಿದರು.











Click it and Unblock the Notifications