ಕೇರಳದಲ್ಲಿ ಗಗನಕ್ಕೇರಿದ ಪೆಟ್ರೋಲ್ ದರ: ಗಡಿಭಾಗದ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದ ಕೇರಳಿಗರು
ಮಂಗಳೂರು, ಏಪ್ರಿಲ್ 3: ಕೇರಳದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಕೇರಳದಲ್ಲಿ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸೆಸ್ ದರ ಜಾಸ್ತಿ ಮಾಡಿದ ಹಿನ್ನಲೆಯಲ್ಲಿ ಕೇರಳ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಮತ್ತೆ ಏರಿಕೆಯನ್ನು ಕಂಡಿದೆ. ಕರ್ನಾಟಕ ರಾಜ್ಯಕ್ಕಿಂತ ಕೇರಳದಲ್ಲಿ ಪಟ್ರೋಲ್ ದರ ಏಳು ರೂಪಾಯಿ ಮತ್ತು ಡಿಸೇಲ್ ದರ ಹತ್ತು ರೂಪಾಯಿ ದುಬಾರಿಯಾಗಿದೆ.
ಈ ಹಿನ್ನಲೆಯಲ್ಲಿ ಕೇರಳದ ಕರ್ನಾಟಕದ ಗಡಿ ಭಾಗದ ಪೆಟ್ರೋಲ್ ಬಂಕ್‌ಗಳಲ್ಲಿ ಕೇರಳದ ಜನರು ಮುಗಿಬಿದ್ದಿದ್ದಾರೆ. ಕೇರಳ ಸರ್ಕಾರ ಎಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮತ್ತೆ ಎರಡು ರೂಪಾಯಿ ಸೆಸ್ ಹೇರಿದೆ. ಕೇರಳದಲ್ಲೀಗ ಪೆಟ್ರೋಲ್ ಬೆಲೆ ಲೀಟರ್‌ಗೆ 108.48ರೂಪಾಯಿ ಆಗಿದ್ದು, ಡಿಸೇಲ್ ಗೆ 97.40ರೂಪಾಯಿ ದರವಾಗಿದೆ.

ಮಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.48 ರೂಪಾಯಿಯಾಗಿದ್ದು, ಕೇರಳಕ್ಕಿಂತ ಏಳು ರೂಪಾಯಿ ಅಗ್ಗ ದರದಲ್ಲಿ ರಾಜ್ಯದ ಪೆಟ್ರೋಲ್ ದೊರಕುತ್ತಿದೆ. ಇನ್ನು ಕೇರಳಕ್ಕಿಂತ ಹತ್ತು ರೂಪಾಯಿ ಅಗ್ಗದಲ್ಲಿ ರಾಜ್ಯದ ಡಿಸೇಲ್ ದೊರೆಯಲಿದೆ.ತೀವ್ರ ಆರ್ಥಿಕ ಮುಗ್ಗಟ್ಟು ಹಿನ್ನಲೆಯಲ್ಲಿ ಕೇರಳ ಸರ್ಕಾರ ಸೆಸ್ ದರ ಜಾಸ್ತಿ ಮಾಡಿದೆ ಎನ್ನಲಾಗಿದೆ.
ಕೇರಳದಲ್ಲಿ ತೈಲ ದರ ಏರಿಕೆ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಸುಗ್ಗಿ ಕಾಲ ಬಂದಿದೆ. ಕೇರಳ ಸರ್ಕಾರದ ವಾಹನಗಳು ಸೇರಿದಂತೆ ಕೇರಳ ನೋಂದಾಯಿತ ವಾಹನಗಳಿಂದ ರಾಜ್ಯದ ಪೆಟ್ರೋಲ್‌ಗೆ ಭಾರೀ ಬೇಡಿಕೆ ಉಂಟಾಗಿದ್ದು, ಪೆಟ್ರೋಲ್ ಬಂಕ್ ಮಾಲಿಕರು ಭರಪೂರ ಲಾಭದಲ್ಲಿದ್ದಾರೆ.
ಇನ್ನು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಮುಸ್ಲಿಂ ಲೀಗ್‌ನ ಮುಖಂಡರಾಗಿರುವ ಆಸಿಫ್, 'ಕೇರಳದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ಹೊರೆಯನ್ನು ಕೇರಳ ಸರ್ಕಾರ ಜನರ ಮೇಲೆ ಹಾಕಿದೆ. ಬಡವರ ಸರ್ಕಾರ ಎಂದು ಹೇಳಿಕೊಳ್ಳುವ ಸಿಎಂ ಪಿಣರಾಯಿ ವಿಜಯನ್ ಬಡವರ ಮೇಲೆ ಅಕ್ಷರಶಃ ದಬ್ಬಾಳಿಕೆ ಮಾಡುತ್ತಿದ್ದಾರೆ.

ಕೇರಳಕ್ಕೆ ಅತೀ ಹೆಚ್ಚಿನ ವಸ್ತುಗಳು ಆಹಾರ ಸಾಮಗ್ರಿಗಳು ಹೊರ ರಾಜ್ಯಗಳಿಂದಲೇ ಬರಬೇಕು, ಇದೀಗ ಪೆಟ್ರೋಲ್ ಮೇಲಿನ ಸೆಸ್ ಜಾಸ್ತಿಯಾದ ಹಿನ್ನೆಲೆಯಲ್ಲಿ ಆಹಾರ ವಸ್ತುಗಳಿಗೆ ಜನಪಯೋಗಿ ವಸ್ತುಗಳಿಗೆ ದರ ಜಾಸ್ತಿಯಾಗಲಿದೆ. ಇದರಿಂದ ಜನ ಮತ್ತೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ
ಮಂಗಳೂರು ನಗರದ ಜಿಲ್ಲಾ ಕಾರಾಗೃಹಕ್ಕೆ 300ರಷ್ಟು ಮಂದಿ ಪೊಲೀಸರು ದಿಢೀರ್ ದಾಳಿ ನಡೆಸಿ ತಂಬಾಕು - ಗುಟ್ಕಾ ಪ್ಯಾಕೇಟ್‌ಗಳು, ಬೀಡಿ - ಸಿಗರೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಹೊರತು ಇನ್ಯವಾ ವಸ್ತುಗಳ ಪತ್ತೆಯಾಗಿಲ್ಲ ಎನ್ನಲಾಗಿದೆ.
ಮಂಗಳೂರಿನ ಕಾರಾಗೃಹದ ಮುಂದೆ ಏಕಾಏಕಿ ಪೊಲೀಸ್ ವಾಹನಗಳು ಜಮಾಯಿಸಿದ್ದು. ವಾಹನಗಳಿಂದ ಸಾಲುಸಾಲಾಗಿ ಇಳಿದ ಪೊಲೀಸರು ಏಕಾಏಕಿ ಕಾರಾಗೃಹಕ್ಕೆ ಪ್ರವೇಶಿದ್ದಾರೆ. ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಹಾಗೂ ಉಪ ಪೊಲೀಸ್ ಆಯುಕ್ತರಾದ ಅಂಶುಕುಮಾರ್, ದಿನೇಶ್ ಕುಮಾರ್,ಎಸಿಪಿ, ಇನ್ಸ್‌ಪೆಕ್ಟರ್, ಪಿಎಸ್ಐ ಸೇರಿದಂತೆ ಮುನ್ನೂರಕ್ಕೂ ಅಧಿಕ ಪೊಲೀಸರು ದಾಳಿ ನಡೆಸಿದ್ದಾರೆ.

ಈ ದಾಳಿಯನ್ನು ರೆಗ್ಯುಲರ್ ತಪಾಸಣೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 300ರಷ್ಟು ಮಂದಿ ಒಂದುವರೆ ಗಂಟೆಯಲ್ಲಿ ಈ ತಪಾಸಣೆ ನಡೆಸಿದ್ದಾರೆ. ಆದರೆ ದಾಳಿ ವೇಳೆ ತಮಗೆ ಬೇರೇನು ಸಿಕ್ಕಿಲ್ಲ ಬರೀ ತಂಬಾಕು - ಗುಟ್ಕಾ ಪ್ಯಾಕೇಟ್ ಗಳು,ಬೀಡಿ - ಸಿಗರೇಟ್‌ಗಳು ದೊರಕಿದೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್.ಆರ್.ಜೈನ್ ತಿಳಿಸಿದ್ದಾರೆ.
ಅಧಿಕಾರಿ ಸಿಬ್ಬಂದಿ ಪ್ಲ್ಯಾನ್ ಮಾಡಿ ದಾಳಿ ನಡೆಸಿದ್ದೇವೆ. ಬೀಡಿ ಸಿಗರೇಟ್ ತಂಬಾಕು ಬಿಟ್ಟು ಬೇರೆನೂ ಸಿಕ್ಕಿಲ್ಲ. ಎಲ್ಲಾ ಅಧಿಕಾರಿ ಸಿಬ್ಬಂದಿ ಸೇರಿ 300 ಜನ ಈ ದಾಳಿ ಮಾಡಿದ್ದೇವೆ. ಜೈಲು ಅಧಿಕಾರಿಗಳು ಜೈಲಿಗೆ ಎಂಟ್ರಿಯಾಗುವ ಪ್ರತಿಯೊಬ್ಗರ ತಪಾಸಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಜೈಲ್ ಸೂಪರಿಂಟೆಂಡೆಂಟ್ ಜೊತೆಯು ಚರ್ಚೆ ಮಾಡಲಾಗಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿಯೇ ದಾಳಿ ನಡೆಸಿದ್ದೇವೆ. ಆದರೆ ಸದ್ಯಕ್ಕೆ ಈ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ. ವಿಚಾರಾಧೀನ ಕೈದಿಗಳನ್ನು ಭೇಟಿ ಮಾಡಲು ಬರುವ ಸಂದರ್ಭ ಬೀಡಿ ಸಿಗರೇಟ್ ಕೊಡುತ್ತಾರೆ. ಕಾಲ ಕಾಲಕ್ಕೆ ತಪಾಸಣೆ ನಡೆಸುತ್ತಿದ್ದರೆ ಅಕ್ರಮಕ್ಕೆ ಕಡಿವಾಣ ಬೀಳುತ್ತದೆ. ಮುಂದಿನ ದಿನಗಳಲ್ಲಿಯೂ ತಪಾಸಣೆ ಮುಂದುವರಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್.ಜೈನ್ ಹೇಳಿದ್ದಾರೆ.












Click it and Unblock the Notifications