ಮಂಗಳೂರು: ಈ ಕೇರಳಿಗನ ಕನ್ನಡ ಭಾಷಾ ಪ್ರೇಮಕ್ಕೆ ನೀವು ಫಿದಾ ಆಗುವುದಂತೂ ಗ್ಯಾರಂಟಿ
ಮಂಗಳೂರು, ನವೆಂಬರ್, 05: ಕರುನಾಡು ರಾಜ್ಯೋತ್ಸವದ ಸಂಭ್ರಮದಲ್ಲಿದೆ. ಕನ್ನಡ ತಾಯಿಗಾಗಿ ಮಿಡಿದ ಸಹಸ್ರಾರು ಸಾಧಕ ಮನಸ್ಸುಗಳು ನಮ್ಮ ಸಮಾಜದಲ್ಲಿವೆ. ಅದರಲ್ಲೂ ಈ ಸಣ್ಣ ವ್ಯಾಪಾರಿ, ಕೇರಳ ಗಡಿನಾಡ ಕನ್ನಡಿಗನ ಕನ್ನಡ ಭಾಷಾ ಪ್ರೇಮವನ್ನು ಕಂಡರೆ ನೀವು ಆಶ್ಚರ್ಯ ಗೊಳ್ಳುತ್ತೀರಿ.
ಸಣ್ಣ ಅಂಗಡಿಯಲ್ಲಿ ಕಬ್ಬು ಜ್ಯೂಸ್ ಮಾಡುತ್ತಾ ಇರುವ ಇವರ ಹೆಸರು ಸುರೇಂದ್ರ ಕೋಟ್ಯಾನ್. ನಮ್ಮ ರಾಜ್ಯದ ಗಡಿಭಾಗದಲ್ಲಿರುವ ಕೇರಳದ ಮಂಜೇಶ್ವರ ನಿವಾಸಿಯಾಗಿದ್ದಾರ. ಕೇರಳದಲ್ಲಿದ್ದರೂ ಸುರೇಂದ್ರ ಕೋಟ್ಯಾನ್ ಅವರಿಗೆ ಕನ್ನಡ ಸಾಹಿತ್ಯದ ಮೇಲೆ ಅಪಾರ ಒಲವು. ಚಿಕ್ಕಂದಿನಿಂದಲೇ ಕನ್ನಡ ಸಾಹಿತ್ಯದ ಮೇಲೆ ಪ್ರೀತಿ ಹೊಂದಿರುವ ಸುರೇಂದ್ರ ಕೋಟ್ಯಾನ್‌ರಲ್ಲಿ 10 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕನ್ನಡ ಪುಸ್ತಕಗಳಿವೆ.

ಮನೆಯ ಕಪಾಟುಗಳಲ್ಲಿ, ಕೋಣೆಯಲ್ಲಿ ಸಾವಿರಾರು ಪುಸ್ತಕಗಳಿವೆ. ತನ್ನ ಸಣ್ಣ ಅಂಗಡಿಯಿಂದ ಬರುವ ಆದಾಯದಲ್ಲೇ ಪುಸ್ತಕ ಖರೀದಿ ಮಾಡುವ ಸುರೇಂದ್ರ ಕೋಟ್ಯಾನ್‌ಗೆ ಮುಂದೆ ತನ್ನ ಅಂಗಡಿಯ ಅರ್ಧ ಭಾಗದಲ್ಲಿ ಮಿನಿ ಗ್ರಂಥಾಲಯ ಮಾಡುವ ಉದ್ದೇಶ ಹೊಂದಿದ್ದಾರೆ.
ತನ್ನ 16ನೇ ವಯಸ್ಸಿನಿಂದಲೇ ಪುಸ್ತಕಗಳ ಖರೀದಿಯನ್ನು ಮಾಡತೊಡಗಿರುವ ಸುರೇಂದ್ರ ಕೋಟ್ಯಾನ್, ತನ್ನ ದುಡಿಮೆಯ ಬಹುಪಾಲನ್ನು ಪುಸ್ತಕ ಖರೀದಿಗಾಗಿಯೇ ಮೀಸಲಿಟ್ಟಿದ್ದಾರೆ. ಕನ್ನಡ ಸಾಹಿತ್ಯದ ಪುಸ್ತಕಗಳ ಭಂಡಾರವೇ ಇವರಲ್ಲಿದ್ದು,ಇವರ ಮನೆಗೆ, ಸಂಶೋಧನಾ ವಿದ್ಯಾರ್ಥಿಗಳು ಬಂದು ಪುಸ್ತಕ ಕೊಂಡು ಹೋಗುತ್ತಾರೆ. ಕೇರಳದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಇವರನ್ನು ಹುಡುಕಿಕೊಂಡು ಬಂದಿದೆ. ಎಲ್ಲಿ ಸಾಹಿತ್ಯ ಸಮ್ಮೇಳನ, ಪುಸ್ತಕ ಮೇಳ ಇದ್ರೂ ಹಾಜಾರಾಗುವ ಸುರೇಂದ್ರ ಕೋಟ್ಯಾನ್, ಪುಸ್ತಕಗಳನ್ನು ಖರೀದಿಸಿ ಓದುತ್ತಾರೆ.
ಪುಸ್ತಕ ಸಂಪತ್ತು ಒಂದಿದ್ದರೆ ಸಾಕು ಯಾವುದೇ ಆಡಂಬರದ ಜೀವನ ಬೇಕಾಗಿಲ್ಲ ಅಂತಾ ಹೇಳುವ ಸುರೇಂದ್ರ ಕೋಟ್ಯಾನ್ ಅವರ ಪುಸ್ತಕ ಪ್ರೀತಿ ನಿಜಕ್ಕೂ ಅನುಕರಣೀಯವಾಗಿದೆ.
ತೆಂಗಿನಕಾಯಿ ಸಿಪ್ಪೆ ಸುಲಿದು ಬದುಕು ಕಟ್ಟಿಕೊಂಡ ಮಹಿಳೆ
ಸಂಕಷ್ಟಗಳ ಸರಮಾಲೆಯಲೆಯ ನಡುವೆಯೂ ಮಹಿಳೆಯೊಬ್ಬರು ತೆಂಗಿನ ಕಾಯಿ ಸಿಪ್ಪೆ ಸುಲಿದು ಜೀವನ ಸಾಗಿಸುತ್ತಿರುವ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಈ ಮೂಲಕ ಈ ಮಹಿಳೆಯು ಕೈಯಿಂದ ಇನ್ನು ಜೀವನ ಸಾಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವವರಿಗೆ ಕಷ್ಟಗಳ ನಡುವೆ ಗೆದ್ದು ಬೀಗುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾಳೆ. ಹಾಗಾದರೆ ಈ ಸಾಧಕಿಯ ಹಿನ್ನೆಲೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಜೀವನಕ್ಕೆ ಆಸರೆಯಾಗಿದ್ದ ಉದ್ಯೋಗ, ಗಂಡ ಎಲ್ಲವೂ ದೂರವಾದಾಗ ಕುಗ್ಗದೆ ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿದ ಈ ಮಹಿಳೆ ಇಂದು ತೆಂಗಿನಕಾಯಿ ಸುಲಿಯುವ ಕಾಯಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಗಂಟೆಗೆ 100ಕ್ಕೂ ಹೆಚ್ಚು ತೆಂಗಿನಕಾಯಿ ಸುಲಿಯುವ ಇವರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 1,200ಕ್ಕೂ ಹೆಚ್ಚು ತೆಂಗಿನಕಾಯಿ ಸುಲಿಯುತ್ತಾರೆ.
ಮೂಲತ ಮಡಿಕೇರಿ ನಿವಾಸಿಯಾಗಿರುವ, ಸದ್ಯ ಕಾಸರಗೋಡು ಜಿಲ್ಲೆಯ ವಾಣಿನಗರ ನಿವಾಸಿಯಾಗಿರುವ ಹರಿಣಾಕ್ಷಿಯವರ ಯಶಸ್ಸಿನ ಕಥೆ ಇದು. ಆಯುರ್ವೇದ ಥೆರಪಿ ಕಲಿತಿರುವ ಹರಿಣಾಕ್ಷಿ ಅದೇ ವೃತ್ತಿಯನ್ನು ಚೆನ್ನೈ ಮತ್ತು ಬೆಂಗಳೂರಿನಲ್ಲಿ ತನ್ನ ಪತಿಯೊಂದಿಗೆ ನಿರ್ವಹಿಸಿಕೊಂಡಿದ್ದರು. ಆದರೆ ಮಕ್ಕಳಾದ ಬಳಿಕ ಆ ಕೆಲಸವನ್ನು ನಿರ್ವಹಿಸುವುದು ಅಸಾಧ್ಯವಾದಾಗ ಹರಿಣಾಕ್ಷಿ ಊರಿಗೆ ಬಂದಿದ್ದರು. ಇದೇ ಸಮಯದಲ್ಲಿ ಪತಿಯೂ ಆಕೆಯನ್ನು ತೊರೆದು ಹೋಗಿದ್ದ. ಇಬ್ಬರು ಚಿಕ್ಕ ಮಕ್ಕಳ ಜೊತೆಗೆ ತನ್ನ ಬದುಕಿನ ಬಂಡಿಯನ್ನು ಎಳೆಯಬೇಕಾದ ಜವಾಬ್ದಾರಿ ಹರಿಣಾಕ್ಷಿಯ ಹೆಗಲ ಮೇಲೆ ಬಿದ್ದಿತ್ತು.
ಮನೆ ಮನೆಗೆ ತೆರಳಿ ಕೂಲಿ ಮಾಡಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನೆಯನ್ನು ನಡೆಸುತ್ತಿದ್ದರು. ಕೂಲಿಯ ಜೊತೆಗೆ ಕೆಲವು ಮನೆಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವೂ ಸಿಗುತ್ತಿತ್ತು. ಒಂದು ಕಾಯಿ ಸುಲಿದರೆ 1 ರೂಪಾಯಿ ಸಿಗುತ್ತದೆ ಎನ್ನುವುದನ್ನು ಅರಿತ ಹರಿಣಾಕ್ಷಿ ಕಾಯಿ ಸುಲಿಯುವುದನ್ನು ಅಭ್ಯಾಸ ಮಾಡಿಕೊಂಡರು. ಬಳಿಕ ಗಂಟೆಗೆ 100 ಕಾಯಿಗಳಂತೆ ಸುಲಿಯುವುದಕ್ಕೆ ಆರಂಭಿಸಿದರು.
ಕೂಲಿಯಿಂದ ದಿನಕ್ಕೆ ಸಿಗುವ 250 ರೂಪಾಯಿ ಸಂಬಳಕ್ಕಿಂತ ದಿನಕ್ಕೆ 500 ಕಾಯಿ ಸುಲಿದು 500 ರೂಪಾಯಿ ಮಾಡಬಹುದೆಂದು ಲೆಕ್ಕಾಚಾರ ಹಾಕಿ ತೆಂಗಿನಕಾಯಿ ಸುಲಿಯುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತೆಂಗಿನಕಾಯಿ ಸಲಿಯುವ ಹರಿಣಾಕ್ಷಿ ಮಧ್ಯಾಹ್ನದವರೆಗೆ 1,200 ಕಾಯಿಗಳನ್ನು ಸುಲಭವಾಗಿ ಸುಲಿಯುತ್ತಾರೆ.
ಪುತ್ತೂರಿನ ಆರ್ಲಪದವಿನಲ್ಲಿರುವ ತೆಂಗಿನ ವ್ಯಾಪಾರಿ ಆಲಿಕುಂಞಿ ಯವರಲ್ಲೇ ಹೆಚ್ಚಾಗಿ ತೆಂಗಿನಕಾಯಿ ಸುಲಿಯುವ ಕೆಲಸ ಸಿಗುತ್ತಿದೆ. ವರ್ಷಕ್ಕೆ ಒಂದರಿಂದ ಎರಡು ತಿಂಗಳ ಕಾಲ ಮಾತ್ರ ಕಾಯಿ ಸುಲಿಯಲು ಕಾಯಿಗಳ ಕೊರತೆ ಬಿಟ್ಟರೆ, ಉಳಿದ ಎಲ್ಲಾ ದಿನಗಳಲ್ಲಿ ಸಾಕಷ್ಟು ಕಾಯಿಗಳು ವ್ಯಾಪಾರಿಯ ಬಳಿಯೇ ಸಿಗುತ್ತಿದೆ. ಅಲ್ಲದೆ ಕೆಲವು ಮನೆಗಳಿಗೂ ತೆರಳಿ ತೆಂಗಿನಕಾಯಿ ಸುಲಿಯುತ್ರಿದ್ದು, ಈ ವೃತ್ತಿಯಿಂದ ಸಾಕಷ್ಟು ತೃಪ್ತಿ ಇದೆ ಎನ್ನುತ್ತಾರೆ ಹರಿಣಾಕ್ಷಿ.
ಉದ್ಯೋಗ, ಗಂಡ ಎಲ್ಲವನ್ನೂ ಕಳೆದುಕೊಂಡ ಹರಿಣಾಕ್ಷಿ ಆ ದಿನಗಳಲ್ಲಿ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದರು. ಆದರೆ ಕೆಲವೇ ದಿನಗಳಲ್ಲಿ ತನ್ನ ಮೇಲಿರುವ ಜವಾಬ್ದಾರಿ ಆಕೆಯನ್ನು ಮೇಲೇಳುವಂತೆ ಮಾಡಿತು. ಕುಳಿತು ಕೊರಗುವುದಕ್ಕಿಂತ ಜೀವನಕ್ಕಾಗಿ ಏನಾದರೂ ಮಾಡಬೇಕೆಂದು ಅಂದು ದೃಢನಿರ್ಧಾರ ಮಾಡಿದ್ದ ಹರಿಣಾಕ್ಷಿ ಇಂದೂ ಅದೇ ದಿಕ್ಕಿನಲ್ಲಿ ಮುಂದೆ ಸಾಗುತ್ತಲೇ ಇದ್ದಾರೆ.












Click it and Unblock the Notifications