ಮಂಗಳೂರು ಉತ್ತರ: ಬಿಜೆಪಿ ಗೆಲುವಿಗೆ ನೆರವಾಗುತ್ತಾ ಮೊಯಿದ್ದೀನ್ ಬಾವ v/s ಕಾಂಗ್ರೆಸ್ ಫೈಟ್
ಮಂಗಳೂರು, ಮೇ 03: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಕದನ ಕುತೂಹಲ ಪಡೆದಿದೆ. ಕಾಂಗ್ರೆಸ್‌ನಿಂದ ಬಂಡಾಯವೆದ್ದು ಜೆಡಿಎಸ್ ನಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಮೊಯಿದ್ದೀನ್ ಬಾವ ಒಂದೆಡೆಯಾದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಪ್ತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಡಾ.ವೈ ಭರತ್ ಶೆಟ್ಟಿ ಸ್ಪರ್ಧಾ ಕಣದಲ್ಲಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಹವಾ ಕ್ಷೇತ್ರದಲ್ಲಿ ಸದ್ಯ ತಳಮಟ್ಟದಲ್ಲಿಯೇ ಇದೆ. ಹೀಗಾಗಿ ಮೊಯಿದ್ದೀನ್ ಬಾವ ಅವರ ಪರ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸುರತ್ಕಲ್‌ಗೆ ಭೇಟಿ ನೀಡಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದರು.

ಸುರತ್ಕಲ್‌ನಲ್ಲಿ ಮೊಯಿದ್ದೀನ್ ಬಾವ ಪರ ಸುದ್ದಿಗೋಷ್ಠಿ ನಡೆಸಿದ ಎಚ್.ಡಿ ದೇವೇಗೌಡ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಯಿದ್ದೀನ್ ಬಾವ ಅಭ್ಯರ್ಥಿ ಯಾಗಿದ್ದಾರೆ. ಎಲ್ಲಾ ಸಮೀಕ್ಷೆ ಗಳು ಬಾವ ಪರವಾಗಿ ಇದೆ. ಅವರ ಸ್ವತಂತ್ರವಾದ ಕೊಡುಗೆ ಉತ್ತರ ಕ್ಷೇತ್ರಕ್ಕೆ ಇದೆ. ಮೊಯಿದ್ದೀನ್ ಬಾವರಿಗೆ ದುರುದ್ದೇಶದಿಂದ ಸೀಟು ತಪ್ಪಿಸಲಾಯಿತು ಎಂದಿದ್ದರು.
ಮೊಯಿದ್ದೀನ್ ಬಾವ ಅವರ ಕೆಲಸವನ್ನು ಗುರುತಿಸಿ ಉತ್ತರ ದಲ್ಲಿ ಬಾವರಿಗೆ ಟಿಕೆಟ್ ನೀಡಿದ್ದೇವೆ. ಬಾವರಿಗೆ ಆದ ಅನ್ಯಾಯವನ್ನು ಸರಿಪಡಿಸಲು ನಮ್ಮ ಪಕ್ಷವಿದೆ. ಇಡೀ ಹಿಂದೂಸ್ತಾನದಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ. ಮೇ 13ರಂದು ಕುಮಾರಸ್ವಾಮಿ ಜೊತೆಗೆ ಮೊಯಿದ್ದೀನ್ ಬಾವ ಕೂಡಾ ಇರುವ ವಿಶ್ವಾಸ ಇದೆ ಎಂದಿದ್ದರು.

ಇದರ ನಡುವೆ ಕಾಂಗ್ರೆಸ್ ಮೊಯಿದ್ದೀನ್ ಬಾವಗೆ ಶಾಕ್ ನೀಡಿದೆ. ಮೊಯಿದ್ದೀನ್ ಬಾವರ ಆಪ್ತ ಕಾರ್ಯದರ್ಶಿಯನ್ನು ಕಾಂಗ್ರೆಸ್ ಸೆಳೆದಿದೆ. ಮೊಯಿದ್ದೀನ್ ಬಾವ ವಿರುದ್ಧ ಕಾಂಗ್ರೆಸ್ ಮಾಸ್ಟರ್ ಸ್ಟ್ರೋಕ್ ಆಡಿದ್ದು, ಮೊಯಿದ್ದೀನ್ ಬಾವ ಅವರ ವಿರುದ್ಧವೇ ಬಾವ ಪಿಎ ನಿಝಾಂ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ನಿಝಾಂ ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಿತ. ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಮೊಯಿದ್ದೀನ್ ಬಾವಗೆ ಮತ ಹಾಕಿದರೆ ಬಿಜೆಪಿ ಗೆಲುವು ಸುಲಭವಾಗುತ್ತದೆ. ಜ್ಯಾತ್ಯಾತೀತವಾದ ಪಕ್ಷವಾದ ಕಾಂಗ್ರೆಸ್‌ಗೆ ಎಲ್ಲರೂ ಮತ ಹಾಕಬೇಕು. ಎಲ್ಲರೂ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಮೊಯಿದ್ದೀನ್ ಬಾವ ಆಪ್ತ ಸಹಾಯಕ ಹೇಳಿದ್ದರು.
ಮೊಯಿದ್ದೀನ್ ಬಾವ ಪರವಾಗಿ ಉತ್ತರ ಕ್ಷೇತ್ರದಲ್ಲಿ ಮೊಯಿದ್ದೀನ್ ಬಾವ ಹಿಂಬಾಲಕರು ಪ್ರಚಾರ ಮಾಡುತ್ತಿದ್ದು ಗೆಲ್ಲುವ ಸಾಧ್ಯತೆ ಕಡಿಮೆಯಿದೆ.ಹೀಗಾಗಿ ಉತ್ತರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯ ಇಲ್ಲ ಅನ್ನೋದು ರಾಜಕೀಯ ಲೆಕ್ಕಾಚಾರ. ಆದರೆ ಮೊಯಿದ್ದೀನ್ ಬಾವ ಗೆ ಬೀಳುವ ವೈಯಕ್ತಿಕ ಮತಗಳೂ ಕಾಂಗ್ರೆಸ್‌ಗೆ ನಷ್ಟವನ್ನುಂಟು ಮಾಡುತ್ತದೆ ಅಂತಾನೂ ಹೇಳಲಾಗುತ್ತಿದೆ.
ಇನ್ನು ಕ್ಷೇತ್ರದ ಶಾಸಕರಾಗಿರುವ ಡಾ.ವೈ ಭರತ್ ಶೆಟ್ಟಿ ತಮ್ಮ ಅಭಿವೃದ್ಧಿ ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಮೇಲೆ ಮತಯಾಚನೆ ಮಾಡುತ್ತಿದ್ದು, ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಕಾಂಗ್ರೆಸ್‌ನಿಂದ ಇನಾಯತ್ ಆಲಿ ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಮಾಡುತ್ತಿದ್ದು, ಬಿಜೆಪಿಯಿಂದ ಡಾ.ವೈ ಭರತ್ ಶೆಟ್ಟಿಯವರಿಂದ ಕೂಡಾ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಹೀಗಾಗಿ ಮಂಗಳೂರು ಉತ್ತರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚುನಾವಣಾ ಕದನ ಜೋರಾಗಲಿದೆ.












Click it and Unblock the Notifications