ಮಂಗಳೂರಿನಲ್ಲಿ 32 ವರ್ಷಗಳ ಕಾಲ RSSನಲ್ಲಿ ಸೇವೆ ಸಲ್ಲಿಸಿದ್ದ ಸತೀಶ್ ಪ್ರಭು ಕಾಂಗ್ರೆಸ್ ಸೇರ್ಪಡೆ
ಮಂಗಳೂರು, ಮೇ, 08: ಮಂಗಳೂರಿನ ಆರ್‌ಎಸ್‌ಎಸ್ ಹಿರಿಯ ಮುಖಂಡ ಸತೀಶ್ ಪ್ರಭು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ನಲ್ಲಿ 32 ವರ್ಷಗಳಿಂದ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದ ಸತೀಶ್ ಪ್ರಭು 2014ರಲ್ಲಿ ಮೋದಿ ಅವರನ್ನು ಮಂಗಳೂರಿಗೆ ಕರೆಸಿ ಪಕ್ಷ ಸಂಘಟಿಸಿದ್ದರು.
ಆದರಲ್ಲಿ ಇದೀಗ ಈಗಿನ ಬಿಜೆಪಿಯಿಂದ ಜನಹಿತ ಸಾಧ್ಯವಿಲ್ಲ ಎಂದು ಹೇಳಿ ಸತೀಶ್ ಪ್ರಭು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಮಂಗಳೂರಿನಲ್ಲಿ ನಿರ್ಣಾಯಕ ಆಗಿರುವ ಜಿಎಸ್‌ಬಿ ಸಮುದಾಯಕ್ಕೆ ಸೇರಿದ ಸತೀಶ್ ಪ್ರಭು ಅವರು ನಾಲ್ವರು ಮಾಜಿ ಕಾರ್ಪೊರೇಟರ್‌ಗಳ ಜೊತೆ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಆಗಿದ್ದಾರೆ.

ಮಂಗಳೂರು ಶಾಸಕ ವೇದವ್ಯಾಸ ಕಾಮತ್ ವಿರುದ್ಧ ನಿಲುವು ಹೊಂದಿರುವ ಸತೀಶ್ ಪ್ರಭು, ಮಂಗಳೂರಿನ ವೆಂಕಟರಮಣ ದೇವಸ್ಥಾನದಲ್ಲಿ ಟ್ರಸ್ಟಿಯೂ ಆಗಿದ್ದಾರೆ. ಹಾಗೆಯೇ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಕ್ಷದ ಧ್ವಜ ನೀಡಿ ಸತೀಶ್ ಪ್ರಭು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿ ಹಾಗೂ ನಾನಾ ಸಂಘಟನೆಯಲ್ಲಿ ಸುಮಾರು 3 ದಶಕಗಳ ಕಾಲ ಸೇವೆ ಮಾಡಿದ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಬಿಜೆಪಿಯಲ್ಲಿ ಪಕ್ಷಾಂತರ ಸುನಾಮಿ ಆರಂಭವಾಗಿದ್ದು, ಈವರೆಗೆ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ 47 ಮಂದಿ ಹಿರಿಯ ನಾಯಕರು ಹಾಗೂ 6 ಮಂದಿ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇದರಿಂದ ಬಿಜೆಪಿ ಮುಳುಗುತ್ತಿರುವ ಹಡಗು ಆಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಈ ರಾಜ್ಯದಲ್ಲಿ ಆಡಳಿತ ನಡೆಸಲಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ರಥಬೀದಿ ವೆಂಕಟರಮಣ ದೇವಳದ ಟ್ರಸ್ಟಿ ಹಾಗೂ ಬಿಜೆಪಿ ಮುಖಂಡ ಸತೀಶ್ ಪ್ರಭು ಅವರು 30 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಿಜೆಪಿ ಯುವಮೋರ್ಚಾ, ದ.ಕ.ಜಿಲ್ಲಾ ಬಿಜೆಪಿಯಲ್ಲಿ ಜವಾಬ್ದಾರಿ ವಹಿಸಿಕೊಂಡವರು.
ಇಂತಹ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಹೆಮ್ಮೆಯೆನಿಸುತ್ತಿದೆ. ಇವರ ಜೊತೆ ಸಂತೋಷ್ ಶೆಟ್ಟಿ, ರಾಜೇಶ್ ಕಾಮತ್, ರಜತಾ ಆರ್.ಕಾಮತ್ ಹಾಗೂ ದೀಕ್ಷಾ ಕಾಮತ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು
ಬಳಿಕ ಮಾತನಾಡಿದ ಸತೀಶ್ ಪ್ರಭು, ನಾನು ಸುಮಾರು ವರ್ಷಗಳಿಂದ ಸಂಘಪರಿವಾರ, ಬಿಜೆಪಿ ಜೊತೆ ಗುರುತಿಸಿಕೊಂಡಿದೆ. ಅಲ್ಲದೆ ನಾನಾ ಜವಬ್ದಾರಿಗಳನ್ನು ವಹಿಸಿಕೊಂಡಿದ್ದೆ. ಆದರೆ ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಜನಹಿತ ಸಾಧನೆ ಗೌಣವಾಗುತ್ತಿದ್ದು, ಇದರಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ನಾನು ಯಾವುದೇ ಅಧಿಕಾರ, ಹುದ್ದೆಗಾಗಿ ಕಾಂಗ್ರೆಸ್ ಸೇರ್ಪಡೆ ಆಗಿಲ್ಲ ಎಂದರು.
ಈ ಜಿಲ್ಲೆಯಲ್ಲಿ ನಮ್ಮ ಹಿರಿಯರು ಕಾಂಗ್ರೆಸ್‌ನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು, ಆ ನಿಟ್ಟಿನಲ್ಲಿ ಗತವೈಭವ ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು..
ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕಾಂಗ್ರೆಸ್ ಮುಖಂಡರಾದ ಪಿ.ವಿ.ಮೋಹನ್, ಲಾವಣ್ಯ ಬಲ್ಲಾಳ್, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ನವೀನ್ ಡಿಸೋಜ, ದ.ಕ.ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ತೇಜಸ್ವಿ ರಾಜ್, ಡೆನ್ನಿಸ್ ಡಿಸಿಲ್ವಾ ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.












Click it and Unblock the Notifications