ಕಾರ್ಕಳದಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಪ್ಲಾನ್ ಸಚಿವ ಸುನೀಲ್ ಕುಮಾರ್‌ಗೆ ಕಂಟಕ ಆಗಲಿದ್ಯಾ?
ಉಡುಪಿ, ಏಪ್ರಿಲ್ 20: ಕರಾವಳಿಯಲ್ಲಿ ಬಲಿಷ್ಠವಾಗಿದ್ದ ಬಿಜೆಪಿ-ಹಿಂದೂ ಮುಖಂಡರ ಸಂಬಂಧದಲ್ಲಿ ಬಿರುಕು ಮೂಡಿದೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆನ್ನೆಲುಬಾಗಿದ್ದ ಹಿಂದೂ ಸಂಘಟನೆಗಳೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಿಸಿ ತುಪ್ಪವಾಗಿದೆ.
ಬಿಜೆಪಿ ಅಧಿಕಾರದಲ್ಲಿಯೂ ಹಿಂದೂ ಪರ ಹೋರಾಟಗಾರಿಗೆ ರಕ್ಷಣೆ ಇಲ್ಲ ಎನ್ನುವ ಕಾರಣಕ್ಕೆ ಹಿಂದೂ ಸಂಘಟನೆಗಳ ಮುಖಂಡರು ಬಿಜೆಪಿ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದು, ಈ ಬಾರಿ ಬಿಜೆಪಿಗೆ ಟಕ್ಕರ್ ಕೊಡಲು ಸಿದ್ಧರಾಗಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಹಾಗೂ ಹಿಂದೂ ಮುಖಂಡರ ನಡುವಿನ ಜಿದ್ದಾಜಿದ್ದಿಯ ಕಣಗಳಾಗಿವೆ.

ಬಿಜೆಪಿ ಭದ್ರಕೋಟೆಯಾಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ, ಇಂಧನ ಸಚಿವ ವಿ. ಸುನೀಲ್ ಕುಮಾರ್ ವಿರುದ್ಧ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸ್ಪರ್ಧೆಗೆ ಇಳಿದಿದ್ದಾರೆ. ಸುನೀಲ್ ಕುಮಾರ್ ಚುನಾವಣಾ ಸಮಯದಲ್ಲಿ ಹಿಂದೂ ಕಾರ್ಯಕರ್ತರನ್ನು ಬಳಸಿಕೊಂಡು ಶಾಸಕರು ಹಾಗೂ ಸಚಿವರಾದ ಬಳಿಕ ನಿಜವಾದ ಹಿಂದೂ ಕಾರ್ಯಕರ್ತರನ್ನು ಮರೆತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಕಾರ್ಕಳದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಸದ್ಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಹಾಗೂ ಸುನೀಲ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದು, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಹಾಗೂ ಹಿಂದೂ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಮೋದ್ ಮುತಾಲಿಕ್ ಪ್ರಚಾರ ನಡೆಸುತ್ತಿದ್ದು ಈ ಮೂಲಕ ಹಿಂದೂ ಕಾರ್ಯಕರ್ತರ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಹಿಂದೂ ಸಂಘಟನೆಗಳ ಕೆಲ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ಪರ ಪ್ರಚಾರಕ್ಕಿಳಿದಿದ್ದರೆ, ಇನ್ನೂ ಬಹುತೇಕರು ಶಾಸಕ ಸುನೀಲ್ ಕುಮಾರ್ ಪರವಾಗಿದ್ದಾರೆ.
ಪ್ರಮೋದ್ ಮುತಾಲಿಕ್ ಅವರ ಮಾತಿಗೂ ನಡೆವಳಿಕೆಗೂ ಯಾವುದೇ ಸಂಬಂಧವಿಲ್ಲ. ಪ್ರಮೋದ್ ಮುತಾಲಿಕ್ ಹಿಂದುತ್ವದ ಪ್ರಖರ ಭಾಷಣ ಮಾಡುತ್ತಾರೆ.ಆದರೆ ಮುತಾಲಿಕ್ ಅವರ ಹಿಂದುತ್ವ ಕೇವಲ ಭಾಷಣಕ್ಕಾಗಿ ಮಾತ್ರ. ಅವರ ನಡವಳಿಕೆಯಲ್ಲಿ ಇಲ್ಲ. ಹಿಂದುತ್ವಕ್ಕಾಗಿ ಮೃತರಾದವರ ಮನೆಗೆ ಪ್ರಮೋದ್ ಮುತಾಲಿಕ್ ಈವರೆಗೂ ಭೇಟಿ ನೀಡಿಲ್ಲ ಎಂದು ಇತ್ತೀಚಿಗೆ ಉತ್ತರ ಕರ್ನಾಟಕದ ಹಿಂದೂ ಮುಖಂಡರು ಕಿಡಿಕಾರಿದ್ದರು.
ಇನ್ನು ಕಾರ್ಕಳ ಸ್ಥಳೀಯ ಶ್ರೀರಾಮಸೇನೆ ನಾಯಕರೇ ಪ್ರಮೋದ್ ಮುತಾಲಿಕ್ ಸ್ಪರ್ಧೆಯ ಬಗ್ಗೆ ಬಗ್ಗೆ ವ್ಯಂಗ್ಯವಾಡಿದ್ದರು. ಮುತಾಲಿಕ್ ಸ್ಪರ್ಧೆಯಿಂದ ಶ್ರೀರಾಮ ಸೇನೆ ಸಂಘಟನೆ ಒಡೆದು ಹೋಳಾಗುತ್ತಿದೆ. ಸೋಲುವ ಕಣದಲ್ಲಿ ಮುತಾಲಿಕ್ ಸ್ಪರ್ಧೆ ಯಾಕೆ..? ಚುನಾವಣಾ ಕಣಕ್ಕೆ ಇಳಿಯುವ ಮುನ್ನ ಮುತಾಲಿಕ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂದಿದ್ದರು.
ಇನ್ನು ಪ್ರಮೋದ್ ಮುತಾಲಿಕ್ ಕಾರ್ಕಳದ ಓರ್ವ ಉದ್ಯಮಿ ಹಾಗೂ ವಕೀಲರ ಪ್ರಭಾವದಿಂದ ಸಚಿವ ಸುನಿಲ್ ಕುಮಾರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿತ್ತು. ಈ ಎಲ್ಲಾ ಅಸಮಾಧಾನಗಳ ನಡುವೆಯೇ ಪ್ರಮೋದ್ ಮುತಾಲಿಕ್ ಸುನೀಲ್ ಕುಮಾರ್ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.
ಸುನೀಲ್ ಕುಮಾರ್ ನಾಮಪತ್ರದ ವೇಳೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದು ಗೆಲುವು ನಿಶ್ಚಿತ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುನೀಲ್ ಕುಮಾರ್ ಪರವಾಗಿ ಹಿಂದೂ ಸಂಘಟನೆಗಳೂ ಬೆಂಬಲಕ್ಕೆ ನಿಂತಿದ್ದು ಇದು ಬಿಜೆಪಿಗೆ ವರದಾನ ಆಗಲಿದೆ.. ಈಗಾಗಲೇ ಹಿಂದೂ ಸಂಘಟನೆಗಳ ಪ್ರಮುಖರು ಸುನೀಲ್ ಕುಮಾರ್ ಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದು,ಸುನೀಲ್ ಕುಮಾರ್ ಗೆ ಆನೆ ಬಲ ಬಂದಂತಾಗಿದೆ.
ಪ್ರಮೋದ್ ಮೊತಾಲಿಕ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ಸಂಘಟನೆಯ
ಕಾರ್ಯಕರ್ತರೋರ್ವರು,ಪ್ರಮೋದ್ ಮೊತಾಲಿಕ್ ಕಾರ್ಕಳ ಕ್ಕೆ ಬಂದು ಹಿಂದುತ್ವದ ಪಾಠವನ್ನು ಮಾಡುವ ಅಗತ್ಯ ಇಲ್ಲ.ಕಾರ್ಕಳ ದಲ್ಲಿ ಎಂದೂ ಹಿಂದುತ್ವ ಕ್ಕೆ ಧಕ್ಕೆಯಾಗಿಲ್ಲ..ಸುನೀಲ್ ಕುಮಾರ್ ಎಂದೂ ಕಾರ್ಯಕರ್ತರ ಜೊತೆ ಇದ್ದಾರೆ..ಪ್ರಮೋದ್ ಮೊತಾಲಿಕ್ ಅವರ ಮೇಲೆ ಅಪಾರ ವಾದ ಗೌರವವಿದೆ.ಆದರೆ ಕಾರ್ಕಳದಲ್ಲಿ ಚುನಾವಣೆಗೆ ನಿಂತು ಯಾರದ್ದೋ ಮಾತು ಕೇಳಿ ಹೆಸರು ಗೌರವಕ್ಕೆ ಅವರೇ ಚ್ಯುತಿ ತಂದಿದ್ದಾರೆ ಅಂತಾ ಹೇಳಿದ್ದಾರೆ..
ಕಾರ್ಕಳ ವಿಧಾನಸಭಾ ಕ್ಷೇತ್ರ ಹೆಬ್ರಿ ಸೇರಿದಂತೆ ಕೆಲ ಭಾಗದಲ್ಲಿ ಪ್ರಮೋದ್ ಮೊತಾಲಿಕ್ ಅವರಿಗೆ ಹಿಂದೂ ಕಾರ್ಯಕರ್ತರ ಬೆಂಬಲವಿದ್ದು,ಈ ಕಾರ್ಯಕರ್ತರನ್ನು ಸೆಳೆಯಲು ಬಿಜೆಪಿ ನಾಯಕರು ಸರಣಿ ಬೈಠಕ್ ಗಳನ್ನು ನಡೆಸುತ್ತಿದ್ದು ಪೂರ್ಣ ಪ್ರಮಾಣದಲ್ಲಿ ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡೋದಾಗಿ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications