Karnataka Budget 2023 Expectations: ದಕ್ಷಿಣ ಕನ್ನಡ ಜಿಲ್ಲೆಯ ನಿರೀಕ್ಷೆಗಳೇನು?
ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊನೆಯ ಬಜೆಟ್‌ಅನ್ನು ಮಂಡಿಸಲಿದ್ದಾರೆ. ಸರ್ಕಾರದ ಕೊನೆಯ ಬಜೆಟ್ ಮೇಲೆ ಜನರಲ್ಲಿ ನಿರೀಕ್ಷೆ ಇಮ್ಮಡಿ ಯಾಗಿದ್ದು, ಕರಾವಳಿಯ ಜನರೂ ಬೊಮ್ಮಾಯಿ ಲೆಕ್ಕಪತ್ರದ ಮೇಲೆ ಬೆಟ್ಟದಷ್ಟು ಭರವಸೆ ಇಟ್ಟುಕೊಂಡಿದ್ದಾರೆ.
ಮತ್ಸೋದ್ಯಮಕ್ಕೆ ನೆರವಿನ ನಿರೀಕ್ಷೆ:
ಕರಾವಳಿಯ ಆರ್ಥಿಕತೆಯ ಜೀವನಾಡಿ ಮತ್ಸೋದ್ಯಮ. ದಿನಕ್ಕೆ ಲಕ್ಷಾಂತರ ರೂಪಾಯಿಯ ವ್ಯವಹಾರ ನಡೆಯುವ ಮತ್ಸ್ಯೋದ್ಯಮಕ್ಕೆ ಸರ್ಕಾರದ ಕೊಡುಗೆ ಅಷ್ಟಕಷ್ಟೇ. ಈ ಬಾರಿ ಮೀನುಗಾರರಿಗೆ ಸರ್ಕಾರ ಕೊಡುಗೆ ನೀಡುವ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.
ಮೀನುಗಾರಿಕಾ ಬೋಟ್ ಗಳಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ/ಡಿಸೇಲ್ ನೀಡುವ ನೀರಿಕ್ಷೆ ಮೀನುಗಾರರಿಗೆ ಇದೆ. ಈ ಬಗ್ಗೆ ಸರ್ಕಾರ ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಿದ್ದು ಈ ಬಾರಿ ಬಜೆಟ್‌ನಲ್ಲಿ ಸರ್ಕಾರ ಭರವಸೆಯನ್ನು ಈಡೇರಿಸುವ ನಿರೀಕ್ಷೆ ಮೀನುಗಾರರಿಗೆ ಇದೆ.

ಕುಚಲಕ್ಕಿ ವಿತರಣೆಯ ನಿರೀಕ್ಷೆ:
ಕರಾವಳಿಯಲ್ಲಿ ಜನರು ಬಳಸುವ ಕುಚ್ಚಲ್ಲಕ್ಕಿಯನ್ನು ಬಿಪಿಎಲ್ ಪಡಿತರ ಚೀಡಿ ಬಳಕೆದಾರರಿಗೆ ನೀಡಬೇಕೆಂದು ಹಲವು ಭಾಗಗಳಿಂದ ಜನ ಸರ್ಕಾರದೆದುರಿಗೆ ನೀಡುತ್ತಾ ಬಂದಿದ್ದಾರೆ.
ಸಚಿವರು ಈ ಬಗ್ಗೆ ಸರ್ಕಾರ ಅಸ್ತು ಅಂದಿದೆ ಹೇಳಿಕೆ ನೀಡಿದರೂ ಇಲ್ಲಿಯವರೆಗೆ ಪಡಿತರ ಬಳಕೆದಾರರಿಗೆ ಪೂರ್ಣ ಪ್ರಮಾಣದ ಕುಚ್ಚಲ್ಲಕ್ಕಿ ವಿತರಣೆಯಾಗಿಲ್ಲ. ಹೀಗಾಗಿ ಈ ಅಯವ್ಯಯದಲ್ಲಿ ಸರ್ಕಾರ ಕುಚ್ಚಲ್ಲಕ್ಕಿ ನೀಡುವ ನಿರೀಕ್ಷೆಯಲ್ಲಿ ಕರಾವಳಿಯ ಜನರಿದ್ದಾರೆ.
ಕರಾವಳಿಗೆ ಐಟಿ ಕಂಪನಿ:
ಎಜುಕೇಶನ್ ಹಬ್ ಆಗಿರುವ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮುಗಿಸಿ ಬೇರೆ ಮಹಾನಗರಗಳಿಗೆ ಉದ್ಯೋಗ ಅರಸಿ ವಲಸೆ ತೆರಳುತ್ತಾರೆ.
ಸರ್ಕಾರ ಕರಾವಳಿಯಲ್ಲೇ ಐಟಿ ಕಂಪೆನಿ ಸ್ಥಾಪಿಸಬೇಕೆಂದು ಯುವ ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉಡುಪಿ ಯ ಪೇಜಾವರ ಶ್ರೀ ಇತ್ತೀಚಿಗೆ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿರುವುದು ಕೂಡಾ ಗಮನಾರ್ಹವಾಗಿದೆ.
ದೈವ ನರ್ತಕರಿಗೆ ಮಾಸಾಶಾನದ ನಿರೀಕ್ಷೆ:
ತುಳುನಾಡಿನ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ದೈವಾರಾಧನೆಯಲ್ಲಿ ತೊಡಗಿರುವ ದೈವ ನರ್ತಕರಿಗೆ ಮಾಸಾಶಾನ ನೀಡೋದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದ್ದು, ಬಜೆಟ್‌ನಲ್ಲಿ ಸರ್ಕಾರ ಈ ಬಗ್ಗೆ ಧೃಡ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಗಳಿವೆ.
ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕರಾವಳಿಯ ಸಂಪ್ರಾದಾಯಿಕ ಕಂಬಳಕ್ಕೆ ಈ ಹಿಂದೆ ಪ್ರತಿ ಕಂಬಳಕ್ಕೆ ತಲಾ ಐದು ಲಕ್ಷ ರೂಪಾಯಿ ಅನುದಾನ ಘೋಷಿಸಿತ್ತು. ಹೀಗಾಗಿ ಉಡುಪಿ-ದ.ಕ ಜಿಲ್ಲೆಯಲ್ಲಿ ನಡೆಯುವ ಸಂಪ್ರದಾಯಿಕ ಕಂಬಳಕ್ಕೆ ವಾರ್ಷಿಕ ಐದು ಕೋಟಿ ಮೀಸಲಿರಿಸಬೇಕೆಂದು ದ.ಕ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹದ ನಿರೀಕ್ಷೆ:
ಕರಾವಳಿ ಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಹಳದಿರೋಗ, ಕೊಳೆ ರೋಗದಿಂದ ತತ್ತರಿಸಿದೆ. ಕೃಷಿಕರು ಈ ರೋಗದ ಬಗ್ಗೆ ಅಧ್ಯಯನ ನಡೆಸಲು ಶಿಫಾರಸ್ಸು ಮಾಡುವಂತೆ ಸರ್ಕಾರದ ಮೊರೆ ಹೋಗಿದ್ದರು.
ಈ ಬಗ್ಗೆ ಸರ್ಕಾರ ಈ ಬಾರಿ ಆಯವ್ಯಯದಲ್ಲಿ ಕೃಷಿಕರತ್ತ ಗಮನ ಹರಿಸುವ ನಿರೀಕ್ಷೆಗಳಿವೆ. ಜೊತೆಗೆ ಭೂತಾನ್ ನಿಂದ ಆಮದು ಆಗುತ್ತಿರುವ ಅಡಿಕೆಯನ್ನು ನಿಲ್ಲಿಸಿ ರಾಜ್ಯದ ಕೃಷಿಕರು ಬೆಳೆದ ಅಡಿಕೆಗೆ ಪ್ರೋತ್ಸಾಹ ನೀಡುವ ಭರವಸೆ ಕೃಷಿಕರಿಗಿದೆ..
ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ:
ಪ್ರವಾಸೋದ್ಯಮ ಕ್ಕೆ ವಿಪುಲ ಅವಕಾಶ ಇರುವ ಕರಾವಳಿಯಲ್ಲಿ ಸರ್ಕಾರ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸಿರೋದು ಅತ್ಯಲ್ಪ ಮಾತ್ರ. ಬೀಚ್ ಗಳು, ಪ್ರವಾಸಿ ಕೇಂದ್ರಗಳು, ಧಾರ್ಮಿಕ ಕ್ಷೇತ್ರಗಳು, ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳನ್ನು ಬೆಳೆಸಲು ಸರ್ಕಾರ ಯಾವ ಅಯವ್ಯಯದಲ್ಲೂ ಪ್ರೋತ್ಸಾಹ ನೀಡಿಲ್ಲ. ಹೀಗಾಗಿ ಪ್ರವಾಸಿ ತಾಣಗಳಿಗೆ ಸರ್ಕಾರ ಕೊನೆಯ ಬಜೆಟ್‌ನಲ್ಲಾದರೂ ಅಭಿವೃದ್ಧಿಗೊಳಿಸುವ ನಿರೀಕ್ಷೆಗಳಿವೆ.
ಇನ್ನುಳಿದಂತೆ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ಕೇಂದ್ರಗಳ ಅಭಿವೃದ್ಧಿ, ಯಕ್ಷಗಾನ ಕಲೆಗೆ ಪ್ರೋತ್ಸಾಹ, ರೈಲ್ವೇ ಗೆ ರಾಜ್ಯ ಕರಾವಳಿ ಯ ಪ್ರತ್ಯೇಕ ವಿಭಾಗ ಮಾಡಲು ಕೇಂದ್ರ ಕ್ಕೆ ಪ್ರಸ್ತಾವನೆದಂತಹ ವಿಚಾರಗಳೂ ಕರಾವಳಿಯ ಜನರ ಮನಸ್ಸಿನಲ್ಲಿದೆ.












Click it and Unblock the Notifications