ನ್ಯಾ. ಜಯಂತ್ ಪಟೇಲ್ ವರ್ಗಾವಣೆ ಖಂಡಿಸಿ ವಕೀಲರ ಪ್ರತಿಭಟನೆ
ಮಂಗಳೂರು, ಅಕ್ಟೋಬರ್ 4: ಜಯಂತ್ ಪಟೇಲ್ ರನ್ನು ಅಲಹಾಬಾದ್ ಹೈಕೋರ್ಟ್ ನ ಮೂರನೇ ನ್ಯಾಯಾಮೂರ್ತಿಯಾಗಿ ವರ್ಗಾವಣೆಗೊಳಿಸಿದ ಕೊಲಿಜಿಯಂನ ಕ್ರಮವನ್ನು ಖಂಡಿಸಿ ಮಂಗಳೂರಿನ ವಕೀಲರ ಸಂಘವು ಬುಧವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿತು. ಬೆಂಗಳೂರಿನಲ್ಲಿಯೂ ವಕೀಲರು ಕಲಾಪ ಬಹಿಷ್ಕರಿಸಿ ಧರಣಿ ನಡೆಸಿದರು.
"ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್. ಕೆ. ಮುಖರ್ಜಿಯವರು ಇದೇ ಅಕ್ಟೋಬರ್ 9ರಂದು ನಿವೃತ್ತಿಯಾಗುತ್ತಿದ್ದಾರೆ. ಅವರ ನಂತರ ಎರಡನೇ ಸ್ಥಾನದಲ್ಲಿದ್ದ ಜಯಂತ್ ಪಟೇಲ್ ಅವರಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ನೀಡಬೇಕಿತ್ತು. ಆದರೆ, ದೇಶದ ಹೈಕೋರ್ಟ್ಗಳ ನ್ಯಾಯಮೂರ್ತಿಗಳಲ್ಲೇ ಹಿರಿಯರಾದ ಜಯಂತ್ ಪಟೇಲ್ ರಿಗೆ ಭಡ್ತಿ ನೀಡದೆ 'ಕೊಲಿಜಿಯಂ' ಜಯಂತ್ ಪಟೇಲ್‌ರಿಗೆ ಹಿಂಭಡ್ತಿ ನೀಡುವ ಮೂಲಕ ಅನ್ಯಾಯ ಎಸಗಿದೆ," ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

'ಇದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಎಸಗಿದ ಹಲ್ಲೆಯಾಗಿದೆ. ಇಂತಹ ಧೋರಣೆಯ ವಿರುದ್ಧ ಧ್ವನಿ ಎತ್ತದಿದ್ದರೆ ನ್ಯಾಯಾಂಗ ವ್ಯವಸ್ಥೆ ಕೂಡ ಜಿಡ್ಡುಗಟ್ಟೀತು,' ಎಂದು ವಕೀಲರು ಆತಂಕ ವ್ಯಕ್ತಪಡಿಸಿದರು.
"ನ್ಯಾ. ಜಯಂತ್ ಪಟೇಲ್ ಅತ್ಯುತ್ತಮ ನ್ಯಾಯಮೂರ್ತಿಗಳಲ್ಲೊಬ್ಬರು. ಅನೇಕ ಜಟಿಲ ಪ್ರಕರಣಗಳ ತೀರ್ಪು ನೀಡಿ ಗಮನ ಸೆಳೆದವರು. ಇಂತಹ ನ್ಯಾಯಮೂರ್ತಿ ವಿರುದ್ಧ ಯಾವುದೋ ಒಂದು ಶಕ್ತಿ ನ್ಯಾಯದಾನಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ನ್ಯಾ. ಜಯಂತ್ ಪಟೇಲ್ ತಮಗಾದ ಅನ್ಯಾಯದಿಂದ ಮನನೊಂದು ರಾಜೀನಾಮೆ ನೀಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಮೇಲಿನ ಈ ಕ್ರಮ ಖಂಡನೀಯ ಎಂದು," ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಬಲ್ಲಾಳ್ ಹೇಳಿದರು.
ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ. ಚೆಂಗಪ್ಪ, ಹಾಲಿ ಉಪಾಧ್ಯಕ್ಷ ಪುಷ್ಪಲತಾ ಯು.ಕೆ., ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ಜತೆ ಕಾರ್ಯದರ್ಶಿ ರೂಪಾ ಕೆ., ಕೋಶಾಧಿಕಾರಿ ಸುಜಿತ್ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

189 ಸಂಘಗಳಿಂದ ಕಲಾಪ ಬಹಿಷ್ಕಾರ
ಕರ್ನಾಟಕದಾದ್ಯಂತ ಇರುವ 189 ವಕೀಲರ ಸಂಘಗಳು ಒಟ್ಟಾಗಿ ಇಂದು ಕಲಾಪ ಬಹಿಷ್ಕಾರ ಹಾಕಿವೆ. ಕರ್ನಾಟಕದಾದ್ಯಂತ ಯಾವ ನ್ಯಾಯಾಲಯದಲ್ಲೂ ಇಂದು ವಕೀಲರು ಕಲಾಪ ಬಹಿಷ್ಕರಿಸಿದ್ದಾರೆ.
"ಕೊಲಿಜಿಯಂ ಅಸಮರ್ಥನೀಯವಾಗಿದೆ. ನ್ಯಾಯಮೂರ್ತಿ ಪಟೇಲ್ ಈಗಾಗಲೇ ರಾಜಿನಾಮೆ ನೀಡಿದ್ದಾರೆ ಮತ್ತು ಅಲ್ಲಿಗೆ ವಿಷಯ ಅಂತ್ಯಗೊಳ್ಳುತ್ತದೆ. ನ್ಯಾಯಾಂಗದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಇಂತಹ ಘಟನೆಗಳಿಗೆ ದಾರಿ ಕಲ್ಪಿಸುತ್ತಿದೆ. ನಾವು ಇದನ್ನು ಕೊನೆಗೊಳಿಸಲು ಬಯಸುತ್ತೇವೆ," ಎಂದು ರಾಜ್ಯ ವಕೀಲರ ಸಂಘದ ಉಪ ಕಾರ್ಯದರ್ಶಿ ವೈ.ಆರ್.ಸದಾಶಿವ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಇನ್ನು ಗುಜರಾತ್ ವಕೀಲರ ಸಂಘದಂತೆ ಕರ್ನಾಟಕ ವಕೀಲರ ಸಂಘವು, ಜಯಂತ್ ಪಟೇಲ್ ರನ್ನು ವರ್ಗಾವಣೆ ಮಾಡಿರುವ ಕೊಲಿಜಿಯಂನ ನಿರ್ಧಾರ ಪ್ರಶ್ನಿಸಲು ನಿರ್ಣಯ ಕೈಗೊಂಡಿದೆ.
ಈ ಸಂಬಂಧ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕಾನೂನು ಸಚಿವರು, ಸುಪ್ರಿಂ ಕೋರ್ಟ್ ನ ಕೊಲಿಜಿಯಂಗೆ ಪ್ರತಿಭಟನಾ ಪತ್ರ ಬರೆಯಲು ಸಂಘವು ನಿರ್ಧರಿಸಿದೆ.












Click it and Unblock the Notifications