ಕಂಬಳ ನಿಷೇಧ : ರಸ್ತೆಗಿಳಿದ ಸಿಂಗಾರಗೊಂಡ ಕೋಣಗಳು
ಮಂಗಳೂರು, ನ.29 : ರಸ್ತೆಯಲ್ಲಿ ಗದ್ದಲ, ಶೃಂಗಾರಗೊಂಡ ಕೋಣಗಳು ಸಾಲು, ರಸ್ತೆಯ ತುಂಬಾ ಕಂಬಳದ ಕೋಣಗಳು ಸಂಚಾರ, ರಸ್ತೆಯಲ್ಲಿಯೇ ಕಂಬಳ ನಡೆಸುತ್ತಾರೆನೋ? ಎಂದು ಸೇರಿದ್ದ ಜನ. ಶನಿವಾರ ಮಂಗಳೂರಿನಲ್ಲಿ ಕಂಬಳ ನಿಷೇಧ ಮಾಡಿರುವುದರ ವಿರುದ್ಧ ನಡೆದ ವಿನೂತನ ಪ್ರತಿಭಟನೆಯಲ್ಲಿ ಕಂಡುಬಂದ ದೃಶ್ಯಗಳಿವು.
ಶನಿವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತುಳುನಾಡಿನ ಐತಿಹಾಸಿಕ ಕಂಬಳ ಕ್ರೀಡೆಯನ್ನು ನಿಷೇಧಿಸಿದ ಸುಪ್ರೀಂಕೋರ್ಟ್ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಂಬಳ ಪ್ರೇಮಿಗಳು, ಕಂಬಳದ ಕೋಣಗಳೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. [ಉಡುಪಿಯಲ್ಲಿ ಕಂಬಳ ನಿಷೇಧ]

ಪ್ರಾಣಿ ಹಿಂಸೆ ಎಂಬ ಕಾರಣಕ್ಕೆ ಕಂಬಳವನ್ನು ಸುಪ್ರೀಂಕೋರ್ಟ್ ನಿಷೇಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಂಬಳ ಪ್ರೇಮಿಗಳು ಇಂದು ಪ್ರತಿಭಟನೆ ನಡೆಸಿದರು. ಕಂಬಳಕ್ಕೆ ಬಳಸುವ ಕೋಣಗಳನ್ನು ಶೃಂಗರಿಸಿ ಪ್ರತಿಭಟನೆಗೆ ಕರೆದುಕೊಂಡು ಬಂದಿದ್ದರು. [ಕಂಬಳದ ಪರ ನಿಂತ ಸರ್ಕಾರ]

ಕಂಬಳ ನಿಷೇಧದ ಹಿನ್ನೆಲೆಯಲ್ಲಿ ಶಿರ್ವದಲ್ಲಿ ನಡೆಯಬೇಕಿದ್ದ ಕಂಬಳವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶದ ಅನ್ವಯ ನಿಲ್ಲಿಸಲಾಗಿತ್ತು. ಇದನ್ನು ವಿರೋಧಿಸಿ ಜಿಲ್ಲೆಯ ಕಂಬಳ ಪ್ರೇಮಿಗಳು ಪ್ರತಿಭಟನೆ ನಡೆಸಿದರು. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಬಲ್ಮಠದಿಂದ ಹೊರಟ ಕಂಬಳದ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿಯವರೆಗೆ ಮುಂದುವರಿಯಿತು. ಕಂಬಳದ ಕೋಣಗಳು, ಕಂಬಳ ಪ್ರೇಮಿಗಳು ಪ್ರತಿಭಟನೆಯಲ್ಲಿ ಸಾಗುತ್ತಾ ಕಂಬಳ ಬೇಕು' ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಜನರಿಗೆ ನಾಸಿಕ್ ಬ್ಯಾಂಡ್ ಸಾಥ್ ನೀಡಿತು. ಕೆಸರು ಗೆದ್ದೆಯಲ್ಲಿ ಓಡುತ್ತಿದ್ದ ಕಂಬಳದ ಕೋಣಗಳು ಟಾರ್ ರಸ್ತೆಯಲ್ಲಿ ಜನರೊಂದಿಗೆ ಸಾಗಿ, ಜಿಲ್ಲಾಡಳಿತದ ವಿರುದ್ಧ ಮೌನವಾಗಿ ಪ್ರತಿಭಟನೆ ನಡೆಸಿದವು.

ಕಂಬಳದ ಪರ ನಿಂತ ಸರ್ಕಾರ : ಉಡುಪಿ-ಮಂಗಳೂರು ಭಾಗದ ಜಾನಪದ ಕ್ರೀಡೆ ಕಂಬಳಕ್ಕೆ ನಿಷೇಧ ಹೇರುವುದು ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕಂಬಳದೊಂದಿಗೆ ಸ್ಥಳೀಯ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಗಿದೆ.

ಕರ್ನಾಟಕ ಸರ್ಕಾರ ಕಂಬಳ ನಿಷೇಧ ಮಾಡದಂತೆ ಕೋರಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹಾಗೂ ರಾಷ್ಟ್ರೀಯ ಪಶು ಕಲ್ಯಾಣ ಸಂಸ್ಥೆಗೆ ಪತ್ರ ಬರೆಯಲು ತೀರ್ಮಾನಿಸಿದೆ. ಅಗತ್ಯಬಿದ್ದರೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಮೊದಲು ಉಡುಪಿಯಲ್ಲಿ ಕಂಬಳ ನಿಷೇಧ ಮಾಡಲಾಗಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದರು. ನಂತರ ಮಂಗಳೂರು ಜಿಲ್ಲಾಡಳಿತವೂ ಕಂಬಳಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿತು.












Click it and Unblock the Notifications