ಉದ್ಯೋಗ ಮೇಳ: ಮಂಗಳೂರಲ್ಲಿ ಮಾ.3ರಂದು ನಿರುದ್ಯೋಗಿಗಳಿಗೆ ಸುವರ್ಣಾವಕಾಶ
ಮಂಗಳೂರು, ಫೆಬ್ರವರಿ 26: ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬೃಹತ್ ಉದ್ಯೋಗ ಮೇಳ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾರ್ಚ್ ಮೂರನೇ ತಾರೀಖಿನಂದು ಮಂಗಳೂರಿನ ಎಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು, ನೂರಕ್ಕೂ ಅಧಿಕ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಪದವೀಧರರು, ಇಂಜಿನಿಯರಿಂಗ್,ಡಿಪ್ಲೋಮಾ ಪದವೀಧರರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುಮಾರು 100ಕ್ಕೂ ಅಧಿಕ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು ,ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯ ಯುವ ಜನರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಮಾರ್ಚ್ 3ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಮಂಗಳೂರು ನಗರದಲ್ಲಿರುವ ಎಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೂರಕ್ಕೂ ಅಧಿಕ ಕಂಪೆನಿಗಳು ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ ಸೇರಿದಂತೆ ಪದವೀಧರರು, ಬಿ.ಇ, ಡಿಪ್ಲೋಮಾ, ಐಟಿಐ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದಿದ್ದಾರೆ.
ಅಂಕಪಟ್ಟಿ ಜೊತೆ ಆಧಾರ್ ಕಡ್ಡಾಯ:
ಉದ್ಯೋಗ ಮೇಳಕ್ಕೆ ಬರುವಾಗ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಮತ್ತು ಅಂಕಪಟ್ಟಿಯನ್ನು ಕಡ್ಡಾಯವಾಗಿ ತರಬೇಕು. ಸ್ಥಳದಲ್ಲೇ ನೋಂದಣಿ ಮಾಡಬಹುದಾಗಿದ್ದು, ಅರ್ಹ ಕಂಪೆನಿಗಳಿಗೆ ಉದ್ಯೋಗ ಅರ್ಜಿ ಸಲ್ಲಿಸಬಹುದಾಗಿದೆ. ಒರ್ವ ವಿದ್ಯಾರ್ಥಿ ಮೂರು ಕಂಪೆನಿಗಳಿಗೆ ಅರ್ಜಿ ಹಾಕಬಹುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ವಿದ್ಯಾವಂತ ನಿರುದ್ಯೋಗಿಗಳಿಗೆ ವರದಾನ:
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಈ ಉದ್ಯೋಗ ಮೇಳವನ್ನು ಉದ್ಫಾಟನೆ ಮಾಡಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಹತೆಯನ್ನು ಹೊಂದಿದರೂ ಕೆಲಸ ಸಿಗದ ವಿದ್ಯಾವಂತರಿಗೆ ಈ ಉದ್ಯೋಗ ಮೇಳ ವರದಾನ ಆಗಲಿದೆ. ಶೇ 60ರಷ್ಟು ವಿದ್ಯಾರ್ಥಿಗಳಿಗೆ ಈ ಉದ್ಯೋಗ ಮೇಳದಲ್ಲಿ ಪ್ಲೇಸ್ ಮೆಂಟ್ ಮಾಡುವ ಗುರಿ ಇದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.












Click it and Unblock the Notifications