ಕತಾರ್ ನಲ್ಲಿ ಬೀದಿಗೆ ಬಿದ್ದ ರಾಜ್ಯದ ಯುವಕನಿಗೆ ನೆರವು
ಮಂಗಳೂರು, ಫೆಬ್ರವರಿ 6 : ನೂರಾರು ಆಸೆಗಳನ್ನಿಟ್ಟುಕೊಂಡು ಮೇಸ್ತ್ರಿ ಕೆಲಸಕ್ಕಾಗಿ ಕತಾರ್ ಗೆ ತೆರಳಿದ್ದ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದ ದಕ್ಷಿಣ ಕನ್ನಡದ ವ್ಯಕ್ಯಿಯೊಬ್ಬರಿಗೆ ಸಹಾಯ ನೀಡಿರುವ ಇಂಡಿಯನ್ ಸೋಷಿಯಲ್ ಫೋರಂ (ಐಎಸ್‌ಎಫ್), ಆತ ತನ್ನ ತವರಿನ ಮಡಿಲು ಸೇರುವಲ್ಲಿ ಮಹತ್ವದ ಪ್ರಾತ್ರ ವಹಿಸಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕೇಪುಕೋಡಿಯ ವೀರ ಪೂಜಾರಿ ಎಂಬುವವರ ಪುತ್ರ ವೆಂಕಪ್ಪ ಪೂಜಾರಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಆದರೆ, ಹೆಚ್ಚಿನ ಗಳಿಕೆಯ ಆಸೆಯಿಂದಾಗಿ 2016ರ ಮೇ 4ರಂದು ಮಂಗಳೂರಿನ ಏಜೆಂಟ್ ಒಬ್ಬರ ಸಹಾಯದಿಂದ ಕತಾರ್‌ಗೆ ತೆರಳಿದ್ದರು.

ಮೊದಲೆ ನಿಗದಿಯಾಗಿದ್ದಂತೆ ಕತಾರ್ ನ 'ಅಲ್ ತಗ್ತೀದ್ ಸ್ಟೋನ್ ಆಂಡ್ ಮಾರ್ಬಲ್ಸ್ ಕಂಪೆನಿ'ಯಲ್ಲಿ ಗೆ ಕೆಲಸ ಸಿಕ್ಕಿತ್ತಾದರೂ ಕೆಲಸಕ್ಕೆ ಸೇರಿ ಎರಡೇ ತಿಂಗಳಾಗುಷ್ಟರಲ್ಲಿ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಆ ಕಂಪೆನಿ ಬಂದ್ ಆಯಿತು.
ಈ ಕಂಪೆನಿಯಲ್ಲಿ ಕೆಲಸಕ್ಕಿದ್ದ ಒಟ್ಟು 30 ಮಂದಿಯಲ್ಲಿ 29 ಮಂದಿ ಅವರವರ ಊರಿಗೆ ಮರಳಿದರೆ ವೆಂಕಪ್ಪ ಪೂಜಾರಿ ಮಾತ್ರ ಊರಿಗೆ ಮರಳಲು ಹಣವಿಲ್ಲದೆ ಅಲ್ಲೇ ಬಾಕಿಯಾದರು.
ಒಂದೆಡೆ ಕೆಲಸವಿಲ್ಲ. ಮತ್ತೊಂದೆಡೆ ಪ್ರಾಯೋಜಕರ ಸ್ಪಂದನೆ ಇಲ್ಲ. ತವರಿಗೆ ಮರಳೋಣವೆಂದರೆ, ಕೈಯಲ್ಲಿ ಹಣವಂತೂ ಇಲ್ಲ. ಅದರ ಜೊತೆಗೆ ಪಾಸ್‌ಪೋರ್ಟ್ ಕೂಡಾ ಇಲ್ಲ. ಹಾಗಾಗಿ, ಬೀದಿಬದಿಯಲ್ಲಿ ಗುಜರಿ ಹೆಕ್ಕಿ ಮಾರಾಟ ಮಾಡಿ ಹೊಟ್ಟೆ ತುಂಬಿಸುತ್ತಾ ಸಂಕಷ್ಟ ಸ್ಥಿತಿಯಲ್ಲಿ ದಿನದೂಡುತ್ತಿದ್ದರು. ಈ ವಿಷಯವನ್ನು ಅರಿತ ಕತಾನ ರ್ ಘಟಕ ಐಎಸ್‌ಎಫ್ ನೆರವು ನೀಡಿ ಊರಿಗೆ ಕಳುಹಿಸಿದೆ.
ಬಂದ್ ಆದ ಕಂಪೆನಿಯಲ್ಲಿ ಎರಡು ತಿಂಗಳು ದುಡಿದರೂ ವೆಂಕಪ್ಪ ಪೂಜಾರಿಗೆ ಒಂದು ರೂಪಾಯಿ ಸಂಬಳ ಸಿಕ್ಕಿರಲಿಲ್ಲ. ಊರಿಗೆ ಮರಳುವ ಎಂದರೆ ವಿಮಾನದ ಟಿಕೆಟ್‌ಗೆ ಬೇಕಾದಷ್ಟು ಹಣ ಇರಲಿಲ್ಲ. ಎಲ್ಲಕ್ಕಿಂತಲೂ ದೊಡ್ಡ ಸಮಸ್ಯೆ ಎಂದರೆ ನನ್ನ ಪಾಸ್‌ಪೋರ್ಟ್ ತೆಗೆದುಕೊಂಡು ಹೋದ ಸುಡಾನ್ ಮೂಲದ ಕಂಪೆನಿಯ ಮಾಲೀಕನ ಪತ್ತೆಯೇ ಇರಲಿಲ್ಲ. ಹೀಗಾಗಿ ಯಾವ ದಾರಿಯೂ ಕಾಣದೆ ದಯನೀಯ ಸ್ಥಿತಿಯಲ್ಲಿ ಕೊರಗುತ್ತಾ ಅಲ್ಲಿ ಕಾಲ ಕಳೆದಿದ್ದರು.
ಕಂಪೆನಿ ನಿಂತು ಹೋಗಿದ್ದರೂ ಕಂಪೆನಿಗೆ ಸೇರಿದ ಒಂದು ಕೊಠಡಿ ವಾಸ್ತವ್ಯಕ್ಕೆ ಲಭಿಸಿತ್ತು. ಆದರೆ ಕೊಠಡಿಯ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ದುಡಿಮೆ ಇಲ್ಲದಿದ್ದರಿಂದ ಊಟಕ್ಕೂ ಹಣವಿರಲಿಲ್ಲ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಇತ್ಯಾದಿಗಳನ್ನು ಹೆಕ್ಕಿ ಗುಜರಿ ಅಂಗಡಿಗೆ ಮಾರಾಟ ಮಾಡಿ ಹೊಟ್ಟೆ ತುಂಬಿಸಿ ಕತ್ತಲ ಕೋಣೆಯಲ್ಲಿ ಬೊಂಬತ್ತಿ ಉರಿಸಿ ಸಂಕಷ್ಟದ ಜೀವನ ನಡೆಸುತ್ತಿದ್ದೆ ಎಂದು 'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ವೆಂಕಪ್ಪ ಪೂಜಾರಿ ಹೇಳಿದ್ದಾರೆ.
ಈತ ಸ್ವಗ್ರಾಮದಿಂದ ಬಂದ ಸುದ್ದಿಯೊಂದು ಐಎಸ್‌ಎಫ್ ಗಮನ ಸೆಳೆಯಿತು. ಇದರ ಬೆನ್ನಟ್ಟಿದ ಸಂಘಟನೆಯ ಸದಸ್ಯರ ಕೈಗೆ ವೆಂಕಪ್ಪ ಸಿಕ್ಕಿದರು.
ಈ ಬಗ್ಗೆ ಮಾತನಾಡುವ ವೆಂಕಪ್ಪ, ' ನನ್ನನ್ನು ಅವರು ಅವರಲ್ಲೊಬ್ಬರಂತೆ ಕಂಡು ಆತ್ಮೀಯತೆಯಿಂದ ಅವರ ರೂಂಗೆ ಕರೆದುಕೊಂಡು ಹೋಗಿ ಸುಮಾರು ಒಂದೂವರೆ ತಿಂಗಳ ಕಾಲ ಸತ್ಕರಿಸಿದರು. ನಾನು ನೀಡಿದ ಮಾಹಿತಿಯನುಸಾರ ನನ್ನ ಪಾಸ್‌ಪೋರ್ಟ್ ತೆಗೆದುಕೊಂಡು ಹೋಗಿದ್ದ ಕಂಪೆನಿಯ ಮಾಲೀಕನನ್ನು ಹುಡುಕಾಡಿದ ಐಎಸ್‌ಎಫ್ ಸಂಘಟನೆಯ ಸದಸ್ಯರು ಆತನನ್ನು ಪತ್ತೆ ಹಚ್ಚಿ ಆತನಿಂದ ನನ್ನ ಪಾಸ್‌ಪೋರ್ಟ್‌ನ್ನು ಪಡೆದರು.
ಊರಿಗೆ ಮರಳಲು ಕಾನೂನಿನ ತೊಡಕಿತ್ತು. ಅದನ್ನು ಕೂಡಾ ಪರಿಹರಿಸಿದ ಐಎಸ್‌ಎಫ್‌ನವರು ವಿಮಾನದ ಟಿಕೆಟ್ ಮಾಡಿ ಊರಿಗೆ ಕಳುಹಿಸಿಕೊಟ್ಟರು. ಐಎಸ್‌ಎಫ್‌ನ ಈ ಸೇವೆಗೆ ನಾನು ಅಭಾರಿಯಾಗಿದ್ದೇನೆ ಅನ್ನುತ್ತಾರೆ ವೆಂಕಪ್ಪ ಪೂಜಾರಿ.
ಐಎಸ್‌ಎಫ್ ಕತಾರ್ ಘಟಕದ ಮುಖಂಡರಾದ ಇಬ್ರಾಹೀಂ ಬೊಳ್ಳೂರು, ಹಾರುನ್ ಸುರತ್ಕಲ್, ಲತೀಫ್ ಮಡಿಕೇರಿ, ಶರೀಫ್ ವಗ್ಗ, ಯಹಿಯ್ಯಾ ಪುತ್ತೂರು ಮತ್ತು ಐಎಸ್‌ಎಫ್ ಬಂಟ್ವಾಳ ತಾಲೂಕು ಪ್ರತಿನಿಧಿ ಅಶ್ರಫ್ ಮಾಚಾರ್ ಸಹಿತ ನನಗಾಗಿ ಪರಿಶ್ರಮಿಸಿದ ಇತರ ಎಲ್ಲರ ಸಹಾಯವನ್ನು ನಾನು ಮರೆಯಲ್ಲ ಅಂತಾರೆ ವೆಂಕಪ್ಪ ಪೂಜಾರಿ.












Click it and Unblock the Notifications