ಕಾಲು ಮುರಿದುಕೊಂಡ ಕಾಡಾನೆಯ ರಕ್ಷಣೆಗೆ ನಿಂತ ಅರಣ್ಯಾಧಿಕಾರಿಗಳು
ಮಂಗಳೂರು, ಮೇ 09: ಕಳೆದೆರೆಡು ತಿಂಗಳಿನಿಂದ ರಾಜ್ಯದೆಲ್ಲೆಡೆ ಒಂದಲ್ಲಾ ಒಂದು ರೀತಿಯಲ್ಲಿ ಆನೆಗಳು ಸುದ್ದಿಯಲ್ಲಿವೆ. ಚಿಕ್ಕಮಗಳೂರು ಬಳಿ ಒಂಟಿ ಸಲಗ ಬಸ್ ಅನ್ನು ಅಟ್ಟಿಸಿಕೊಂಡು ಬಂದ ಘಟನೆ ಒಂದೆಡೆಯಾದರೆ, ಇತ್ತ ಮೈಸೂರಿನಲ್ಲಿ ದಸರಾ ಆನೆ ದ್ರೋಣನಿಗೆ ಸರಿಯಾದ ಚಿಕಿತ್ಸೆ ಸಿಗದೆ ಅಸುನೀಗಿತು ಎಂಬ ಸುದ್ದಿ ವರದಿಯಾಗಿತ್ತು. ಇನ್ನು ಎಚ್ ಡಿ ಕೋಟೆ ಬಳಿ ಆನೆಯೊಂದು ರೈತನನ್ನು ಕೋರೆಯಿಂದ ತಿವಿದು ಸಾಯಿಸಿದ್ದು, ಗ್ರಾಮಸ್ಥರು ರೊಚ್ಚಿಗೆದಿದ್ದರು.
ಈ ಘಟನೆಗಳ ನಡುವೆ ಮತ್ತೊಂದು ಆನೆಯ ಸುದ್ದಿ ವರದಿಯಾಗಿದೆ. ಆದರೆ ಈ ಘಟನೆಯಲ್ಲಿ ಆನೆ ಯಾರನ್ನು ಸಾಯಿಸಿಲ್ಲ, ಅಟ್ಟಿಸಿಕೊಂಡು ಹೋಗಿಲ್ಲ. ಬದಲಾಗಿ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಸುಳ್ಯ ತಾಲೂಕಿನ ಬಾಳುಗೋಡು ಅರಣ್ಯ ಪ್ರದೇಶದಲ್ಲಿ ಮುಂಭಾಗದ ಎಡಗಾಲು ಮುರಿದು ಕಾಡಾನೆ ನರಕಯಾತನೆಪಡುತಿತ್ತು.

ಬಾಳುಗೋಡು ಗ್ರಾಮ ಸಮೀಪದ ಪದಕ ಎಂಬಲ್ಲಿ ಕಾಡಾನೆ ಕಾಲು ಮುರಿದುಕೊಂಡು ನೆಲದ ಮೇಲೆ ಊರಲು ಆಗದೆ ಯಾತನೆಪಡುತ್ತಿತ್ತು. ಆಗ ವಿಷಯ ತಿಳಿದ ಕೂಡಲೇ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ವ್ಯಾಪ್ತಿಯ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಆ ನಂತರ ನಾಗರಹೊಳೆಯಿಂದ ನುರಿತ ಡಾಕ್ಟರುಗಳನ್ನು ಮತ್ತು ಅರಿವಳಿಕೆ ತಜ್ಞರನ್ನು ಕರೆಸಿ ಚಿಕಿತ್ಸೆ ನೀಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಕಾಲಿಗೆ ಗಾಯ ಮಾಡಿಕೊಂಡಿರುವ ಕಾಡಾನೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳೇ ಸೇರಿ ಕೊಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಆರೋಪ ನಿನ್ನೆ ಕೇಳಿಬಂದಿತ್ತು. ಅರಣ್ಯಾಧಿಕಾರಿಗಳು ಸಿಬ್ಬಂದಿಗಳ ಜೊತೆಗೆ ಚರ್ಚೆ ನಡೆಸಿ ಕಾಡಿಗೆ ತೆರಳಿ ವಿಷಕಾರಿ ಚುಚ್ಚುಮದ್ದು ನೀಡುವ ಯೋಜನೆಯನ್ನು ರೂಪಿಸಿದ್ದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications