ಮೀನುಗಾರಿಕೆಗೆ ತಟ್ಟಿದ ಫಿಶ್‌ಮೀಲ್ ಉದ್ದಿಮೆಗಳ ಮುಷ್ಕರದ ಬಿಸಿ
ಮಂಗಳೂರು ಆಗಸ್ಟ್ 3: ಕರಾವಳಿಯಲ್ಲಿ ಎರಡು ತಿಂಗಳು ಮೀನುಗಾರಿಕೆ ರಜೆ ನಂತರ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಆಗಸ್ಟ್ 01ರಿಂದ ಯಾಂತ್ರೀಕೃತ ಬೋಟುಗಳು ಮೀನುಗಾರಿಕೆ ನಡೆಸಿ ಹಿಂದಿರುಗುತ್ತಿವೆ. ಆದರೆ ಮೀನು ಹಿಡಿದು ದಡಕ್ಕೆ ಬರುವ ಮೀನುಗಾರರರಿಗೆ ಫಿಶ್‌ಮೀಲ್ ಉದ್ದಿಮೆಗಳ ಮುಷ್ಕರ ಆಘಾತ ಮೂಡಿಸಿದೆ.
ಫಿಶ್ ಮೀಲ್ ಪೌಡರ್ ಸಂಬಂಧಿಸಿ ಜಿಎಸ್ ಟಿ ಇಲಾಖೆಯು ಉದ್ದಿಮೆದಾರರ ಮೇಲೆ ತೆರಿಗೆ ವಂಚನೆ ಪ್ರಕರಣ ದಾಖಲಿಸುವ ಕುರಿತು ಎಚ್ಚರಿಕೆ ನೀಡಿರುವ ಕಾರಣ ಕಂಪನಿ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ. ಇದು ಮೀನುಗಾರರನ್ನು ಕಂಗೆಡಿಸಿದೆ.
ಯಾಂತ್ರೀಕೃತ ಮೀನುಗಾರಿಕೆಯ ಮೂಲಕ ಹಿಡಿಯುವ ದೊಡ್ಡ ಪ್ರಮಾಣದ ಮೀನುಗಳಲ್ಲಿ ಶೇ.70ರಷ್ಟು ಭಾಗ ಫಿಶ್‌ಮೀಲ್ ಕಂಪನಿ ಹಾಗೂ ರಫ್ತು ವ್ಯಾಪಾರ ನಡೆಸುವ ಸಂಸ್ಥೆಗಳಿಗೆ ಹೋಗುತ್ತವೆ.

ಯಾಂತ್ರೀಕೃತ ಬೋಟುಗಳಿಗೆ ಆರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ರಾಣಿ ಫಿಶ್ ದೊರೆಯುತ್ತವೆ. ಪ್ರತೀ ಬೋಟುಗಳಲ್ಲಿ ತಲಾ 20ಟನ್ ನಷ್ಟು ರಾಣಿ ಫಿಶ್ ಬರುತ್ತವೆ. ಮೀನುಗಾರರು ಹಿಡಿದು ತಂದ ಮೀನುಗಳನ್ನು ಫಿಶ್ ಮೀಲ್ ಕಂಪನಿಗಳು ಖರೀದಿಸದಿದ್ದರೆ ಹೆಚ್ಚಿನ ಮೀನುಗಳನ್ನು ನೀರಿಗೆ ಬಿಸಾಡುವ ಪರಿಸ್ಥಿತಿ ಬರುತ್ತದೆ.
ಫಿಶ್ ಮೀಲ್ ಕಂಪನಿಗಳು ಆರಂಭಿಸಿರುವ ಮುಷ್ಕರ ಕೊನೆಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಈಗಾಗಲೇ ಮನವಿ ಸಲ್ಲಿಸಲು ಫಿಶ್ ಮೀಲ್ ಉದ್ದಿಮೆದಾರರು ನವದೆಹಲಿಗೆ ತೆರಳಿದ್ದು ಶೀಘ್ರ ಸಮಸ್ಯೆ ಪರಿಹಾರ ಗೊಳ್ಳುವ ಭರವಸೆ ಹೊಂದಲಾಗಿದೆ.












Click it and Unblock the Notifications