ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ರೀಲ್ಸ್ ಮಾಡಿ ಉದ್ಧಟತನ
ಮಂಗಳೂರು, ಡಿಸೆಂಬರ್, 19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾದ ಅಟ್ಟಹಾಸ ಮುಂದುವರೆದಿದೆ. ಪೊಲೀಸರಿಗೂ, ಕಾನೂನಿಗೂ ಜಗ್ಗದ ಅಕ್ರಮ ಮರಳುದಂಧೆಕೋರರು ತಾವು ನಡೆದಿದ್ದೇ ದಾರಿ ಎನ್ನುವಂತೆ ಮುಂದುವರೆದಿದ್ದರು. ಯಾವುದೇ ಭಯವಿಲ್ಲದಂತೆ ಸಾಮಾಜಿಕ ಜಾಲತಾಣದಲ್ಲೇ ಅಕ್ರಮ ಮರಳುಗಾರಿಕೆಯನ್ನು ರೀಲ್ಸ್ ಮಾಡಿ, ಶೇರ್ ಮಾಡುತ್ತಿದ್ದಾರೆ. ಕಾನೂನಿನ ಭಯವೇ ಇಲ್ಲದಂತೆ ಸಾಮಾಜಿಕ ಜಾಲತಾಣದಲ್ಲಿ ದಂಧೆಯ ವಿಡಿಯೋ ಬಹಿರಂಗ ಮಾಡಿದ್ದಾರೆ. ಮಲಯಾಳಂ ಚಿತ್ರ ಮಾಫಿಯಾದ ಡೈಲಾಗ್ ಬಳಸಿ ರೀಲ್ಸ್ ಮಾಡಲಾಗಿದೆ. ದಕ್ಷಿಣ ಕನ್ನಡ-ಕೇರಳ ಗಡಿಭಾಗದಲ್ಲಿ ನಡೆದ ಅಕ್ರಮ ಮರಳುಗಾರಿಕೆಯ ರೀಲ್ಸ್ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ನೇತ್ರಾವತಿ, ಕುಮಾರಾಧಾರಾ, ಪಲ್ಗುಣಿ ನದಿ ಒಡಲನ್ನು ಅಕ್ರಮ ಮರಳು ದಂಧೆಕೋರರು ಖಾಲಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದೀಗ ಹಲವು ಸಣ್ಣ ಹೊಳೆಗಳಲ್ಲೂ ಅಕ್ರಮ ಮರಳುಗಾರಿಕೆಯನ್ನು ಮುಂದುವರೆಸಿದ್ದಾರೆ.
ಅಕ್ರಮ ಮರಳುಗಾರಿಕೆಯ ವಿರುದ್ಧ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಾ. ಕೆ.ವಿ.ರಾಜೇಂದ್ರ ದಿಟ್ಟ ಕ್ರಮವನ್ನು ಕೈಗೊಂಡಿದ್ದರು. ಅಕ್ರಮ ನಡೆಯುತ್ತಿರುವ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಿ ಮರಳುದಂಧೆಗೆ ಬ್ರೇಕ್ ಹಾಕಿದ್ದರು.

ಸಕ್ರಮ ಮರಳುಗಾರಿಕೆಗೆ ಅವಕಾಶ
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಕ್ರಮ ಮರಳುಗಾರಿಕೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅವಕಾಶ ನೀಡಿದ್ದರು. ಸುಮಾರು 200 ಜನರಿಗೆ ಸಕ್ರಮ ಮರಳುಗಾರಿಕೆಗೆ ಅವಕಾಶ ನೀಡಿ ಜಿಲ್ಲಾಧಿಕಾರಿ ರವಿಕುಮಾರ್ ಆದೇಶ ಹೊರಡಿಸಿದ್ದರು. ಸಕ್ರಮ ಮರಳುಗಾರಿಕೆಗೆ ಅವಕಾಶ ನೀಡುತ್ತಿದ್ದಂತೆಯೇ, ಅಕ್ರಮ ಮರಳುಗಾರಿಕೆ ಪ್ರಾರಂಭವಾಗಿದೆ. ಈ ದಂಧೆಯ ವಿರುದ್ಧ ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಚೆಲುವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. ಜಿಲ್ಲೆಯ ಮುಲ್ಕಿ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸಿ 40 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ವಶ ಪಡಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ
ಅಕ್ರಮ ಮರಳು ದಂಧೆಯ ವಿರುದ್ಧ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಮಾತನಾಡಿ, ಅಕ್ರಮ ಮರುಳುಗಾರಿಕೆ ಇಡೀ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಇದನ್ನು ಪ್ರಶ್ನೆ ಮಾಡಲು ಹೊರಟವರಿಗೆ ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಯವರು ಸಕ್ರಮ ಮರಳುಗಾರಿಕೆಗೆ ಅವಕಾಶ ನೀಡಿದ್ದರು. ಆದರೂ ಯಾವುದೇ ಯಂತ್ರದ ಸಹಾಯವಿಲ್ಲದೆ ಕೇವಲ ಮಾನವ ಶ್ರಮದಿಂದ ಮರಳುಗಾರಿಕೆ ಮಾಡಬಹುದು ಅಂತಾ ಹೇಳಿದ್ದರು. ಆದರೆ ಈ ಆದೇಶ ಇದೀಗ ಎಲ್ಲೆಡೆ ಉಲ್ಲಂಘನೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications