ನಾನು ಕಮಿಷನ್ ಪಡೆದಿರುವುದನ್ನ ಧೃಡಪಡಿಸಿದ್ರೆ ರಾಜಕೀಯದಿಂದ ನಿವೃತ್ತಿ: ಸಿದ್ಧರಾಮಯ್ಯ
ಮಂಗಳೂರು, ಜನವರಿ, 23: ಸಿಎಂ ಆಗಿದ್ದಾಗ ನಾನು ಪರ್ಸೆಂಟೇಜ್ ತೆಗೊಂಡಿದ್ದರೆ ರಾಜಕೀಯ ನಿವೃತ್ತಿ ಪಡೆದು ಸನ್ಯಾಸಿಯಾಗುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸವಾಲು ಹಾಕಿದ್ದಾರೆ.
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಕಾಂಗ್ರೆಸ್‌ನಿಂದ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ವರ್ಗಾವಣೆ ಎಲ್ಲದಕ್ಕೂ 40% ಕಮಿಷನ್ ಲಂಚ ಕೇಳುತ್ತಾರೆ. ಸಿಎಂ ಕೊಠಡಿಯಲ್ಲೇ ಹೋಟೆಲ್ ತಿಂಡಿ ದರದಂತೆ ಲಂಚದ ಬೋರ್ಡ್ ಹಾಕಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಇಂತಹ ಭ್ರಷ್ಟ ಸರ್ಕಾರ ಯಾವತ್ತೂ ಬಂದಿಲ್ಲ. ಬಸವರಾಜ ಬೊಮ್ಮಾಯಿಯವರೇ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ನೀವು ಹೇಳುವುದಾದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ. ಮಾತೆತ್ತಿದರೆ ಧಮ್, ತಾಕತ್ ಇದೆಯೇ ಎಂದು ಬೊಮ್ಮಾಯಿಯವರು ಕೇಳುತ್ತಾರೆ. ಆದರೆ ಚರ್ಚೆಗೆ ಬರುವುದಕ್ಕೆ ಅವರಿಗೆ ಧಮ್, ತಾಕತ್ ಎರಡೂ ಇಲ್ಲ. ಆದರೆ ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿದೆ, ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲೆಸೆದರು.
ಬಿಜೆಪಿ ಕರಾವಳಿಯಲ್ಲಿ ದ್ವೇಷದ ರಾಜಕಾರಣದ ಮೂಲಕ ಬೆಂಕಿ ಹಚ್ಚಿದೆ. ಹಿಂದುತ್ವ, ಧರ್ಮ, ದೇವರ ಹೆಸರಿನಲ್ಲಿ ಯುವಕರಿಗೆ ಅಫೀಮು ಕುಡಿಸಿ ಮತಾಂಧರನ್ನಾಗಿ ಮಾಡುತ್ತಿದೆ. ಒಂದು ದೇಶ, ಧರ್ಮ, ಒಂದು ಭಾಷೆ ಎನ್ನುವ ಆರ್‌ಎಸ್‌ಎಸ್‌ನ ಮನುವಾದಿ ಸಿದ್ಧಾಂತ ಈ ದೇಶದಲ್ಲಿ ಸಾಧ್ಯವಿಲ್ಲ. ಮಂಗಳೂರು, ಉಡುಪಿಯನ್ನು ಹಿಂದುತ್ವದ ಲ್ಯಾಬೋರೇಟರಿ ಮಾಡಲಾಗಿದೆ. ಯುವಕರನ್ನ ಜಾತಿ ಧರ್ಮದ ಆಧಾರದಲ್ಲಿ ಎತ್ತಿ ಕಟ್ಟಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಮೇಲೆ ನಂಬಿಕೆಯಿಡಿ- ಸಿದ್ದರಾಮಯ್ಯ
ಕಾಂಗ್ರೆಸ್ ದೇಶದ ಐಕ್ಯತೆಗಾಗಿ ಪಾದಯಾತ್ರೆ ಮಾಡಿತ್ತು. ಬಿಜೆಪಿ ಯಾವತ್ತಾದಾರೂ ಮಾಡಿದೆಯೇ. ಒಡೆದ ಮನಸ್ಸು ಒಂದುಗೂಡಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್‌ನ ಬದ್ಧತೆ ಹಾಗೂ ಕಾಳಜಿಯನ್ನು ಮೊದಲು ಕರಾವಳಿಗರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮೇಲೆ ರಾಜ್ಯದ ಜನರು ನಂಬಿಕೆಯಿಡಿ. ನೂರಕ್ಕೆ ನೂರು ನಾವು ನೀಡಿರುವ ಭರವಸೆಯನ್ನು ಈಡೇರಿಸುತ್ತೇವೆ. ನಿಮ್ಮ ವಿಶ್ವಾಸಕ್ಕೆ ದ್ರೋಹ ಮಾಡದೆ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ರಾಜ್ಯದ ಜನತೆಯಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಹಿಂದೂ ವಿರೋಧಿ ಎಂದು ಬ್ರಾಂಡ್ ಮಾಡುತ್ತಾರೆ
ಭಾರತ ಹಲವು ಧರ್ಮ, ಭಾಷೆಗಳು ಒಗ್ಗೂಡಿಕೊಂಡು ಹೋಗುವ ದೇಶವಾಗಿದೆ. ನನ್ನನ್ನು ಆರ್‌ಎಸ್ಎಸ್‌ನವರು ಹಿಂದೂ ವಿರೋಧಿ ಅಂತಾ ಬ್ರಾಂಡ್ ಮಾಡುತ್ತಾರೆ. ಆದರೆ ಮಹಾತ್ಮ ಗಾಂಧಿ ಕೊಂದ ಗೋಡ್ಸೆ, ಸಾವರ್ಕರ್ ಆರ್‌ಎಸ್‌ಎಸ್‌ಗೆ ಹಿಂದೂ. ಗಾಂಧಿ, ನೆಹರೂ, ಅಂಬೇಡ್ಕರ್ ಆರ್‌ಎಸ್‌ಎಸ್‌ಗೆ ಹಿಂದೂವಲ್ಲ. ನೆಹರೂ ಕಟ್ಟಿದ್ದನ್ನ ಮಾರಾಟ ಮಾಡುವ ನರೇಂದ್ರ ಮೋದಿ ಮಾತ್ರ ಹಿಂದೂ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ.ಶಿ ವಾಗ್ದಾಳಿ
ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾದ ಜನರನ್ನು ನೋಡಿದರೆ ಇಲ್ಲಿ ನಾಲ್ಕೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗುವುದರಲ್ಲಿ ಸಂದೇಹವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದಹಾಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗಷ್ಟೇ ಗದಗದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ವಿಧಾನಸೌಧದ ಗೋಡೆಗಳು ಕಾಸು ಕಾಸು ಅಂತಿವೆ. ಬಿಜೆಪಿ ಕಮಿಷನ್ ಸರ್ಕಾರ ಎಂದು ಟೀಕಿಸಿದ್ದರು. ಗದಗದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಇದ್ದರೂ ಯಾವ ಕೆಲಸ ಮಾಡಿದ್ದೇವೆ ಅನ್ನುವುದರ ಬಗ್ಗೆ ಒಂದು ಸಾಕ್ಷಿ ಕೊಡಲಿ. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರಾಜ್ಯದಲ್ಲಿ ಸಾಕ್ಷಿ ಕೊಡುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿಯವರು ಖಾತೆಗೆ 15 ರೂ. ಸಹ ಹಾಕಲಿಲ್ಲ
ಬಿಜೆಪಿಯವರು 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇವೆ ಅಂದಿದ್ದರು. 15 ರೂಪಾಯಿ ಸಹ ಹಾಕಲಿಲ್ಲ. ಕೊರೊನಾ ಕಾಲದಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಾಗಿ ಕಮಿಷನ್ ಪಡೆಯುವ ಮೂಲಕ ಅಲ್ಲಿಯೂ ಹಗರಣ ಮಾಡಿತ್ತು. ಬಿಜೆಪಿ ಸರ್ಕಾರದಲ್ಲಿ ಕಮಿಷನ್ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಸ್ವತಃ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಈ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ಹಿಂದೆ ಪರಿಶುದ್ಧ ಆಡಳಿತ ನೀಡಿದೆ. ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಅಂತಾ ಮಾಡಿ 10 ಲಕ್ಷ ಕೋಟಿ ಬಂಡವಾಳ ಬಂದಿದೆ ಎಂದು ಹೇಳಿದ್ದಾರೆ. ಹಾಗೆಯೇ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಅವರೇ ನಿಮ್ಮೂರಿಗೆ ಎಷ್ಟು ಲಕ್ಷ ಬಂತು ಹೇಳಿ ಎಂದು ಸವಾಲು ಹಾಕಿದ್ದರು.












Click it and Unblock the Notifications