ಸಂಸದ ನಳಿನ್ ರಷ್ಟು ಮೂರ್ಖ ನಾನಲ್ಲ: ಸಚಿವ ರಮಾನಾಥ ರೈ
ಮಂಗಳೂರು, ಆಗಸ್ಟ್ 29: 'ಸಂಸದ ನಳಿನ್ ಕುಮಾರ್ ಕಟೀಲ್ ಅವರಷ್ಟು ಮೂರ್ಖ ನಾನಲ್ಲ' ಎಂದು ಮಂಗಳೂರಿನ ಐಜಿಪಿ ನಿವಾಸದ ಗಂಧದ ಮರ ಕಳ್ಳತನದ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೆಂಡಾಮಂಡಲರಾಗಿದ್ದಾರೆ.
ಐಜಿಪಿ ಬಂಗಲೆಯಲ್ಲಿನ ಗಂಧದ ಮರವನ್ನು ರಮಾನಾಥ್ ರೈ ಮನೆಗೆ ಒಯ್ದಿರಬಹುದು ಎಂದು ಹೇಳಿಕೆ ನೀಡಿದ್ದ ಸಂಸದ ಕಟೀಲ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದ್ದಾರೆ. ಸಂಸದರ ಸ್ಥಾನದಲ್ಲಿರುವ ನಳಿನ್ ಕುಮಾರ್ ಕಟೀಲ್ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದರ ಮನೆ ಐಜಿಪಿ ಬಂಗಲೆಯ ಸಮೀಪದಲ್ಲೇ ಇದೆ. ನನ್ನ ಮನೆ ದೂರದಲ್ಲಿದೆ. ಗಂಧದ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡಲು ಮತೀಯವಾದಿಗಳ ನಿಯೋಜಿತ ಕೃತ್ಯ ನಡೆಯುತ್ತಿದೆ. ಸಾಮರಸ್ಯಕ್ಕೆ ತೊಡಕುಂಟು ಮಾಡುವ ಅನೇಕ ಸನ್ನಿವೇಶಗಳನ್ನು ಜಿಲ್ಲೆಯಲ್ಲಿ ಸೃಷ್ಟಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಜೈಲಿನಲ್ಲಿಯೇ ವಿಚಾರದಿಂದ ಕೈದಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಇಡಲಾಗುತ್ತಿದೆ. ಇಂತಹ ವಾತಾವರಣ ಸೃಷ್ಟಿಯಾಗಿರುವುದು ವಿಷಾದನೀಯ. ವಿದ್ಯಾರ್ಥಿ ಸಂಘಟನೆಗಳು ಕೂಡ ಮತೀಯವಾದಿ ಸಂಘಟನೆಗಳಾಗಿ ಮಾರ್ಪಟ್ಟಿವೆ ಎಂದು ಅವರು ದೂರಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಗೆಡುತ್ತಿರುವ ಸಾಮರಸ್ಯ ಮರುಸ್ಥಾಪನೆಗಾಗಿ ಸಾಮರಸ್ಯ ನಡಿಗೆ ನಡೆಸುವುದಾಗಿ ಹೇಳಿದ ಅವರು, ಬರುವ ಸೆಪ್ಟೆಂಬರ್ ಹನ್ನೆರಡರಂದು ಪರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಆಯೋಜಿಸಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯೆಗಳಿಗೆ ಕಾರಣವಾದ ಬಿಜೆಪಿ ಹಾಗೂ ಪಿಎಫ್ಐ, ಎಸ್ ಡಿಪಿಐ ಹೊರತುಪಡಿಸಿ ಬೇರೆ ಎಲ್ಲರೂ ಶಾಂತಿಗಾಗಿ ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.












Click it and Unblock the Notifications