ಗುಳಿಗ ದೈವದ ಬಗ್ಗೆ ಅವಹೇಳನಕಾರಿ ಹೇಳಿಕೆ: ಆರಗ ಜ್ಞಾನೇಂದ್ರ ಮಂಗಳೂರಿಗೆ ಬಂದು ಕ್ಷಮೆಯಾಚಿಸಬೇಕೆಂದು ಆಗ್ರಹ
ಗೃಹ ಸಚಿವ ಗುಳಿಗ ದೈವದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು,ಇದನ್ನು ಖಂಡಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗ ಮಂಗಳೂರಿನ ಪಚ್ಚನಾಡಿ ಬಂದಲೆಯ ಶ್ರೀಮಂತ ರಾಜಗುಳಿಗ ಕ್ಷೇತ್ರಕ್ಕೆ ಆಗಮಿಸಿ ದೈವದ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿತು.
ಮಂಗಳೂರು, ಮಾರ್ಚ್, 19: ಗೃಹ ಸಚಿವ ಆರಗ ಜ್ಞಾನೇಂದ್ರ ಗುಳಿಗ ದೈವದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು, ಇದನ್ನು ಖಂಡಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗ ಮಂಗಳೂರಿನ ಪಚ್ಚನಾಡಿ ಬಂದಲೆಯ ಶ್ರೀಮಂತ ರಾಜಗುಳಿಗ ಕ್ಷೇತ್ರಕ್ಕೆ ಆಗಮಿಸಿ ದೈವದ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿತು.
ರತ್ನಾಕರ್ ಅಭಿಮಾನಿ ಬಳಗದವರು 50ಕ್ಕೂ ಅಧಿಕ ಜನ ತೀರ್ಥಹಳ್ಳಿಯಿಂದ ಮಂಗಳೂರಿನ ಬಂದಲೆ ಗುಳಿಗ ಕ್ಷೇತ್ರಕ್ಕೆ ವಾಹನ ಜಾಥಾದಲ್ಲಿ ಆಗಮಿಸಿದ್ದಾರೆ. ಈ ವೇಳೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಗುಳಿಗ ದೈವವನ್ನು ಅವಮಾನಿಸಿ ಮಾತನಾಡಿರುವ ಆರಗ ಜ್ಞಾನೇಂದ್ರರಿಗೆ ಶಿಕ್ಷೆ ಕೊಡಬೇಕು ಎಂದು ನಾವು ದೈವದ ಮುಂದೆ ಕೇಳುವುದಿಲ್ಲ. ಆದರೆ ಅವರಿಗೆ ಒಳ್ಳೆಯ ಬುದ್ಧಿ ನೀಡಬೇಕು. ಅವರು ತುಳುನಾಡಿನ ಯಾವುದಾದರೊಂದು ಗುಳಿಗ ಕ್ಷೇತ್ರಕ್ಕೆ ಆಗಮಿಸಿ ಕ್ಷಮೆಯಾಚನೆ ಮಾಡುವಂತಾಗಬೇಕು ಎಂದರು.

ಆರಗ ಜ್ಞಾನೇಂದ್ರ ಕ್ಷಮೆಯಾಚಿಸಬೇಕು
ಕ್ಷಮೆಯಾಚಿಸಿದರೆ ತೀರ್ಥಹಳ್ಳಿಯಲ್ಲಿ ಮತ್ತೆ ನಾವು ಅದ್ಧೂರಿಯಾಗಿ 'ಶಿವದೂತೆ ಗುಳಿಗೆ' ನಾಟಕವನ್ನು ಆಯೋಜಿಸುತ್ತೇವೆ ಎಂದು ಹರಕೆ ಹೊತ್ತುಕೊಂಡಿದ್ದಾರೆ. ಆರಗ ಜ್ಞಾನೇಂದ್ರ ಅವರಿಗೆ ಕೆಡುಕು ಉಂಟು ಮಾಡದೆ ಒಳ್ಳೆಯ ಬುದ್ಧಿ ನೀಡುವಂತೆ ಪ್ರಾರ್ಥನೆ ಮಾಡಲಾಗಿದೆ. ಈ ವೇಳೆ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಪದ್ಮರಾಜ್ ಕುದ್ರೋಳಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಮತ್ತೊಂದೆಡೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಳುನಾಡಿಗೆ ಆಗಮಿಸಿ ಯಾವುದಾದರೊಂದು ದೈವಸ್ಥಾನದಲ್ಲಿ ಕ್ಷಮೆಯಾಚನೆ ಮಾಡಬೇಕೆಂದು ನಲಿಕೆಯವರ ಸಮಾಜ ಸೇವಾ ಸಂಘದ ತಾಲೂಕು ಸಮಿತಿಯ ಉಪಾಧ್ಯಕ್ಷ ರಾಮು ಶಿಶಿಲ ಆಗ್ರಹಿಸಿದರು.

ಬಿಜೆಪಿ ನಾಯಕರಿಂದ ದೈವಗಳಿಗೆ ಅವಮಾನ
ಈಗಾಗಲೇ ಸಿ.ಟಿ.ರವಿ, ಡಾ.ಅಶ್ವತ್ಥ್ ನಾರಾಯಣ್, ಮಾಧುಸ್ವಾಮಿಯವರಿಂದ ದೈವಗಳಿಗೆ ಅವಮಾನವಾಗಿತ್ತು. ಇದೀಗ ಆ ಸಾಲಿಗೆ ಆರಗ ಜ್ಞಾನೇಂದ್ರ ಸೇರ್ಪಡೆಯಾಗಿದ್ದಾರೆ. ಹಿಂದೂ ಸಂಸ್ಕೃತಿಯ ರಾಕ್ಷಕರು ಎನ್ನುವವರಿಂದಲೇ ತುಳುನಾಡಿನ ದೈವಗಳಿಗೆ ಪದೇಪದೇ ಅವಮಾನ ಆಗುತ್ತಿರುವುದು ಖೇದಕರ.
ಯಾವುದೇ ಪಿಂಚಣಿ ದೊರಕಿಲ್ಲ
ಅಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ದೈವ ನರ್ತಕರಿಗೆ 2 ಸಾವಿರ ಮಾಸಾಶನ ನೀಡಲಾಗುತ್ತದೆ ಎಂದು ಘೋಷಣೆ ಮಾಡಿ ಹಲವು ತಿಂಗಳುಗಳು ಕಳೆದರೂ ಈವರೆಗೆ ಯಾವುದೇ ಪಿಂಚಣಿ ದೊರಕಿಲ್ಲ. ಇದೂ ಕೂಡ ದೈವ ನರ್ತಕರಿಗೆ ಮಾಡಿರುವ ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಸಮಾಧಾನ ವ್ಯಕ್ತ
ಜೊತೆಗೆ ದೈವಗಳನ್ನು ಪ್ರದರ್ಶನ ಕಲೆಗಳಿಗೆ ಬಳಸುತ್ತಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿ ಮಾತನಾಡಿದ ಅವರು, ದೈವಗಳನ್ನು ತುಳುವರ ಭಕ್ತಿಯಿಂದ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ, ನಾಟಕ, ಯಕ್ಷಗಾನಗಳಲ್ಲಿ ದೈವವನ್ನು ತಂದು ಅವಮಾನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಹಲವಾರು ಬಾರಿ ನಾವು ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಎಸ್‌ಪಿಯವರಿಗೆ ಮನವಿ ಮಾಡಿದ್ದೇವೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಈ ಬಗ್ಗೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈವರೆಗೆ ಅಂತಹ ಯಾವ ಕಾರ್ಯವೂ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಗುಳಿಗ ಹಾಗೂ ಪಂಜುರ್ಲಿ ದೈವಕ್ಕೆ ನೇರವಾಗಿ ಅವಮಾನ ಮಾಡಿರುವ ಆರಗ ಜ್ಞಾನೇಂದ್ರ ಮತ್ತು ಸಿ.ಟಿ.ರವಿಯವರು ತುಳುನಾಡಿನ ಯಾವುದಾದರೊಂದು ದೈವಸ್ಥಾನಕ್ಕೆ ಬಂದು ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದರೆ ಅವರು ಮಂಗಳೂರಿಗೆ ಬಂದಾಗ ಕಪ್ಪು ಬಾವುಟ ಹಿಡಿದು ಘೆರಾವ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಹಾಗೆಯೇ ಮುಂದಿನ ದಿನಗಳಲ್ಲಿ ದೈವಗಳನ್ನು ಅವಮಾನ ಮಾಡುವುದನ್ನು ಖಂಡಿಸಿ ದೈವಾರಾಧಕರ ಜಿಲ್ಲಾ ಸಮಾವೇಶ ನಡೆಸಲು ಚಿಂತನೆ ನಡೆಸಲಾಗುತ್ತದೆ ಎಂದು ರಾಮು ಶಿಶಿಲ ತಿಳಿಸಿದರು.












Click it and Unblock the Notifications