ದೈವಾರಾಧನೆಯಲ್ಲಿ ಸಾಮರಸ್ಯ ಜೀವಂತ; ಮಂಗಳೂರಿನಲ್ಲೇ ನಡೆಯುತ್ತಿದೆ 'ಅರಬ್ಬೀ' ಮುಸ್ಲಿಂ ದೈವದ ಆರಾಧನೆ
ಮಂಗಳೂರು, ಏಪ್ರಿಲ್ 9: ರಾಜ್ಯದಲ್ಲಿ ಧರ್ಮ ಸಂಘರ್ಷದ ವಾತಾವರಣ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಪ್ರತಿದಿನ ಹೊಸ ಹೊಸ ವಿವಾದಗಳು ತಲೆ ಎತ್ತುತ್ತಲೇ ಇದೆ. ಈ ಮುಖೇನ ಎರಡು ಸಮುದಾಯಗಳನ್ನು ಶಾಶ್ವತವಾಗಿ ದೂರವಿಡುವ ಕೆಲಸವೂ ಆಗುತ್ತಿದೆ. ರಾಜ್ಯವಿಡೀ ಇಂತಹ ಬೆಳವಣಿಗೆಯಾಗುತ್ತಿದ್ದರೂ, ಕೋಮುಸೂಕ್ಷ್ಮ ಪ್ರದೇಶವೆಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಕರಾವಳಿಯಲ್ಲಿ ದೈವಾರಾಧನೆಯು ಇದೆಲ್ಲವನ್ನೂ ಮೀರಿ ನಿಂತಿದೆ.
ಕರಾವಳಿಯಲ್ಲಿ ದೇವತಾರಾಧನೆಯಷ್ಟೇ ಪ್ರಮುಖ ಸ್ಥಾನವನ್ನು ದೈವಾರಾಧನೆ ಪಡೆದಿದೆ. ದೇವತಾರಾಧನೆಯ ಜೊತೆ ಜೊತೆಗೆ ದೈವಾರಾಧನೆಯೂ ನಡೆಯುತ್ತಿದೆ. ಇಲ್ಲಿನ ದೇವಾಲಯಗಳಲ್ಲೂ ಕ್ಷೇತ್ರಪಾಲರಾಗಿ ದೈವಗಳು ಇವೆ. ಈ ದೈವಗಳಿಗೂ ದೇವಸ್ಥಾನಗಳ ಉತ್ಸವಾದಿಗಳ ಸಂದರ್ಭ ನೇಮ- ನಡಾವಳಿಗಳು ನಡೆಯುತ್ತಿರುತ್ತವೆ.

ನೇಮ-ಕೋಲ-ಪರ್ವಗಳನ್ನು ನೀಡಿ ಭಯ-ಭಕ್ತಿಯಿಂದ ಆರಾಧನೆ
ದೈವಗಳಲ್ಲಿ ಹಲವಾರು ವಿಭಾಗಗಳಿದ್ದು, ಪ್ರಾಣಿ ಲೋಕದ ದೈವಗಳು, ಪುರಾಣ ಲೋಕದ ದೈವಗಳು, ಯಾವುದೋ ಅವಘಡಕ್ಕೋ, ಮೇಲ್ವರ್ಗದ ಶಕ್ತಿಗಳ ತುಳಿತಕ್ಕೆ, ಹತ್ಯೆಗೆ ಒಳಗಾಗಿ ಮನುಷ್ಯ ಕಾಯ ಬಿಟ್ಟು ಮಾಯವಾಗಿ ಅತಿಮಾನುಷ ಶಕ್ತಿಯಾಗಿ ಆರಾಧನೆಗೆ ಒಳಗಾಗುವ ದೈವಗಳು ಕರಾವಳಿಯಲ್ಲಿ ಇವೆ. ಇಂತಹ ಸಾವಿರ ಸಾವಿರ ದೈವಗಳನ್ನು ಕರಾವಳಿಗರು ನಿತ್ಯವೂ ಹೂ-ನೀರು ಇಟ್ಟು, ನೇಮ-ಕೋಲ-ಪರ್ವಗಳನ್ನು ನೀಡಿ ಭಯ-ಭಕ್ತಿಯಿಂದ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಆದ್ದರಿಂದಲೇ ಸಂಕಷ್ಟಗಳು ಎದುರಾದಾಗ ಕರಾವಳಿಗರಿಗೆ ದೇವರಷ್ಟೇ ದೈವಗಳು ನೆನಪಾಗುತ್ತದೆ ಎಂದು ಇವರು ಆ ದೈವಗಳ ಮೇಲಿಟ್ಟಿರುವ ನಂಬಿಕೆ ಎಂದರೆ ಅತಿಶಯೋಕ್ತಿಯಲ್ಲ.

ಮುಸ್ಲಿಮರಾಗಿಯೂ ಜನಿಸಿದವರೂ ದೈವಗಳಾಗಿ ಆರಾಧನೆ
ಕೋಮು ಸಾಮರಸ್ಯವನ್ನೇ ಜೀವಾಳವಾಗಿರಿಸಿಕೊಂಡಿರುವ ತುಳುನಾಡಿನ ಮಣ್ಣಿನ ದೈವಾರಾಧನೆ ಶತಶತಮಾನಗಳ ಆಚೆಯಿಂದಲೂ ಸಮುದಾಯಗಳೆರಡರ ನಡುವಿನ ಬಾಂಧವ್ಯವನ್ನು ಎತ್ತಿಹಿಡಿದಂತಿದೆ. ಈ ಕಾರಣದಿಂದಲೇ ಹಿಂದೂಗಳಾಗಿ ಜನಿಸಿದವರು ಮಾತ್ರವಲ್ಲ ಮುಸ್ಲಿಮರಾಗಿಯೂ ಜನಿಸಿದವರೂ ದೈವಗಳಾಗಿ ಆರಾಧನೆಗೊಳ್ಳುತ್ತಿದ್ದಾರೆ. ಇಂದಿಗೂ ಈ ಆರಾಧನೆಗಳು ಹಚ್ಚಹಸಿರಾಗಿದೆ ಎನ್ನುವುದೇ ಇಲ್ಲಿನ ವಿಶೇಷ.
ಕರಾವಳಿಯಲ್ಲಿ ಮುಸ್ಲಿಂ ದೈವಗಳಾಗಿ ಆಲಿ ಭೂತ, ಮಾಪಿಳ್ಳೆ, ಬಬ್ಬರ್ಯ, ಬ್ಯಾರಿ ಭೂತ, ಅರಬ್ಬಿ ಎಂಬಿತ್ಯಾದಿ ದೈವಗಳು ಆರಾಧನೆಗೊಳ್ಳುತ್ತಿವೆ. ಅದರಲ್ಲೂ ಎಲ್ಲೂ ಕಾಣಸಿಗದ ಬಲು ಅಪರೂಪದ ಅರಬ್ಬಿ ದೈವದ ಆರಾಧನೆಯು ಮಂಗಳೂರು ನಗರದ ಮಧ್ಯಭಾಗದಲ್ಲಿಯೇ ನಡೆದಿದೆ. ಮಂಗಳೂರಿನ ಉರ್ವ ಚಿಲಿಂಬಿಯ ಮಲರಾಯ ದೈವಸ್ಥಾನದಲ್ಲಿ ಅರಬ್ಬಿ ದೈವವಿದ್ದು, ಇದರೊಂದಿಗೆ ಬ್ರಾಂದಿ(ಬ್ರಾಹ್ಮಣ ಕನ್ಯೆ) ದೈವಕ್ಕೂ ನೇಮ ನಡೆದಿದೆ. ಮಲರಾತ ಪ್ರಧಾನ ದೈವವಾಗಿರುವ ಈ ದೈವಸ್ಥಾನದಲ್ಲಿ ಮಲರಾಯ ದೈವದ ನೇಮಕ್ಕೆ ಮುನ್ನಾ ದಿನವೇ ಬ್ರಾಂದಿ(ಬ್ರಾಹ್ಮಣ ಕನ್ಯೆ) ಹಾಗೂ ಅರಬ್ಬಿ ದೈವಕ್ಕೆ ನೇಮ ನಡೆಯುತ್ತದೆ.

ಮನುಷ್ಯ ಕಾಯ ಬಿಟ್ಟು ದೈವವಾಗಿ ಆರಾಧನೆ
ಅರಬ್ಬಿ ಒಂದು ವಿದೇಶೀ ಮೂಲದ ದೈವ. ಉರ್ವ ಚಿಲಿಂಬಿಯ ಮಲರಾಯಿಯ ಅಧೀನದೊಳಗಿನ ದೈವವಾಗಿ "ಅರಬ್ಬಿ ಭೂತ' ಆರಾಧನೆ ಪಡೆಯುತ್ತಿದೆ. ಇದರ ಹೆಸರೇ ಸೂಚಿಸುವಂತೆ ಈ ದೈವವು ಮೂಲತಃ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬ ಅರಬ್ ವ್ಯಕ್ತಿಯೇ ಮುಂದಕ್ಕೆ ಮನುಷ್ಯ ಕಾಯ ಬಿಟ್ಟು ದೈವವಾಗಿ ಆರಾಧನೆಗೊಳ್ಳುತ್ತಿದ್ದಾನೆ. ಈತ ಖರ್ಜೂರ ವ್ಯಾಪಾರಿಯಾಗಿದ್ದು, ಒಂದು ದಿನ ಖರ್ಜೂರ ಮಾರಾಟ ಮಾಡಿಕೊಂಡು ಚಿಲಿಂಬಿಯ ಬಳಿಗೆ ಬರುತ್ತಾನೆ.
ಆಗ ಅಲ್ಲಿಗೆ ನಾಗಬ್ರಹ್ಮ ದೇವಸ್ಥಾನಕ್ಕೊಳಪಟ್ಟ ಮನೆಯೊಂದರ ಋತುಸ್ನಾತೆಯಾಗಿರುವ ಬ್ರಾಹ್ಮಣ ಅವಿವಾಹಿತ ಕನ್ಯೆ ಸ್ನಾನಕ್ಕೆಂದು ಬಂದಿದ್ದಳು. ಅಲ್ಲೇ ಇರುವ ಸಣ್ಣ ತೊರೆಯೊಂದರಲ್ಲಿ ಹಾಸುಗಲ್ಲಿನಲ್ಲಿ ಕುಳಿತು ಸ್ನಾನ ಮಾಡುತ್ತಿದ್ದ ಈಕೆಯನ್ನು ಕಂಡು ಮೋಹಿತನಾದ ಅರಬ್ಬಿ, ಅತ್ಯಾಚಾರ ಮಾಡಲು ಮುಂದಾಗುತ್ತಾನೆ. ಆಗ ತನ್ನ ಮಾನದ ರಕ್ಷಣೆಗಾಗಿ ಈ ಬ್ರಾಹ್ಮಣ ಕನ್ಯೆ ಅಲ್ಲಿಯೇ ಆರಾಧನೆಗೊಳ್ಳುತ್ತಿದ್ದ ಮಲರಾಯಿ ಮಾಡುವಂತೆ ಮನಸ್ಸಿನಲ್ಲಿ ಸ್ಮರಿಸುತ್ತಾಳೆ. ಆಗ ಮಲರಾಯಿ ದೈವ ಅರಬ್ಬಿಯನ್ನು ಮಾಯ ಮಾಡುತ್ತದೆ. ಈ ಮೂಲಕ ಇಬ್ಬರೂ ರಾಜನ್ ದೈವವೊಂದರ ಕೈಸೇರಿಗೆಯಾಗಿರುವುದರಿಂದ ಮುಂದಕ್ಕೆ ಅವರೂ ದೈವವಾಗಿ ಬ್ರಾಂದಿ ಹಾಗೂ ಅರಬ್ಬಿ ದೈವವಾಗಿ ಆರಾಧನೆ ಪ್ರಕ್ರಿಯೆಗೆ ಒಳಪಡುತ್ತಾರೆ.

ಧೂಮಾವತಿ ದೈವಸ್ಥಾನದಲ್ಲಿ ಅರಬ್ಬಿ ದೈವದ ಕಲ್ಲು
ಇಂದಿಗೂ ಮಲರಾಯ ದೈವಸ್ಥಾನದಲ್ಲಿ ಮಲರಾಯ ದೈವದ ನೇಮಕ್ಕಿಂತ ಮುನ್ನಾ ದಿನ (ಬ್ರಾಂದಿ)ಬ್ರಾಹ್ಮಣ ಕನ್ಯೆ ಮತ್ತು ಅರಬ್ಬಿ ದೈವದ ನೇಮ ನಡೆಯುತ್ತದೆ. ಭಕ್ತರೂ ಈ ದೈವಗಳನ್ನು ಭಕ್ತಿಯಿಂದ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಅರಬ್ಬಿ ದೈವದ ಕಲ್ಲು ಇದೆ. ಆ ಬ್ರಾಹ್ಮಣ ಕನ್ಯೆ ಸ್ನಾನ ಮಾಡಿರುವ ನೀರಿನ ಹಳ್ಳವಿದ್ದ ಜಾಗದಲ್ಲಿ ನೀರಿನ ತೊರೆ ಇಲ್ಲದಿದ್ದರೂ ಆಕೆ ಸ್ನಾನ ಮಾಡಲುಕುಳಿತಿದ್ದ ಕಲ್ಲು ಈಗಲೂ ಇದೆ. ಅವಳ ನೇವಳದ ಗುರುತು ಎಂಬ ಒಂದು ಗೆರೆ ಅಲ್ಲಿನ ಆ ಪಾದಕಲ್ಲಿನ ಮೇಲೆ ಇದೆ. ಆ ಅರಬ್ ವ್ಯಾಪಾರಿಯ ಪಾದದ ಗುರುತು ಎಂದು ನಂಬಲಾಗುವ ಸಣ್ಣ ಸಣ್ಣ ಗುರುತುಗಳಿವೆ.
ಬ್ರಾಹ್ಮಣ ಕನ್ಯೆ ಅವಿವಾಹಿತ ಹೆಣ್ಣು ಮಗಳು ಆದ ಕಾರಣ ನೇಮದಲ್ಲೂ ಬ್ರಾಹ್ಮಣ ಕನ್ಯೆಯ ದೈವ ಪಾತ್ರಿ ಬಿಳಿ ಸೀರೆಯನ್ನುಟ್ಟು ಮದುಮಗಳ ಅಲಂಕಾರದಿಂದ ಶೃಂಗಾರಗೊಳ್ಳುತ್ತಾರೆ. ಮಲ್ಲಿಗೆ, ವಿವಿಧ ಬಂಗಾರದ ಆಭರಣಗಳಿಂದ ಶೃಂಗಾರ ಮಾಡಲಾಗುತ್ತದೆ. ಕೈಯಲ್ಲಿ ಗೆಜ್ಜೆ ಕತ್ತಿ, ಐದು ವೀಳ್ಯದೆಲೆ ಮತ್ತು ಒಂದು ಅಡಿಕೆಯನ್ನಿಟ್ಟು ಮದುಮಗಳ ಮಾದರಿಯ ಅಲಂಕಾರವನ್ನು ಮಾಡಲಾಗುತ್ತದೆ. ಇನ್ನು ಅರಬ್ಬಿಯವನ್ನು ಬಂಧಿಸಿ ಶಿಕ್ಷಿಸಿ ಮಾಯ ಮಾಡಿದ್ದರ ಸೂಚ್ಯದಂತೆ ಅರಬ್ಬೀ ದೈವಕ್ಕೆ ಕಬ್ಬಿಣದ ಬಂಧನವಿದೆ.
Recommended Video

ಮುಸ್ಲಿಂ ವ್ಯಕ್ತಿಯನ್ನು ದೈವವಾಗಿ ಕಾಣುತ್ತಾರೆ
ಅರಬ್ಬಿ ಭೂತಕ್ಕೆ ಒಂದು ಅರಬ್ಬರ ಟೋಪಿಗೆಯನ್ನು ಹೋಲುವ ಮುಂಡಾಸಿನ ಅಲಂಕಾರವೂ ಇದೆ. ಹಣೆಗೆ ಕಪ್ಪು ಕಲೆ, ಮೀಸೆ ಮತ್ತು ಗದ್ದದ ತುದಿಯಲ್ಲಿ ಗಡ್ಡ ಬರೆಯಲಾಗುತ್ತದೆ. ಬೇರೇನು ವಿಶೇಷ ಬಣ್ಣವಿಲ್ಲ. ಸಣ್ಣ ಮಟ್ಟಿನ ಆವೇಶದೊಂದಿಗೆ ಬ್ರಾಂದಿ ದೈವಕ್ಕೆ ಮೊದಲು ನೇಮವಾಗಿ ಆ ಬಳಿಕ ಅರಬ್ಬಿ ದೈವಕ್ಕೆ ನೇಮವಾಗುತ್ತದೆ. ಈ ನೇಮವನ್ನು ಕಟ್ಟುಕಟ್ಟಲೆಯ ನೇಮವೆಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಈಗಲೂ ಜನತೆ ದೈವವಾಗಿ ಆರಾಧನೆ ಪ್ರಕ್ರಿಯೆಯ ಒಳಗೆ ತಂದು ಆರಾಧಿಸಿಕೊಂಡು ಬರುತ್ತಿರುವುದು ಕರಾವಳಿಯ ಜನತೆಯ ಉದಾರತೆಗೆ ಸಾಕ್ಷಿಯಂತಿದೆ.












Click it and Unblock the Notifications