ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್‌ನದ್ದು ಸಾಫ್ಟ್ ಹಿಂದುತ್ವ ಅಜೆಂಡಾ; ಎಸ್‌ಡಿಪಿಐ
ಮಂಗಳೂರು, ಫೆಬ್ರವರಿ 16; ರಾಜ್ಯದಲ್ಲಿ ತಣ್ಣಗಾಗಿದ್ದ ಹಿಜಾಬ್ ವಿವಾದ ಮತ್ತೆ ಭುಗಿಲೆದ್ದಿದೆ. ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಜೋರಾಗಿದ್ದು, ಪರ ವಿರೋಧ ಚರ್ಚೆಗಳು ತೀವ್ರವಾಗಿದೆ. ಈ ವಿವಾದ ಬಿಜೆಪಿ ಸರ್ಕಾರದ ಪ್ರಾಯೋಜಿತ ವಿವಾದ ಎಂದು ಎಸ್‌ಡಿಪಿಐ ಬಣ್ಣಿಸಿದೆ.
ಈ ಬಗ್ಗೆ ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, "ಕೋರ್ಟ್ ಆದೇಶವನ್ನು ರಾಜ್ಯದಲ್ಲಿ ಉಲ್ಲಂಘನೆ ಮಾಡಲಾಗುತ್ತಿದೆ. ಕೋರ್ಟ್‌ನ ಮಧ್ಯಂತರ ಆದೇಶ, ಕಾಲೇಜು ಅಭಿವೃದ್ಧಿ ಸಮಿತಿ ಹೊಂದಿದ ಕಾಲೇಜುಗಳ ಸಮವಸ್ತ್ರ ನೀತಿ ಸಂಹಿತೆ ಮಾತ್ರ ಆದೇಶವಾಗಿದೆ. ಬೇರೆ ಕಾಲೇಜುಗಳಿಗೆ ಈ ಆದೇಶ ಅನ್ವಯ ವಾಗೋದಿಲ್ಲ" ಎಂದರು.
"ಜಿಲ್ಲಾಡಳಿತಗಳು ಕೋರ್ಟ್ ಆದೇಶವನ್ನು ಅರ್ಥೈಸಿಕೊಳ್ಳದೇ ಗೊಂದಲ ಸೃಷ್ಠಿ ಮಾಡುತ್ತಿದೆ. ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಶಾಮೀಲಾಗಿ ಬಲವಂತವಾಗಿ ಹಿಜಾಬ್ ಕಳಚಲು ಸೂಚನೆ ನೀಡುತ್ತಿದ್ದಾರೆ. ಶಾಲಾ ಶಿಕ್ಷಕಿಯರಿಗೆ ನಡುದಾರಿಯಲ್ಲಿ ಹಿಜಾಬ್ ಕಳಚಲು ಸೂಚನೆ ನೀಡಲಾಗುತ್ತಿದೆ" ಎಂದು ಅಬ್ದುಲ್ ಮಜೀದ್ ಆರೋಪಿಸಿದರು.

"ಶಿಕ್ಷಣ ಇಲಾಖೆ, ಗೃಹ ಇಲಾಖೆ ಕೋರ್ಟ್ ಆದೇಶವನ್ನು ಅರಿತು ಅದನ್ನು ಪಾಲಿಸಬೇಕಾಗಿದೆ. ಕೋರ್ಟ್ ಆದೇಶದ ವಿರುದ್ಧ ನಡೆಯುವ ಎಲ್ಲಾ ಅಧಿಕಾರಿಗಳ ವಿರುದ್ದ ಕೋರ್ಟ್ ಆದೇಶ ಉಲ್ಲಂಘನೆಯ ದೂರು ನೀಡುತ್ತೇವೆ" ಎಂದು ಮಜೀದ್ ಎಚ್ಚರಿಕೆ ನೀಡಿದರು.
"ಹಿಜಾಬ್ ಅನ್ನೋದು ಮುಸ್ಲಿಂ ವಿದ್ಯಾರ್ಥಿನಿಯರ ವೈಯುಕ್ತಿಕ ಹಕ್ಕು. ಅದನ್ನು ತಡೆಯೋದು ನಾಚಿಗೇಡು. ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿಶ್ವದಲ್ಲಿ ಕರ್ನಾಟಕ ತಲೆತಗ್ಗುವಂತೆ ಮಾಡಿದ್ದಾರೆ. ಇತಿಹಾಸ ನಿಮ್ಮನ್ನು ಕ್ಷಮಿಸಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಇನ್ನು ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಓಟು ಬೇಕು. ಮುಸ್ಲಿಂವರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಬದ್ಧತೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಿಜಾಬ್ ಬಗ್ಗೆ ಯಾರೂ ಮಾತನಾಡಬಾರದು ಅಂತಾ ಹೇಳುತ್ತಾರೆ. ಕಾಂಗ್ರೆಸ್‌ನ ಮಹಿಳಾ ಮುಖಂಡೆಯೋರ್ವರು ಹಿಜಾಬ್ ವಿರುದ್ಧ ಮಾತನಾಡಿದಾಗ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದರು.
"ಜಮೀರ್ ಅಹ್ಮದ್ ಖಾನ್‌ಗೆ ಮಾತನಾಡಬಾರಾದಾಗಿ ಸೂಚನೆ ನೀಡಿದ್ದಾರೆ. ಇದೆಲ್ಲ ಕಾಂಗ್ರೆಸ್‌ನ ಸಾಫ್ಟ್ ಹಿಂದುತ್ವ ಅಜೆಂಡಾವನ್ನು ತೋರಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ತಮ್ಮ ಸಮಾಧಿಯನ್ನು ತಾವೇ ತೋಡಿಕೊಂಡಿದೆ" ಎಂದು ಅಬ್ದುಲ್ ಮಜೀದ್ ಹೇಳಿದರು.
"ಹಿಜಾಬ್ ಕುರಿತು ಅಧಿವೇಶನದಲ್ಲಿ ಗಂಭೀರ ಚರ್ಚೆ ಮಾಡೋದಕ್ಕೂ ಕಾಂಗ್ರೆಸ್ ಮೀನಾಮೇಷ ಎಣಿಸುತ್ತಿದೆ. ರಾಜ್ಯದ ಅಲ್ಪಸಂಖ್ಯಾತರ ಭಯದ ವಾತವರಣ ನಿವಾರಿಸಬೇಕು. ಕಾಂಗ್ರೆಸ್ ಅಧಿವೇಶನದಲ್ಲಿ ಈ ವಿಚಾರ ಎತ್ತಲು ಯೋಚನೆ ಮಾಡಿರೋದು ನಾಡಿನ ದುರಂತವಾಗಿದೆ. ಮುಸ್ಲಿಮರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ" ಎಂದು ತಿಳಿಸಿದರು.
"ವೈಯುಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಪ್ರತಿಪಕ್ಷ ಬದ್ಧತೆ ಪ್ರದರ್ಶನ ಮಾಡಬೇಕು. ರಾಜ್ಯದಲ್ಲಿ ಶೇ 15ರಷ್ಟು ಇರುವ ಅಲ್ಪಸಂಖ್ಯಾತರು ಭಯದ ವಾತವರಣದಲ್ಲಿದ್ದಾರೆ. ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ಆದರೆ ಕಾಂಗ್ರೆಸ್ ನಯವಂಚಕತನ ಪ್ರದರ್ಶನ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್, "ಹಿಜಾಬ್ ಧರಿಸಿದವರು ಸಂವಿಧಾನದ ಆದೇಶವನ್ನು ನೀವು ಪಾಲಿಸೋದಿಲ್ಲ ಎಂಬ ಪ್ರಶ್ನೆ ಮಾಡುತ್ತಾರೆ. ಆದರೆ ಸಂವಿಧಾನ ಯಾವಾಗ ಹಿಜಾಬ್ ನಿಷೇಧ ಮಾಡಿದೆ. ಹಿಜಾಬ್ ನಿಷೇಧ ಮಾಡಿದ್ದು ಉಡುಪಿ ಕಾಲೇಜಿನ ಪ್ರಿನ್ಸಿಪಾಲ್. ರಾಜ್ಯದಲ್ಲಿಬೆಳೆಸಿದ್ದು ಸಂಘಪರಿವಾರ" ಎಂದರು.
"ಕೋರ್ಟ್ ಮಧ್ಯಂತರ ಆದೇಶದಲ್ಲಿ ಧಾರ್ಮಿಕ ಗುರುತು ಪ್ರದರ್ಶನ ಮಾಡಬಾರದು ಅಂತಾ ಹೇಳಿದೆ. ಹಿಜಾಬ್ ಧಾರ್ಮಿಕ ಗುರುತು ಅಂತಾ ಸಂವಿಧಾನ ಎಲ್ಲಿ ಹೇಳಿದೆ. ಹಾಗಾದರೆ ಜನಿವಾರ, ಲಿಂಗಧಾರಣೆ, ನಾಮ, ಸ್ವರಸ್ವತಿ, ಗಣೇಶ, ಶಿವನ ಫೋಟೋಗಳಿಗೆ ಕೋರ್ಟ್‌ನ ಈ ಆದೇಶ ಯಾಕೆ ಅನ್ವಯವಾಗೋದಿಲ್ಲ?" ಎಂದು ಪ್ರಶ್ನಿಸಿದರು.












Click it and Unblock the Notifications