ದ.ಕನ್ನಡದಲ್ಲಿ ಅಬ್ಬರಿಸಿದ ವರುಣ: ಜಲಾವೃತಗೊಂಡ ಪಂಪ್‌ವೆಲ್ ಸರ್ಕಲ್‌ನಲ್ಲಿ ಈಜಾಟ
ಮಂಗಳೂರು, ಜೂನ್ 04: ರಾಜ್ಯದಲ್ಲಿ ಈವರೆಗೆಗೂ ವಿಳಂಬ ನೀತಿ ಅನುಸರಿಸಿದ್ದ ವರುಣ ಇದೀಗ ಕರಾವಳಿ ಜಿಲ್ಲೆಗಳು ಸೇರಿದಂತೆ ವಿವಿಧೆಡೆ ಒಮ್ಮೆಲೆ ಅಬ್ಬರಿಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನದಿಗಳು ಬತ್ತಿ ಬರದ ಛಾಯೆ ಆವರಿಸಿದ್ದ ದಕ್ಷಿಣ ಕನ್ನಡದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಆರಂಭವಾಗಿದ್ದು, ಇದೀಗ ವರುಣನ ಅಬ್ಬರಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮಂಗಳೂರು ನಗರದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಪಂಪ್‍ವೆಲ್ ಸರ್ಕಲ್ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಂಪ್‍ವೆಲ್ ಸರ್ಕಲ್ ಬಳಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಲ್ಲುತ್ತಿದ್ದು, ಕೆಲವರು ನೀರಿನಲ್ಲೇ ವಾಹನ ಚಲಾಯಿಸಿದರೆ, ಇನ್ನೂ ಕೆಲವರು ಈ ಮಾರ್ಗದಲ್ಲಿ ಚಲಿಸಲು ಹಿಂದೇಟು ಹಾಕುತ್ತಿದ್ದಾರೆ.
ಪಂಪ್‍ವೆಲ್ ಸರ್ಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ಆದ ಬಳಿಕ ಈ ಸಮಸ್ಯೆ ಆರಂಭವಾಗಿದೆ. ಫ್ಲೈಓವರ್‍ನ ಅಡಿ ಭಾಗದಲ್ಲಿ ನಗರಕ್ಕೆ ಹೋಗುವ ವಾಹನಗಳಿಗೆ ರಸ್ತೆಯಿದ್ದು ಅಲ್ಲೇ ಸಮೀಪದಲ್ಲಿ ಚರಂಡಿ ಇದೆ. ಈ ಚರಂಡಿಯ ಒಂದು ಭಾಗ ಎತ್ತರವಿದ್ದು ಇನ್ನೊಂದು ಭಾಗ ಕೆಳಗಿದೆ. ಹೀಗಾಗಿ ನೀರು ಹರಿದು ಹೋಗಬೇಕಿದ್ದ ಭಾಗದಲ್ಲಿ ಎತ್ತರ ಇರುವುದರಿಂದ ಮಳೆ ನೀರು ರಸ್ತೆಗೆ ನುಗ್ಗಿ ಬರುತ್ತದೆ. ಕಳೆದ ಕೆಲ ವರ್ಷದಿಂದ ಪ್ರತೀ ಮಳೆಗಾಲದಲ್ಲೂ ಈ ಸಮಸ್ಯೆ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪಂಪ್‍ವೆಲ್ ಸರ್ಕಲ್ ಜಲಾವೃತಗೊಂಡಿರುವ ಬಗ್ಗೆ ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಅಸಮಾಧಾನ ಹೊರಹಾಕಿದ್ದು, ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಂಪ್‍ವೆಲ್ ಸರ್ಕಲ್ ಮಂಗಳೂರಿನ ಸಾರ್ವಜನಿಕ ಈಜು ಕೊಳ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇನ್ನೂ ಕೆಲವರಂತೂ ಜಲಾವೃತಗೊಂಡ ಪಂಪ್‍ವೆಲ್ ಸರ್ಕಲ್‌ನಲ್ಲೇ ಈಜಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬರು ಪಂಪ್‍ವೆಲ್ ಸರ್ಕಲ್‌ನಲ್ಲಿ ಈಜಾಡುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ದಕ್ಷಿಣ ಜಿಲ್ಲೆಯ ಮಂಗಳೂರು ನಗರ, ಬಂಟ್ವಾಳ, ಪುತ್ತೂರು ಹಾಗೂ ಬೆಳ್ತಂಗಡಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇನ್ನು ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸುರಕ್ಷಿತವಾಗಿರುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮನವಿ ಮಾಡಿದೆ.












Click it and Unblock the Notifications