'ಅಶೋಬಾ' ಪರಿಣಾಮ ಕರಾವಳಿಯಲ್ಲಿ ಭಾರೀ ಮಳೆ
ಮಂಗಳೂರು, ಜೂ. 09 : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಸೋಮವಾರ ಭಾರೀ ಮಳೆಯಾಗಿದ್ದು, ವಾತಾವರಣ ತಂಪಾಗಿದೆ. ರಸ್ತೆಯ ಮೇಲೆಯೇ ನೀರು ಹರಿದು ಸಂಚಾರಕ್ಕೂ ತೊಂದರೆ ಉಂಟಾಗಿತ್ತು. ಅಶೋಬಾ ಚಂಡಮಾರುತದಿಂದಾಗಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮಂಗಳೂರು ನಗರ ಹಾಗೂ ಸುತ್ತಮುತ್ತ ಸೋಮವಾರ ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ, ಸುಳ್ಯ, ವಿಟ್ಲ, ಪುತ್ತೂರು, ಬಂಟ್ವಾಳದಲ್ಲಿಯೂ ಸಾಧಾರಣ ಮಳೆಯಾಗಿದ್ದು, ಪಡುಬಿದ್ರಿ, ಮೂಲ್ಕಿ, ಕಿನ್ನಿಗೋಳಿ, ಸುರತ್ಕಲ್, ಕೃಷ್ಣಾಪುರ, ಬಜಪೆ ಮುಂತಾದ ಕಡೆ ಸಂಜೆಯ ವೇಳೆಗೆ ಭಾರೀ ಮಳೆ ಸುರಿದಿದೆ. [ರಾಜ್ಯಕ್ಕೆ ಆಗಮಿಸಿದ ವರುಣ ಆರ್ಭಟಿಸುತ್ತಿಲ್ಲ]
ಉಡುಪಿಯಲ್ಲಿಯೂ ಮಳೆ : ಉಡುಪಿ ಜಿಲ್ಲೆಯಲ್ಲಿಯೂ ಸೋಮವಾರ ಮಳೆಯಾಗಿದೆ. ಉಡುಪಿ, ಮಣಿಪಾಲ, ಪಡುಬಿದ್ರಿ, ಬ್ರಹ್ಮಾವರ, ಕಾಪು, ಕೋಟ, ಸಾಲಿಗ್ರಾಮ, ಬೇಳೂರು, ಕೆದೂರು, ಕೊರ್ಗಿ, ಹೊಸಂಗಡಿ, ಅಂಪಾರು, ಹಾಲಾಡಿ, ಶಂಕರನಾರಾಯಣ ಹಾಗೂ ಕಾರ್ಕಳದಲ್ಲಿ ಮಳೆಯಾಗಿದೆ. [ಜೂ.5ರಂದು ಕೇರಳಕ್ಕೆ ಆಗಮಿಸಿದ ಮುಂಗಾರು]

ಕಾಸರಗೋಡು ಜಿಲ್ಲೆಯ ವಿವಿಧೆಡೆ ಕೂಡ ಸೋಮವಾರ ಗಾಳಿ ಸಹಿತ ಮಳೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಅಶೋಬಾ ಚಂಡಮಾರುತದಿಂದಾಗಿ ಇನ್ನೂ ಎರಡು ದಿನ ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮೀನುಗಾರರಿಗೆ ಎಚ್ಚರಿಕೆ : ಅಶೋಬಾ ಚಂಡಮಾರುತದಿಂದಾಗಿ ಎರಡು ದಿನಗಳ ಕಾಲ ಸಮುದ್ರ ತೀರದಲ್ಲಿ 80 ರಿಂದ 100 ಕಿ. ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಕೆಲವೊಂದು ಸಂದರ್ಭದಲ್ಲಿ ಗಾಳಿಯ ವೇಗ 120 ಕಿ.ಮೀ. ವೇಗ ಪಡೆಯುವ ಸಾಧ್ಯತೆ ಇದೆ ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications