ಮಂಗಳೂರು: ಜೂನ್ 11ರವರೆಗೆ ಕರಾವಳಿ ಭಾಗದಲ್ಲಿ ಭಾರೀ ಮಳೆ, ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನೆ
ಮಂಗಳೂರು, ಜೂನ್, 06: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಜೂನ್ 6ರಿಂದ 11ರವರೆಗೆ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಇಲ್ಲಿನ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ.
ಕರಾವಳಿ ಬಿಸಿಲ ಧಗೆಗೆ ನಲುಗಿ ಹೋಗಿದ್ದು, ನೀರಿಗಾಗಿ ಜನರು ತತ್ತರಿಸುತ್ತಿದ್ದಾರೆ. ಅಲ್ಲದೆ ಎಲ್ಲೆಡೆ ನೀರಿಗಾಗಿ ಹಾಹಾಕಾರ ಕೇಳಿ ಬರುತ್ತಿದೆ. ಇದೀಗ ಹವಾಮಾನ ಇಲಾಖೆಯು ಅರಬ್ಭೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

ಜೂನ್ 6ರಿಂದ 11ರವರೆಗೆ ಭಾರೀ ಮಳೆಯಾಗಲಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದೆ. ಆದ್ದರಿಂದ ಕಡಲ ತೀರ ಪ್ರದೇಶದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ನೀಡಿದೆ.
ಕೇರಳಕ್ಕೆ ಜೂನ್ 4ರಂದು ಮುಂಗಾರು ಪ್ರವೇಶದ ನಿರೀಕ್ಷೆಯಿತ್ತು. ಆದರೆ ಅದು ಮತ್ತಷ್ಟು ವಿಳಂಬದಿಂದ ಕರಾವಳಿಗೆ ಇನ್ನೂ ಮಳೆ ಬಂದಿಲ್ಲ. ಮತ್ತೊಂದೆಡೆ ಜೂನ್ 10ರ ವೇಳೆಗೆ ಕೇರಳಕ್ಕೆ ಮುಂಗಾರು ಆಗಮಿಸುವ ಸಾಧ್ಯತೆಯಿದ್ದು, ನಂತರ ರಾಜ್ಯಕ್ಕೆ ಮುಂಗಾರು ಪ್ರವೇಶ ಆಗಲಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಕಾಣಿಸಿಕೊಂಡರೇ, ಮುಂಗಾರು ಪ್ರಬಲಗೊಂಡು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಚಂಡಮಾರುತದ ಪ್ರಭಾವದ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿಲ್ಲ.
ಮಳೆ ಪಡೆಯಲಿರುವ ಜಿಲ್ಲೆಗಳು
ಈಗಾಗಲೇ ಮುಂಗಾರು ಪೂರ್ವ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಪಾ ಹಾನಿಗಳು ಸಂಭವಿಸಿವೆ. ಮತ್ತೊಂದೆಡೆ ಇದೀಗ ಮುಂಗಾರು ಮಳೆ ಪ್ರವೇಶ ಮಾಡಲಿದ್ದು, ಇದರಿಂದ ಇನ್ನೆಷ್ಟು ಅನಾಹುತಗಳು ಆಗುತ್ತವೆಯೋ ಎನ್ನುವ ಚಿಂತೆ ರಾಜ್ಯದ ಜನರದ್ದಾಗಿದೆ. ಹಾಗೆಯೆ ಜೂನ್ 7ರಂದು ಮಳೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ವಾರದಿಂದ ಮಳೆರಾಯ ಬಿಡುವು ನೀಡಿದ್ದ. ಅಲ್ಲದೆ ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ ಮುಚ್ಚಿದ ವಾತಾವರಣ ಇದ್ದು, ಬಳಿಕ ಸಂಜೆಯವರೆಗೆ ಬಿಸಿನ ಧಗೆ ಹೆಚ್ಚಾಗುತ್ತು. ಇನ್ನು ಸಂಜೆ ಸಮಯದಲ್ಲಿ ಸ್ವಲ್ಪ ಗಡುಗು ಸಹಿತ ಹಗುರವಾಗಿ ಜಿನುಗು ಮಳೆ ಬೀಳುತ್ತಿತ್ತು. ಆದರೆ ಇಂದು ನಗರದಲದಲ್ಲಿ ಸಂಜೆ ವೇಳೆಗೆ ಮಳೆರಾಯ ಅಬ್ಬರಿಸಿದ್ದಾನೆ.
ಅಲ್ಲದೆ ಜೂನ್ 7ರಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ರಾಜ್ಯಕ್ಕೆ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡಕವಿದ ವಾತಾವರಣ ನಿರ್ಮಾಣ ಆಗಿದ್ದು, ಭಾರೀ ಮಳೆ ಸುರಿಯುವ ಮುನ್ಸೂಚನೆಯೂ ಎದ್ದು ಕಾಣುತ್ತಿದೆ.
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳಲಿದೆ ಅಂತಲೂ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಮತ್ತೊಂದೆಡೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು,ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲೂ ಕೂಡ ಸಾಧಾರಣ ಮಳೆ ಸುರಿಯುವ ಸಂಭವ ಇದೆ ಎಂದು ತಿಳಿಸಿದೆ.












Click it and Unblock the Notifications