ಮಂಗಳೂರಿನ ಹುಲಿ ಕುಣಿತ ಸ್ಪರ್ಧೆಯ ಬಗ್ಗೆ ಹರ್ಭಜನ್ ಸಿಂಗ್ ಹೇಳಿದ್ದೇನು?
ಮಂಗಳೂರು, ಅಕ್ಟೋಬರ್, 24: ಮಂಗಳೂರು ನಗರದಲ್ಲಿ ನಡೆದ ಭರ್ಜರಿ ಹುಲಿವೇಷ ಸ್ಪರ್ಧೆ ಪಿಲಿನಲಿಕೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿಯವರು ಇಬ್ಬರು ಮೋಡಿ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಪಿಲಿನಲಿಕೆ ಕಾರ್ಯಕ್ರಮ ನಗರದ ಉರ್ವ ಮೈದಾನದಲ್ಲಿ ನಡೆದಿದ್ದು, ನಿನ್ನೆ ರಾತ್ರಿಯಾಗುತ್ತಿದ್ದಂತೆ ಹರ್ಭಜನ್ ಸಿಂಗ್ ಹಾಗೂ ಸುನೀಲ್ ಶೆಟ್ಟಿ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹುಲಿವೇಷವನ್ನು ಕಂಡು ಸಂಭ್ರಮಪಟ್ಟ ಹರ್ಭಜನ್ ಸಿಂಗ್ ಹುಲಿ ಕುಣಿತವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೇಳೆ ಹುಲಿ ಕುಣಿತದ ಬಗ್ಗೆ ಅವರಿಗೆ ಸುನೀಲ್ ಶೆಟ್ಟಿ ಮಾಹಿತಿ ನೀಡಿದರು.

ಹರ್ಭಜನ್ ಸಿಂಗ್ ಅವರು ಬರುತ್ತಿದ್ದಂತೆ ಎದ್ದುನಿಂತು ಕರತಾಡನ ಮಾಡಿ ಪ್ರೇಕ್ಷಕರು ಮೊಬೈಲ್ ಲೈಟ್ ಆನ್ ಮಾಡಿ ಸಂಭ್ರಮ ವ್ಯಕ್ತಪಡಿಸಿದರು. ಒಟ್ಟು ಹತ್ತು ತಂಡಗಳ ಹುಲಿಕುಣಿತ ಸ್ಪರ್ಧೆ ನಡೆಯುತ್ತಿದ್ದು, ಎರಡು ತಂಡಗಳ ಹುಲಿಕುಣಿತ ವೀಕ್ಷಿಸಿದರು.
ಹರ್ಭಜನ್ ಸಿಂಗ್ ಮಾತನಾಡಿ, ನನಗೆ ಬಹಳಷ್ಟು ಪ್ರೀತಿ ಕೊಟ್ಟಿದ್ದೀರಿ. ಈ ಪ್ರೀತಿಗೆ ನಾನೇನು ಹೇಳಬೇಕು ಎಂದು ಗೊತ್ತಿಲ್ಲ ಎಂದು ನೆರೆದಿರುವ ಪ್ರೇಕ್ಷಕರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ವಿಭಿನ್ನ ಸಂಸ್ಕೃತಿಯನ್ನು ನೋಡಿ ಖುಷಿಯಾಗಿದೆ. ಹುಲಿ ವೇಷಧಾರಿಗಳ ಎನರ್ಜಿ ನೋಡಿ ಒಂದು ಸಲ ನಾನೇ ದಂಗಾದೆ. ಇಷ್ಟೊಂದು ಎನರ್ಜಿ ಇದ್ದಲ್ಲಿ ಭಾರತ ಇಪ್ಪತ್ತು ವರ್ಷಗಳ ಕಾಲ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಖಂಡಿತ. ವರ್ಲ್ಡ್ ಕಪ್ ಕ್ರಿಕೆಟ್‌ನಲ್ಲಿ ಈ ಬಾರಿ ಭಾರತಕ್ಕೆ ಗೆಲುವು ಸಿಗಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿ ಎಂದು ಮಂಗಳೂರಿಗರಿಗೆ ಹೇಳಿದರು.
ನಟ ಸುನಿಲ್ ಶೆಟ್ಟಿ ಮಾತನಾಡಿ, ಹರ್ಭಜನ್ ಸಿಂಗ್ ಇದೇ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾರೆ. ಅವರು ಇಲ್ಲಿಯ ಆಹಾರವನ್ನು ಮೆಚ್ಚಿದ್ದಾರೆ. ಪಿಲಿನಲಿಕೆಯಲ್ಲಿ ಕುಣಿದ ಹುಲಿವೇಷಧಾರಿಗಳ ಆ್ಯಕ್ಷನ್ ನೋಡಿ ನನ್ನ ಮೂವತ್ತು ವರ್ಷದ ಆ್ಯಕ್ಷನ್ ಕೊಚ್ಕೊಂಡು ಹೋಗಿದೆ ಎಂದು ಹೇಳಿದರು.












Click it and Unblock the Notifications