ತಾರಸಿಯಲ್ಲೇ ವಿದ್ಯಾರ್ಥಿಗಳ ಕೃಷಿ: ಊಟಕ್ಕೆ ತಾವೇ ತರಕಾರಿ ಬೆಳೆಯುವ ಸರ್ಕಾರಿ ಶಾಲೆ ಮಕ್ಕಳು
ಮಂಗಳೂರು, ಡಿಸೆಂಬರ್ 09: ಸಿಟಿ ಮಕ್ಕಳಿಗೆ ಕೃಷಿಯ ಅರಿವು ಇಲ್ಲ, ಭತ್ತ, ಕಂಗು ತೆಂಗು ಹೊರತುಪಡಿಸಿ ಯಾವ ಬೆಳೆಯ ಬಗ್ಗೆಯೂ ಮಾಹಿತಿಯೇ ಇಲ್ಲ ಎಂಬ ಅಪವಾದ ಇದೆ. ಆದರೆ ಈ ಅಪವಾದ ವನ್ನು ಮಂಗಳೂರು ನಗರದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳು ತೊಡೆದು ಹಾಕಿದ್ದಾರೆ. ನಗರದ ಮಕ್ಕಳ ತರಕಾರಿ ಕೃಷಿ ಯಾವ ಕೃಷಿಕನಿಗೂ ಕಮ್ಮಿ ಇಲ್ಲದಂತೆ ಫಸಲು ನೀಡುತ್ತಿದ್ದು, ಮಕ್ಕಳು ಟಾರೆಸಿ ಮೇಲೆ ನೆಟ್ಟ ಗಿಡ ಈಗ ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿಗಳನ್ನು ಒದಗಿಸುತ್ತಿದೆ.
ಶಾಲೆ ಜ್ಞಾನಾರ್ಜನೆಗೆ ಮಾತ್ರವಲ್ಲ ಮಕ್ಕಳ ಕೌಶಲ್ಯವನ್ನು ಬೆಳೆಸುವ ತಾಣವಾಗಬೇಕು. ಈ ಮಾತಿಗೆ ಪೂರಕವಾಗಿದೆ ನಗರದ ಬೊಕ್ಕಪಟ್ಣದ ಸರಕಾರಿ ಪ್ರಾಥಮಿಕ ಶಾಲೆ. ಇಲ್ಲಿ ಶಾಲೆಯ ಮಕ್ಕಳಿಂದಲೇ ತಾರಸಿತೋಟ ಮಾಡಿ ಉತ್ತಮ ಇಳುವರಿ ತೆಗೆಯಲಾಗಿದೆ.

ಶಾಲೆಯ ವರಾಂಡ ಮಾತ್ರವಲ್ಲದೆ ತಾರಸಿಯ ಪ್ರದೇಶದಲ್ಲೂ ಹಳೆಯ ಫ್ರಿಡ್ಜ್ ಪಳೆಯುಳಿಕೆಯಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಮುಖ್ಯಶಿಕ್ಷಕಿ ಹಾಗೂ ಇತರ ಶಿಕ್ಷಕರ ಮುತುವರ್ಜಿಯಿಂದ ವಿದ್ಯಾರ್ಥಿಗಳೇ ಇಲ್ಲಿ ತರಕಾರಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ತರಕಾರಿಯನ್ನು ಮಕ್ಕಳ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಬಸಳೆ, ಹರಿವೆ, ಹೀರೆ, ಬೆಂಡೆ, ತೊಂಡೆ, ಬದನೆ, ಮೂಲಂಗಿ, ಮುಳ್ಳುಸೌತೆಗಳು ಮಕ್ಕಳ ಆರೈಕೆಯಲ್ಲಿ ಯಥೇಚ್ಛವಾಗಿ ಬೆಳೆದಿದ್ದು, ಬಿಸಿಯೂಟಕ್ಕೆ ಬಳಸಿ ಹೆಚ್ಚಾದ ತರಕಾರಿಗಳನ್ನು ಮಾರಾಟ ಮಾಡಿ ಗೊಬ್ಬರ ಖರೀದಿ ಮಾಡಲಾಗುತ್ತದೆ.
ಶಾಲೆಯ ಟಾರಸಿ ಮೇಲೆ ಹಳೆಯ ಫ್ರಿಡ್ಜ್‌ನ ಡೋರ್ ಗಳನ್ನೇ ಉಪಯೋಗಿಸಿ, ಅದಕ್ಕೆ ಮಣ್ಣು ತುಂಬಿಸಿ ಮಕ್ಕಳು ತರಕಾರಿ ಕೃಷಿ ಮಾಡುತ್ತಿದ್ದಾರೆ. ಸಂಪೂರ್ಣ ಸಾವಯವ ಕೃಷಿ ಇದಾಗಿದ್ದು, ಈ ತೋಟದಿಂದ ಬರುವ ತರಕಾರಿ ಮಕ್ಕಳ ಮಧ್ಯಾಹ್ನ ದ ಬಿಸಿಯೂಟಕ್ಕೆ ಬಳಕೆಯಾಗುತ್ತಿದೆ.
ಬಸಳೆ, ಬೆಂಡೆಕಾಯಿ, ಬದನೆ, ಅಲಸಂಡೆ, ಹೀರೆಕಾಯಿ, ಮೂಲಂಗಿ, ಮುಳ್ಳುಸೌತೆ, ತೊಂಡೆಕಾಯಿ ಬೆಳೆಗಳು ಗುಜುರಿ ವಸ್ತುಗಳಲ್ಲಿ ಚೆನ್ನಾಗಿ ಬೆಳೆದು ಮಕ್ಕಳ ಶ್ರಮಕ್ಕೆ ಫಲ ನೀಡಿದೆ. ಎರಡು ದಿನಕ್ಕೊಮ್ಮೆ ಒಂದು ಕೆಜಿ,ಮೂರು ದಿನಕ್ಕೊಮ್ಮೆ ಅಲಸಂಡೆ ಒಂದು ಕೆಜಿ ಸಿಗುತ್ತಿದ್ದು, ಮಕ್ಕಳು ತಾವು ಬೆಳೆದ ತರಕಾರಿ ಯನ್ನು ಖುಷಿಯಿಂದ ಹೆಮ್ಮೆಯಿಂದ ಸೇವಿಸುತ್ತಿದ್ದಾರೆ.
ವಿಶೇಷವೆಂದರೆ ಇಲ್ಲಿ ಸಂಪೂರ್ಣ ಸಾವಯವ ಗೊಬ್ಬರ ಬಳಸಿ ತರಕಾರಿ ಬೆಳೆಸಲಾಗುತ್ತದೆ. ತರಕಾರಿಗಳಲ್ಲದೆ ಪಪ್ಪಾಯ, ಬಾಳೆ, ಹೂವಿನ ಗಿಡಗಳನ್ನು ವರಾಂಡದ ಸುತ್ತಲೂ ಬೆಳೆಸಲಾಗಿದೆ. ಮಕ್ಕಳಿಗೆ ಪಾಠದೊಂದಿಗೆ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಶಾಲೆಯಿಂದ ಆಗುತ್ತಿದೆ. ಗಿಡಗಳಿಗೆ ನೀರು ಹಾಕುವುದರಿಂದ ತೊಡಗಿ, ಗೊಬ್ಬರ ಹಾಕುವುದು, ಕಳೆ ಕೀಳುವುದು ಎಲ್ಲವನ್ನೂ ಶಿಕ್ಷಕರೊಂದಿಗೆ ಸೇರಿ ಮಕ್ಕಳೇ ಮಾಡುತ್ತಾರೆ.
ಈ ಕೃಷಿ ಚಟುವಟಿಕೆಗೆ ಕಂಕನಾಡಿ, ಪಡೀಲ್ ಲಯನ್ಸ್ ಸಂಸ್ಥೆ ಸಹಕಾರ ನೀಡಿದೆ. ಅಲ್ಲದೆ ಶಾಲೆಗೆ ಅಗತ್ಯವಾದ ನೀರಿನ ಪೂರೈಕೆಗೆ ಬೇಕಾದ ಇಂಗು ಗುಂಡಿ, ತೆರೆದ ಬಾವಿಯನ್ನು ಲಯನ್ಸ್ ಸಂಸ್ಥೆ ನಿರ್ಮಿಸಿಕೊಟ್ಟಿದೆ. ಈಗಲೂ ತರಕಾರಿ ಕೃಷಿಗೆ ಬೇಕಾದ ಗೊಬ್ಬರವನ್ನು ಲಯನ್ಸ್ ಸಂಸ್ಥೆ ಪೂರೈಸುತ್ತಿದೆ. ಒಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಕೃಷಿ ಪ್ರೀತಿಯನ್ನು ಬೆಳೆಸಲು ಈ ರೀತಿಯ ಚಟುವಟಿಕೆಗಳು ಪೂರಕವಾಗಿದೆ.












Click it and Unblock the Notifications