ಬಜ್ಪೆ ವಿಮಾನ ನಿಲ್ದಾಣದಲ್ಲಿ ಚಿನ್ನದ ಸ್ಮಗ್ಲರ್ ಬಂಧನ
ಮಂಗಳೂರು, ಜೂ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಗರದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಕಾರ್ಯಾಚರಣೆಯಲ್ಲಿ 2 ಕೆ.ಜಿ. ಚಿನ್ನ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆ ಕಳನಾಡಿನ ಚಂದ್ರಗಿರಿಯ ಸಮೀರ್ ಮಹಮದ್ (28) ಬಂಧಿತ ಆರೋಪಿ. ಈತನಿಂದ 50.96ಲಕ್ಷ ರೂ. ಮೌಲ್ಯದ ತಲಾ ಒಂದು ಕೆಜಿ ತೂಕದ 2 ಎರಡು ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ.

ಸಂಶಯದ ಮೇಲೆ ಆತನನ್ನು ಹೊರ ಹೋಗದಂತೆ ತಡೆದು ನಿಲ್ಲಿಸಿ ಬಳಿಕ ಡಸ್ಟ್‌ಬಿನ್‌ನಲ್ಲಿ ಇರಿಸಿದ್ದ ಭಾರವಾದ ವಸ್ತು ಇದ್ದ ಕಟ್ಟನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅದು ಚಿನ್ನದ ಗಟ್ಟಿ ಎಂದು ಗೊತ್ತಾದ ತತ್‌ಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡು ಬಳಿಕ ಬಂಧಿಸಿದ್ದಾರೆ.

ವಿಚಾರಣೆ ನಡೆಸಿದಾಗ ಆತ ಈ ಹಿಂದೆ ಹಲವು ಬಾರಿ ಇದೇ ರೀತಿ ಚಿನ್ನವನ್ನು ತಂದು ಕಸದ ತೊಟ್ಟಿಗೆ ಹಾಕಿ ಹೋಗಿರುವುದಾಗಿ ಡಿಆರ್‌ಐ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ದುಬೈನಲ್ಲಿ ಒಬ್ಬ ವ್ಯಕ್ತಿ ಈ ಚಿನ್ನವನ್ನು ನೀಡುತ್ತಿದ್ದು, ಅದನ್ನು ವಿಮಾನದಲ್ಲಿ ತಂದು ಈ ಡಸ್ಟ್ ಬಿನ್‌ಗೆ ಹಾಕುವುದು ನನ್ನ ಕೆಲಸ. ಈ ಡಸ್ಡ್‌ಬಿನ್‌ನಿಂದ ಚಿನ್ನವನ್ನು ಯಾರು ಕೊಂಡು ಹೋಗುತ್ತಾರೆ ಮತ್ತು ಯಾರಿಗೆ ಕೊಡಲಾಗುತ್ತಿದೆ ಎನ್ನುವುದು ತನಗೆ ತಿಳಿಯದು ಎಂದು ಆರೋಪಿ ಸಮೀರ್ ಮಹಮದ್ ತನಿಖೆ ಸಂದರ್ಭ ಮಾಹಿತಿ ನೀಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications