ಮದುವೆಗೆ ಸಂಬಂಧ ಕೂಡಿಬರಲಿಲ್ಲ ಎಂದು ಯುವತಿ ಆತ್ಮಹತ್ಯೆ
ಮಂಗಳೂರು, ಅಕ್ಟೋಬರ್ 5 : ಮದುವೆಗೆ ಸಂಬಂಧ ಕೂಡಿಬರಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಕಡಬದಲ್ಲಿ ನಡೆದಿದೆ. ಯುವತಿಯು ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಳೆನೇರಂಕಿ ಗ್ರಾಮದ ಅರಜ್ಜಿಗೆ ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬುವವರ ಮಗಳು ಸೌಮ್ಯಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮದುವೆಗೆ ಹಲವು ಸಂಬಂಧಗಳು ಬಂದರೂ ಯಾವುದೂ ಕೂಡಿಬರದ ಹಿನ್ನೆಲೆಯಲ್ಲಿ ಸೌಮ್ಯಾ ಖಿನ್ನತೆಗೊಳಗಾಗಿದ್ದರು. ಇದರಿಂದ ಬೇಸರಗೊಂಡು ಬುಧವಾರ ಸಂಜೆ ಸೌಮ್ಯಾ ಆಸಿಡ್ ಕುಡಿದಿದ್ದರು.

ಗಂಭೀರ ಸ್ಥಿತಿಯಲ್ಲಿದ್ದ ಸೌಮ್ಯಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೌಮ್ಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಆಕೆಯ ತಂದೆ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲವು ಸಮುದಾಯದಲ್ಲಿ ಗಂಡುಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಆದರೆ ಸೌಮ್ಯಾ ವಿಚಾರದಲ್ಲಿ ಆಗಿದ್ದು ದುರಂತ. ಸೌಮ್ಯಾಳ ತಂದೆ-ತಾಯಿ ಮಗಳ ಸಾವಿನ ದುಃಖವನ್ನು ಅದೆಷ್ಟು ಕಾಲ ಅನುಭವಿಸಬೇಕೋ? ಈ ರೀತಿಯ ಅನಾಹುತ ಯಾವ ಹೆಣ್ಣುಮಕ್ಕಳ ಜೀವನದಲ್ಲೂ ಆಗದಿರಲಿ.












Click it and Unblock the Notifications