ಅಕ್ಟೋಬರ್ ನಿಂದ ಶಿರಾಡಿ ಘಾಟ್ ಸಂಚಾರ ಬಂದ್
ಮಂಗಳೂರು, ಜು.15 : ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿ ಅಕ್ಟೋಬರ್ ನಿಂದ ಆರಂಭವಾಗಲಿದ್ದು ಸುಮಾರು ಏಳು ತಿಂಗಳ ಕಾಲ ನಡೆಯಲಿದೆ. ಈ ಸಮಯದಲ್ಲಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಹೇಳಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಪರ್ಯಾಯ ಮಾರ್ಗಗಳನ್ನು ಗುರುತಿಸಲು ಸೂಚನೆ ನೀಡಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಎ.ಬಿ.ಇಬ್ರಾಹಿಂ ಬೆಂಗಳೂರು-ಮಂಗಳೂರು ಸಂಪರ್ಕಿಸುವ ಪ್ರಮುಖ ಮಾರ್ಗವಾದ ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿ ಆರಂಭವಾದರೆ ಈ ಮಾರ್ಗದಲ್ಲಿ ಸಂಚಾರ ನಿಷೇಧಿಸಬೇಕಾಗುತ್ತದೆ ಎಂದು ತಿಳಿಸಿದರು.

ಕಾಮಗಾರಿ ನಡೆಯುವ ವೇಳೆ ಶಿರಾಡಿ ಘಾಟ್ ನಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗದಂತೆ ಈಗಲೇ ಕಾರ್ಯ ಯೋಜನೆಗಳನ್ನು ರೂಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. [ಅಪಾಯಕಾರಿ ಶಿರಾಡಿ ಘಾಟ್ ರಸ್ತೆಗೆ ಕಾಯಕಲ್ಪ]
ಮೊದಲ ಹಂತದಲ್ಲಿ ಸುಮಾರು 23 ಕಿ.ಮೀ. ಕಾಮಗಾರಿ ನಡೆಸಲಾಗುತ್ತದೆ. ಈ ಕಾಮಗಾರಿ ನಡೆಯುವ ಸುಮಾರು ಏಳು ತಿಂಗಳ ಅವಧಿಯಲ್ಲಿ ಮಡಿಕೇರಿ ಹಾಗೂ ಚಾರ್ಮಾಡಿ ಮೂಲಕ ಬೆಂಗಳೂರಿಗೆ ಪರ್ಯಾಯ ಮಾರ್ಗವನ್ನು ಗುರುತಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಚಾರ್ಮಾಡಿ ರಸ್ತೆಯಲ್ಲಿ ಈಗಾಗಲೇ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಈ ಮಾರ್ಗದಲ್ಲಿ ಸಂಚಾರ ಸಾಧ್ಯವಿಲ್ಲ ಎನ್ನುವುದಾದದರೆ, ಇತರ ಪರ್ಯಾಯ ಮಾರ್ಗಗಳನ್ನು ಗುರುತಿಸುವ ಬಗ್ಗೆ ಹೆದ್ದಾರಿ ಇಲಾಖೆಯವರು ಲೋಕೋಪಯೋಗಿ ಇಲಾಖೆಯ ಜತೆ ಸಮಾಲೋಚನೆ ನಡೆಸಿ ಮಾರ್ಗ ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಎರಡು ಕಾಮಗಾರಿ : ಶಿರಾಡಿ ಘಾಟ್ ನಲ್ಲಿ ಎರಡು ಹಂತದ ಕಾಮಗಾರಿಗಳನ್ನು ನಡೆಸಲು ಸರ್ಕಾರ ತೀರ್ಮಾನಿಸಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಮತ್ತು ರಸ್ತೆಯನ್ನು ಬಲಪಡಿಸುವುದು ಸೇರಿದಂತೆ ಎರಡು ಕಾಮಗಾರಿ ಈ ಮಾರ್ಗದಲ್ಲಿ ನಡೆಯಲಿದ್ದು, ಕಾಮಗಾರಿ ಪೂರ್ಣಗೊಳ್ಳುವ ತನಕ ಶಿರಾಡಿ ಘಾಟ್ ನಲ್ಲಿ ಸಂಚಾರ ನಿಷೇಧಿಸಲಾಗುತ್ತದೆ.












Click it and Unblock the Notifications