ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಗಾಂಜಾ ಸಾಗಾಟಗಾರರ ಬಂಧನ
ಮಂಗಳೂರು, ನವೆಂಬರ್18: ಮಂಗಳೂರಿನ ಸೆನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿಂದ ಮಹೇಂದ್ರ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 132 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರ ಹೊರವಲಯದ ಮುಡಿಪು ಪ್ರದೇಶದ ಕುರ್ನಾಡು ಗ್ರಾಮದ ಕಾಯರ್ ಗೋಳಿ ಎಂಬಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಬಂಟ್ವಾಳ ದ ತೌಡುಗೋಳಿ ನಿವಾಸಿ ರಮೀಜ್ ರಾಝ್(30), ಕಾಸರಗೋಡುವಿನ ಮೀಯಪದವು ನಿವಾಸಿ ಅಬ್ದುಲ್ ಖಾದರ್ ಹ್ಯಾರಿಸ್(31) ಎಂಬ ಆರೋಪಿಗಳನ್ನು ಗಾಂಜಾ ಸಾಗಾಟ ಆರೋಪದ ಮೇಲೆ ಬಂಧಿಸಿದ್ದಾರೆ.
ಪ್ರಕರಣದ ಆರೋಪಿ ರಮೀಝ್ ರಾಝ್ ವಿರುದ್ಧ ಕೋಣಾಜೆ, ಉಳ್ಳಾಲ, ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆಯತ್ನ, ಮಾದಕ ದ್ರವ್ಯ ಸೇವನೆ, ಗಾಂಜಾ ಮಾರಾಟ ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಇನ್ನು ಅಬ್ದುಲ್ ಖಾದರ್ ಹ್ಯಾರಿಸ್ ಮೇಲೂ ಕೊಲೆಯತ್ನ, ಹಲ್ಲೆ ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ.

ಆರೋಪಿ ರಮೀಝ್ ರಾಝ್ ವಿಶಾಖಪಟ್ಟಣಂ ನಿಂದ ಗಾಂಜಾ ತಂದು ಬಂಟ್ವಾಳ ತೌಡುಗೋಳಿ ಮನೆಯಲ್ಲಿ ಶೇಖರಣೆ ಮಾಡುತ್ತಿದ್ದ. ಬಳಿಕ ಆರೋಪಿಗಳು ಮಂಗಳೂರು ಉಡುಪಿ ಮಣಿಪಾಲ, ಮಂಜೇಶ್ವರದಲ್ಲಿ ಗಾಂಜಾ ಮಾರಾಟವನ್ನು ಮಾಡುತ್ತಿದ್ದರು. ಈ ಇಬ್ಬರು ಆರೋಪಿಗಳು ಸಾಕಷ್ಟು ಬಾರಿ ವಿಶಾಖಪಟ್ಟಣಂ ಭಾಗದಿಂದ ಗಾಂಜಾ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ವಿಶಾಖಪಟ್ಟಣಂನಿಂದ ಟ್ರಕ್, ಕ್ಯಾಂಟರ್, ಫಿಶ್ ಕ್ಯಾಂಟರ್, ಥಾರ್ ಸೇರಿದಂತೆ ವಿವಿಧ ವಾಹನಗಳಲ್ಲಿ ಗಾಂಜಾ ಸಾಗಾಟ ಮಾಡಿದ್ದರು. ಇವರ ದಂಧೆಯಲ್ಲಿ ಬಹಳಷ್ಟು ಜನ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿಗಳು ವಿಶಾಖಪಟ್ಟಣಂನಿಂದ ಗಾಂಜಾ ತರುವ ವೇಳೆ ಮಧ್ಯದಲ್ಲಿ ಇಬ್ಬರನ್ನು ಭೇಟಿಯಾಗಿ ಗಾಂಜಾ ಕೊಟ್ಟಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ. ಮುಡಿಪುನಲ್ಲಿ 132 ಕೆ.ಜಿ ಗಾಂಜಾದ ಜೊತೆಗೆ ಮೂರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಗಾಂಜಾ ತರುವ ವೇಳೆ ತೊಂದರೆಯಾದರೆ ದಾಳಿ ಮಾಡಲೂ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಆರೋಪಿಗಳು ವಿಶಾಖಪಟ್ಟಂ ಕಾಡಿನಿಂದ ಗಾಂಜಾವನ್ನು ಕೆ.ಜಿಗೆ ಎಂಟು ಸಾವಿರ ದಂತೆ ಖರೀದಿಸಿ ಮಂಗಳೂರಿನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಅಲ್ಲದೇ ಕೇರಳ ರಾಜ್ಯದಿಂದಲೂ ಗಾಂಜಾ ಸಾಗಾಟ ಮಾಡುತ್ತಿದ್ದರು. ದಕ್ಷಿಣ ಕನ್ನಡ ಮತ್ತು ಕೇರಳದ ನಡುವೆ 30ಕ್ಕೂ ಅಧಿಕ ಕಾಲು ದಾರಿಗಳಿದ್ದು, ಈ ದಾರಿಯಲ್ಲಿ ಪೊಲೀಸರ ತಪಾಸಣೆ ಇಲ್ಲದ ಕಾರಣ ಹೊಲ,ಗದ್ದೆಗಳ ನಡುವೆ ಗಾಂಜಾ ಸಾಗಾಟ ಮಾಡಿದ್ದಾರೆ.

ಇವರ ಜೊತೆ ಮತ್ತಷ್ಟು ಜನ ಈ ಮಾಫಿಯಾದಲ್ಲಿ ಶಾಮೀಲಾಗಿದ್ದು, ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧನ ಮಾಡುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications