ಮಾಜಿ ಶಾಸಕರನ್ನು ಕಾಡಿದ ಬೀದಿ ನಾಯಿ ಕಾಟ: 25 ದಿನಗಳಿಂದ ವ್ಹೀಲ್ ಚೇರ್‌ನಲ್ಲೇ ಓಡಾಟ
ಮಂಗಳೂರು, ಫೆಬ್ರವರಿ 16: ಮಂಗಳೂರು ನಗರದಲ್ಲಿ ಇತ್ತೀಚಿಗೆ ಯಾವ ಬೀದಿ, ರಸ್ತೆಗಳಿಗೆ ಹೋದರೂ ಬೀದಿ ನಾಯಿಗಳದ್ದೇ ಕಾಟ ಶುರುವಾಗಿದೆ. ಬೈಕ್, ಕಾರ್‌ಗಳು ಸೇರಿದಂತೆ ಮಾರ್ಗದಲ್ಲಿ ಓಡಾಡುತ್ತಿರುವ ವಾಹನಗಳನ್ನು ಬೆನ್ನಟ್ಟುದಲ್ಲದೆ, ಹಲವರ ಮೇಲೆರಗಿ ಕಚ್ಚಿ ಗಾಯಗೊಳಿಸುತ್ತಿದೆ.
ಸದ್ಯ ಮಂಗಳೂರಿನ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರಿಗೂ ಬೀದಿ ನಾಯಿ ಕಾಟ ಎದುರಾಗಿದೆ. ಬೀದಿ ನಾಯಿ ಕಚ್ಚಿದ್ದ ಪರಿಣಾಮ ಅವರು ಕಳೆದ ಇಪ್ಪತ್ತೈದು ದಿನಗಳಲ್ಲಿ ವ್ಹೀಲ್ ಚೆಯರ್‌ನಲ್ಲೇ ಓಡಾಟ ನಡೆಸುತ್ತಿದ್ದಾರೆ.

ನಗರದ ಕದ್ರಿ ಪಾರ್ಕ್ ನೊಳಗಡೆ ವಾಕಿಂಗ್ ಎಂದು ಬಂದಿದ್ದ ಮೊಯ್ದೀನ್ ಬಾವಾ ಅವರಿಗೆ ನಾಯಿಯೊಂದು ದಾಳಿ ನಡೆಸಿ ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಪರಿಣಾಮ ಕಾಲಿನ ನರಕ್ಕೆ ಗಾಯವಾಗಿ ಅವರು ನಡೆಯಲಾರದಂಥಹ ಸ್ಥಿತಿಗೆ ತಲುಪಿದ್ದಾರೆ. ಕದ್ರಿ ಪಾರ್ಕ್‌ನೊಳಗಡೆ ಸಾಕು ನಾಯಿಗಳನ್ನು ತರುವಂತಿಲ್ಲ. ಆದರೆ ಪಾರ್ಕ್‌ನಲ್ಲಿ ಬೀದಿ ನಾಯಿಗಳ ಕಾಟ ವಾಯು ವಿಹಾರಿಗಳನ್ನು ಭೀತಿಗೆ ತಳ್ಳಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮೊಯ್ದೀನ್ ಬಾವಾ ಅವರು, ಈಗಾಗಲೇ ಡಿಸಿಯವರಿಗೆ, ಮನಪಾ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಬೀದಿ ನಾಯಿಗಳ ಸಂತಾನ ಹೆಚ್ಚದಂತೆ ಕ್ರಮ ವಹಿಸಬೇಕು. ಅಲ್ಲದೇ ಬೀದಿಗಳಲ್ಲಿರುವ ನಾಯಿಗಳನ್ನು ಬೇರೆಡೆ ಕೊಂಡೊಯ್ದು, ಸಾಕುವುದಕ್ಕೆ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ವೃದ್ಧನ ಮೇಲೆ ಬೀದಿ ನಾಯಿಗಳ ಕಾಟ
ಬೆಂಗಳೂರು: ವೃದ್ಧನ ಮೇಲೆ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿರುವ ಘಟನೆ ಇತ್ತೀಚಿಗೆ ಬೆಂಗಳೂರಿನ ಮಹದೇವಪುರ ಬಳಿ ನಡೆದಿದೆ. ರಸ್ತೆ ಮೇಲೆ ವೃದ್ಧ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಏಕಾಏಕಿ ಎರಡು ನಾಯಿಗಳು ದಾಳಿ ಮಾಡಿವೆ. ಈ ವೇಳೆ ವೃದ್ಧನ ಕಾಲು ಕಚ್ಚಿ ಗಾಯಗೊಳಿಸಿದೆ.
ಮತ್ತೋರ್ವ ವ್ಯಕ್ತಿ ಬಂದು ಓಡಿಸೋವರೆಗೂ ವೃದ್ಧನ ಮೇಲೆ ನಾಯಿ ದಾಳಿ ಮಾಡಿದೆ. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ಘಟನೆ ವಿವರಿಸಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ವೃದ್ಧರು ಭಯದಲ್ಲೇ ನಡೆದಾಡುವಂತಾಗಿದೆ. ಹೀಗಾಗಿ ಬೀದಿ ನಾಯಿಗಳ ಬಗ್ಗೆ ಕ್ರಮಕೈಗೊಳ್ಳಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.












Click it and Unblock the Notifications