ನಾನು ನಿಲ್ಲಲು ಪಕ್ಷದಲ್ಲೇ ಅಪಸ್ವರ ಇದೆ: ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ರಮಾನಾಥ್ ರೈ
ಮಂಗಳೂರು, ಮೇ 16: ನನಗೀಗ ಎಪ್ಪತ್ತೊಂದು ವರ್ಷ. ನನಗಿಂತಲೂ ಹಿರಿಯರು ಚುನಾವಣೆಗೆ ನಿಂತಿದ್ದಾರೆ. ಆದರೆ ನಾನು ಚುನಾವಣೆಗೆ ನಿಲ್ಲೋದಕ್ಕೆ ಪಕ್ಷದಲ್ಲೇ ಅಪಸ್ವರ ಇರುವುದರಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಸೋತ ಬಳಿಕ ಮಂಗಳೂರಿನಲ್ಲಿ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ವೇಳೆ ಹೇಳಿದಂತೆ ತಾನು ಚುನಾವಣಾ ರಾಜಕೀಯದಿಂದ ಮಾತ್ರ ದೂರವಿದ್ದು, ಪಕ್ಷದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದು ಹೇಳಿದ ಮಾಜಿ ಸಚಿವ ರಮಾನಾಥ ರೈ, ಲೋಕಸಭಾ ಚುನಾವಣೆ ಸ್ಪರ್ಧೆಗೆ ಸೂಚಿಸಿದ್ದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಚುನಾವಣಾ ರಾಜಕೀಯದಿಂದ ಮಾತ್ರ ದೂರವಿರಲಿದ್ದೇನೆ. ಆದರೆ ಪಕ್ಷ ಎಂಎಲ್‌ಸಿ ಸೇರಿದಂತೆ ಇತರ ಅವಕಾಶಗಳನ್ನು ನೀಡಿದ್ದಲ್ಲಿ ಅದನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ನನಗಿಂತ ಪಕ್ಷ ದೊಡ್ಡದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ಪಕ್ಷಕ್ಕೆ ವಿರುದ್ಧವಾಗಿ ಎಂದೂ ನಡೆದಿಲ್ಲ ಆದ್ದರಿಂದ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ಬಂಟ್ವಾಳದಲ್ಲಿ ತನಗೆ ಸಣ್ಣ ಅಂತರದಲ್ಲಿ ಸೋಲಾಗಿದೆ. ಪಕ್ಷದಲ್ಲಿ ನನಗಿಂತಲೂ ಹಿರಿಯರು ಈಗಲೂ ಇದ್ದಾರೆ. ಆದರೆ ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಮ್ಮ ಪಕ್ಷದಿಂದಲೇ ಅಪಸ್ವರ ಕೇಳಿ ಬರುತ್ತಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಪಕ್ಷದ ವಿರುದ್ಧ ನಾನು ಈವರೆಗೆ ಯಾವುದೇ ಅಪಸ್ವರ ಎತ್ತಿಲ್ಲ. ಪಕ್ಷದ ಋಣವನ್ನು ಜೀವನ ಪರ್ಯಂತ ತೀರಿಸುತ್ತೇನೆ. ಈ ಬಾರಿಯ ನನ್ನ ಸೋಲಿನ ಅವಲೋಕನವನ್ನು ಮಾಡಿದ್ದೇನೆ. ಚುನಾವಣೆ ನಾವು ಗ್ರಹಿಸಿದ ರೀತಿಯಿಲ್ಲ. ನನಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು. ಸಮೀಕ್ಷೆಗಳೂ ಗೆಲ್ಲುವ ರೀತಿಯೇ ಇತ್ತು. ಆದರೆ ಹಿನ್ನಡೆಯಾಗಿದೆ ಎಂದು ರಮಾನಾಥ್ ರೈ ವಿವರಿಸಿದ್ದಾರೆ.

ಮಾತು ಮುಂದುವರಿಸಿದ ಅವರು, ಜನರು ಕಾಂಗ್ರೆಸ್ ಮೇಲೆ ವಿಶ್ವಾಸವನ್ನಿಟ್ಟು ಜನ ಮತ ನೀಡಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ಸರ್ಕಾರ ನಮ್ಮದೇ ಇದೆ. ಜಿಲ್ಲೆಯಲ್ಲಿ ಕಾರ್ಯಕರ್ತರು ಎದೆಗುಂದಬಾರದು. ಬಿಜೆಪಿ ರಾಜ್ಯದಲ್ಲಿ ಸ್ಪಷ್ಟ ಬಹುಮತವನ್ನು ಯಾವತ್ತೂ ಪಡೆದಿಲ್ಲ. ಜನಸಂಘ ಇರುವಾಗಲೂ ಬಾಹ್ಯ ಬೆಂಬಲದಿಂದಲೇ ಗೆದ್ದಿದ್ದರು. ಜಿಲ್ಲೆಯಲ್ಲಿ ಸೋತರೂ ಗೆದ್ದರೂ ಪಕ್ಷವನ್ನು ಪ್ರಬಲವಾಗಿ ಕಟ್ಟಿದ್ದೇವೆ. ರಾಜ್ಯದ ಜನ ಯಾವತ್ತೂ ಬಿಜೆಪಿಗೆ ಬೆಂಬಲ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಇದು ಬಸವಣ್ಣ ಹುಟ್ಟಿದ ನಾಡು, ಇಲ್ಲಿ ಜ್ಯಾತ್ಯಾತೀತ ನಿಲುವಿನ ಜನರಿಗೆ ಜನ ಮಣೆ ಹಾಕುತ್ತಾರೆ. ಭವಿಷ್ಯದಲ್ಲಿ ಬಿಜೆಪಿ ಖಂಡಿತಾ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ರಾಜ್ಯದಲ್ಲಿ ಕಾಂಗ್ರೆಸ್ ಗಳಿಸಲಿದೆ. ಗ್ಯಾರಂಟಿ ಕಾರ್ಯಕ್ರಮ ಪ್ರಮಾಣವಚನ ಸ್ವೀಕಾರವಾದ ತಕ್ಷಣ ಅನುಷ್ಠಾನಕ್ಕೆ ಬರಲಿದೆ. ಕಾಂಗ್ರೆಸ್‌ನ ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಪ್ರಯೋಜನ ತಂದಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ.












Click it and Unblock the Notifications