ಬಿ.ಕೆ. ಹರಿಪ್ರಸಾದ್‌ಗೆ ಗೃಹ ಖಾತೆ ನೀಡಿ, ದ.ಕನ್ನಡದ ಉಸ್ತುವಾರಿ ಸಚಿವರನ್ನಾಗಿ ಮಾಡಿ-ಅಭಯಚಂದ್ರ ಜೈನ್
ಮಂಗಳೂರು, ಮೇ 19: ದಕ್ಷಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಉಳಿಯಬೇಕಾದಲ್ಲಿ ಅಭಿವೃದ್ಧಿ ಪರ ಕೆಲಸಗಳಾಗಬೇಕಿದ್ದಲ್ಲಿ ಬಿ.ಕೆ.ಹರಿಪ್ರಸಾದ್ ಅವರನ್ನು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆಯಿದೆ. ಜಿಲ್ಲೆಯಲ್ಲಿ ಮತ್ತೊಮ್ಮೆ ಮೊಯ್ಲಿ, ಆಸ್ಕರ್, ಪೂಜಾರಿಯವರಂತಹ ಬಲಿಷ್ಠ ನಾಯಕರ ಅಗತ್ಯವಿದೆ. ಆದ್ದರಿಂದ ಬಿ.ಕೆ.ಹರಿಪ್ರಸಾದ್ ಅವರನ್ನು ರಾಜ್ಯ ಗೃಹ ಸಚಿವರನ್ನಾಗಿ ಮಾಡಿ, ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿಯೂ ಮಾಡಬೇಕು ಎಂದು ಬೇಡಕೆ ಇಟ್ಟಿದ್ದಾರೆ.

ಬಿ.ಕೆ.ಹರಿಪ್ರಸಾದ್ ಶಕ್ತಿವಂತ, ಆಡಳಿತದಲ್ಲಿ ತಿಳುವಳಿಕೆಯುಳ್ಳವರು. ಅವರು ಛಲದಂಕ ಮಲ್ಲ. ಅವರು ಉಸ್ತುವಾರಿ ಮಂತ್ರಿಯಾದಲ್ಲಿ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವನ ಸ್ಥಾನ ಕೊಟ್ಟಲ್ಲಿ ಜನತೆ ಸಾಮರಸ್ಯದ ಜೀವನ ನಡೆಸಬಹುದು ಎಂದು ಹೇಳಿದರು.
ಯು.ಟಿ ಖಾದರ್ ಅವರಿಗೆ ಉಸ್ತುವಾರಿ ಸ್ಥಾನ ನೀಡಿದ್ದಲ್ಲಿ ಈ ರೀತಿಯ ಅಭಿವೃದ್ಧಿ ಸಾಧ್ಯವಿಲ್ಲವೇ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಭಯಚಂದ್ರ ಜೈನ್, ಯು.ಟಿ.ಖಾದರ್ ಅವರಿಗೂ ಒಳ್ಳೆಯ ಮಂತ್ರಿ ಸ್ಥಾನ ದೊರಕಬೇಕು. ಆದರೆ ಅವರು ಸೌಮ್ಯ ಸ್ವಭಾವದ ವ್ಯಕ್ತಿ. ಅವರಲ್ಲಿ ಡ್ಯಾಶಿಂಗ್ ಸ್ವಭಾವವಿಲ್ಲ. ಅಲ್ಲದೆ ಖಾದರ್ ಮೇಲೆ ಕೋಮು ಭಾವನೆಯನ್ನು ಹೊರಿಸಿ ಅವರನ್ನು ಸ್ತಬ್ಧ ಮಾಡಲಾಗುತ್ತದೆ. ಆದ್ದರಿಂದ ಬಿ.ಕೆ.ಹರಿಪ್ರಸಾದ್ ಅವರಿಗೆ ದ.ಕ.ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನ ದೊರಕಬೇಕು ಎಂದರು.
ಇನ್ನು ಪುತ್ತೂರು ಬಿಜೆಪಿ ಕಾರ್ಯಕರ್ತನ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ ಕಟೀಲು ಅವರೇ ನೇರ ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಕಿಡಿಕಾರಿದ್ದಾರೆ. ನೂತನ ಸರ್ಕಾರಸ ಇನ್ನಷ್ಟೇ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯನವರು ನಾಳೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಬೇಕು.

ಸರ್ಕಾರದ ಜವಾಬ್ದಾರಿ ಇನ್ನೂ ಬೊಮ್ಮಾಯಿಯವರ ಮೇಲೆಯೇ ಇದೆ. ಆದರೆ ಈ ಘಟನೆಗೆ ಕಾಂಗ್ರೆಸ್ ಕಾರಣ ಕಲ್ಲಡ್ಕ ಭಟ್ ಎಂದು ಹೇಳುತ್ತಿದ್ದಾರೆ. ನಳಿನ್ ಕುಮಾರ್ ಕಟೀಲು ಅವರು ಲೋಕಸಭಾ ಸದಸ್ಯನಾಗಿ ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡಿಸುತ್ತಿದ್ದಾರೆ ಅಂದರೆ ಅವರಿಗೆ ಮಾನವೀಯತೆ ಇದೆಯೇ ಎಂದು ಅಭಯಚಂದ್ರ ಜೈನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಹೇಳಿದ ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವದ ಅಲೆ ಇದೆ. ಹಿಂದೂ ಮತ್ತು ಹಿಂದೂಯೇತರ ಅಂತಾ ಬಿಜೆಪಿ ಜನರನ್ನು ಪ್ರಚೋದಿಸಿದೆ. ಬಿಜೆಪಿ ಜಿಲ್ಲೆಯಲ್ಲಿ ದೇವರನ್ನು ತೋರಿಸಿ ಮತ ಪಡೆದಿದೆ. ಸರ್ಕಾರದ ಹಣವನ್ನು ದೇವಾಲಯಕ್ಕೆ ಕೊಟ್ಟಿದ್ದಾರೆ. ಆ ಹಣವನ್ನು ಬಡವರಿಗೆ ಕೊಟ್ಟಿಲ್ಲ. ಪಠ್ಯದಲ್ಲೂ ಸ್ವಾತಂತ್ರ್ಯ ಹೋರಾಟಗಾರನ್ನು ತೋರಿಸದೇ ಕೋಮು ಭಾವನೆಯುಳ್ಳ ವ್ಯಕ್ತಿ ಯನ್ನು ತೋರಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕೋಮು ಭಾವನೆಯನ್ನು ಬಳಸಿ ನನ್ನ ಶಿಷ್ಯ ಮಿಥುನ್ ರೈ ಯನ್ನು ಸೋಲಿಸಿದ್ದಾರೆ. ಅವರನ್ನು ಸೋಲಿಸಲು ಕಾಣದ ಕೈ ಕೆಲಸ ಮಾಡಿದೆ. ಮಿಥುನ್ ರೈ ಎದ್ದು ಬಂದು ಜಿಲ್ಲೆಯ ಕಾಂಗ್ರೆಸ್ ನಾಯಕತ್ವವನ್ನು ತೆಗೆದುಕೊಳ್ಳುತ್ತಾರೆ. ಈ ಜಿಲ್ಲೆಯಲ್ಲಿ ಎಂಎಲ್‌ಸಿ ಮಾಡಿ ಸಚಿವ ಸ್ಥಾನ ಕೊಡುವುದಾದರೆ ಮಿಥುನ್ ರೈಗೆ ಅವಕಾಶ ನೀಡಿ. ನಾನು ಕಾಂಗ್ರೆಸ್‌ನಿಂದ ಎಲ್ಲವನ್ನೂ ಅನುಭವಿಸಿದ್ದೇನೆ. ರಮಾನಾಥ್ ರೈಗೂ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಮಿಥುನ್ ರೈ ಯುವ ನಾಯಕ, ಪಕ್ಷ ಯುವಕರಿಗೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಒತ್ತಾಯಿಸಿದ್ದಾರೆ.












Click it and Unblock the Notifications