ಮಂಗಳೂರು : ಮೀನು ಹಿಡಿಯಿರಿ, ಮಾರಿ, ಖಾದ್ಯ ಸವಿಯಿರಿ
ಮಂಗಳೂರು, ಮೇ 14 : ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮಂಗಳೂರಿನಲ್ಲಿ ಮೇ 17ರಂದು ಮೀನು ಮೇಳವನ್ನು ಆಯೋಜಿಸಿದೆ. ಮೇಳದಲ್ಲಿ ಪಾಲ್ಗೊಳ್ಳುವವರು ಮೀನು ಹಿಡಿದು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ಬಗೆಯ ಖಾದ್ಯಗಳನ್ನು ಮೇಳದಲ್ಲಿ ಸವಿಯಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ದೋಣಿ ವಿಹಾರ ಕೆರೆಯ ಬಳಿ ಮೀನು ಮೇಳ ನಡೆಯಲಿದೆ. ಮೇ 17ರಂದು ಬೆಳಗ್ಗೆ 9 ಗಂಟೆಗೆ ಮೀನು ಮೇಳಕ್ಕೆ ಚಾಲನೆ ದೊರೆಯಲಿದೆ. [ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ]

ಪಿಲಿಕುಳ ನಿಸರ್ಗಧಾಮವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಈ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಪಾಲ್ಗೊಳ್ಳುವವರು ಕೆರೆಯಲ್ಲಿ ಗಾಳ ಬಳಸಿ ಮೀನು ಹಿಡಿಯಬಹುದು. ಮೀನು ಹಿಡಿಯಲು 100 ರೂ. ಶುಲ್ಕ ಪಾವತಿ ಮಾಡಬೇಕು. ಹಿಡಿದ ಮೀನನ್ನು ಮೇಳದಲ್ಲಿಯೇ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. [ಮಂಗಳೂರಿನಲ್ಲಿ ತಿನ್ನಲು ಮೀನು ಸಿಕ್ತಿಲ್ಲ!]
ಮೀನು ಮಾರಾಟ ಮಾಡಿದ್ದರಲ್ಲಿ ಬಂದ ಹಣದ ಶೇ 50ರಷ್ಟನ್ನು ನಿಸರ್ಗಧಾಮಕ್ಕೆ ನೀಡಬೇಕು. ದೊಡ್ಡ ಮೀನುಗಳನ್ನು ಹಿಡಿದರೆ ಅದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಕಳೆದ ವರ್ಷ 12 ಕೆಜಿಯ ಮೀನನ್ನು ಹಿಡಿಯಲಾಗಿತ್ತು ಎಂದು ನಿಸರ್ಗಧಾಮದ ಯೋಜನಾ ನಿರ್ದೇಶಕ ಪ್ರಭಾಕರ ಶರ್ಮಾ ಹೇಳಿದ್ದಾರೆ.
ಮೀನು ಮೇಳದಲ್ಲಿ ವಿವಿಧ ರೀತಿಯ ಖಾದ್ಯಗಳು ಜನರ ಹೊಟ್ಟೆ ತುಂಬಿಸಲಿವೆ. ಮೀನುಗಾರಿಕಾ ಅಭಿವೃದ್ಧಿ ಮಂಡಳಿ ವಿವಿಧ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ಮೀನು ಸಾಕಣೆ ಕುರಿತು ಅಗತ್ಯ ಮಾಹಿತಿಗಳನ್ನು ನೀಡಲಾಗುತ್ತದೆ.












Click it and Unblock the Notifications