ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗೆ ಬೆಂಕಿ: ದ್ವಿಚಕ್ರ ವಾಹನಗಳು ಭಸ್ಮ
ಮಂಗಳೂರು, ಜೂ 24: ಎಲೆಕ್ಟ್ರಿಕ್ ಸ್ಕೂಟರ್ ಗಳ ಶೋರೂಂ ಒಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ನಾಗುರಿಯಲ್ಲಿದ್ದ ಒಕಿನಾವ ಕಂಪನಿಯ ಸ್ಕೂಟರ್ ಶೋ ರೂಂನಲ್ಲಿ ಇಂದು ಬೆಳ್ಳಂಬೆಳಗ್ಗೆ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಪರಿಣಾಮ ಶೋರೂಂನಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಇಲೆಕ್ಟ್ರಿಕ್ ಸ್ಕೂಟರ್ ಗಳು ಅಗ್ನಿಗಾಹುತಿಯಾಗಿದೆ.
ಯಾವುದೇ ಸಾವು-ನೋವು ಸಂಭವಿಸಿಲ್ಲ
ಪ್ರಶಾಂತ್ ಎಂಬವರ ಮಾಲಕತ್ವದ ಈ ಒಕಿನವ ಇಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು, ಇಡೀ ಕಟ್ಟಡದಲ್ಲಿ ಹೊಗೆಯು ತುಂಬಿಕೊಂಡಿದ್ದು, ಮೇಲಿನ ಅಂತಸ್ತಿನಲ್ಲಿ ಕಟ್ಟಡದ ಮಾಲೀಕರ ಕುಟುಂಬ ವಾಸವಾಗಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಟ್ಟಡದ ಮಾಲಕ ಸಿರಾಜ್, "ಈ ಕಟ್ಟಡವನ್ನು ನನ್ನ ತಂದೆ ಹಮೀದ್ ಪ್ರಶಾಂತ್ ಎಂಬುವವರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಲೀಸ್ ಗೆ ನೀಡಿದ್ದಾರೆ. ಕಳೆಗೆ ಶೋ ರೂಂ ಇದ್ದು ಶೋ ರೂಂ ಮೇಲುಗಡೆಯ ಮನೆಯಲ್ಲಿ ನಾವು ವಾಸವಿದ್ದೆವು. ಬೆಳಗ್ಗೆ 8 ಗಂಟೆಯಿಂದಲೇ ಕಟ್ಟಡದಲ್ಲಿ ಆಗಾಗ ವಿದ್ಯುತ್ ಪವರ್ ಕಟ್ ಆಗೋದು ಮತ್ತೆ ಬರೋದು ಆಗುತ್ತಿತ್ತು. ಮೊದಲಿಗೆ ಇದು ವಿದ್ಯುತ್ ಸಮಸ್ಯೆಯಿಂದ ಅಂತಾ ಭಾವಿಸಿದ್ದೇವಿ. ಆದರೆ ಆದರೆ 9 ಗಂಟೆಯ ಹೊತ್ತಿಗೆ ನನ್ನ ತಾಯಿ ಕಿಟಕಿ ತೆರೆದು ನೋಡುವಾಗ ಎಲೆಕ್ಟ್ರಿಕ್ ವಾಹನದ ಶೋರೂಂ ಒಳಗಿನಿಂದ ಹೊಗೆ ಕಾಣಿಸಲಾರಂಭಿಸಿದೆ. ಬೆಂಕಿಯ ತೀವ್ರತೆ ಕಟ್ಟಡದ ತುಂಬಾ ವ್ಯಾಪಿಸಿದ ಹಿನ್ನೆಲೆ ಮನೆಯಲ್ಲಿದ್ದ ಗ್ಯಾಸ್ ಆಫ್ ಮಾಡಿ ತಕ್ಷಣ ಎಚ್ಚೆತ್ತ ನಾವು ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದೆವು," ಎಂದು ಕಟ್ಟಡದ ಮಾಲೀಕ ಸಿರಾಜ್ ಮಾಹಿತಿ ನೀಡಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ವಾಹನಗಳು ಸಂಪೂರ್ಣ ಭಸ್ಮ
ಈ ಶೋ ರೂಂನಲ್ಲಿ ಹತ್ತಕ್ಕೂ ಅಧಿಕ ಒಕಿನವ ಎಲೆಕ್ಟ್ರಿಕ್ ವಾಹನಗಳಿದ್ದು, ಐದಕ್ಕೂ ಅಧಿಕ ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಭಸ್ಮವಾಗಿದೆ. ಉಳಿದ ವಾಹನಗಳು ಬೆಂಕಿಗೆ ಬೆಂದಿವೆ. ಶೋರೂಂ ನ ಕಡತಗಳು, ದಾಖಲೆ ಪತ್ರಗಳು, ಕುರ್ಚಿ, ಡೆಸ್ಕ್ಗಳೆಲ್ಲವೂ ಬೆಂಕಿಗೆ ಸುಟ್ಟು ಕರಕಲಾಗಿದೆ. ಬೆಂಕಿಯ ಜ್ವಾಲೆ ಶೋ ರೂಂ ಮೇಲ್ಭಾಗದಲ್ಲಿದ್ದ ಮನೆಗೂ ವ್ಯಾಪಿಸಿದ್ದು ಮನೆಯಲ್ಲಿ ಪೀಠೋಪಕರಣ, ಗೃಹ ಬಳಕೆಯ ವಸ್ತುಗಳಿಗೆ ಹಾನಿಯಾಗಿದೆ. ನೀರಿನ ಪೈಪ್,ಟ್ಯಾಂಕ್,ಎಸಿ ಡಕ್ ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಸಂಪೂರ್ಣ ಹಾನಿಯಾಗಿದೆ.











Click it and Unblock the Notifications