ಮಂಗಳೂರಲ್ಲಿ ನೆರೆ ಮನೆಯವನ ಮೇಲಿನ ಕೋಪಕ್ಕೆ ತನ್ನ ಮನೆಗೆ ಬೆಂಕಿಯಿಟ್ಟ ಭೂಪ
ಮಂಗಳೂರು, ಫೆಬ್ರವರಿ 11:ಪಿತ್ತ ನೆತ್ತಿಗೇರಿದಾಗ ಕೈಗೊಳ್ಳುವ ನಿರ್ಧಾರಗಳು ಅನಾಹುತದಲ್ಲೇ ಕೊನೆಗೊಳ್ಳುತ್ತವೆ. ಈ ಮಾತಿಗೆ ಸ್ಪಷ್ಟ ನಿದರ್ಶನ ಮಂಗಳೂರಿನಲ್ಲಿ ನಡೆದ ಪ್ರಸಂಗ. ನೆರೆ ಮನೆಯಾತನ ಮೇಲಿನ ಸಿಟ್ಟಿಗೆ ವ್ಯಕ್ತಿಯೊಬ್ಬ ತನ್ನ ಮನೆಗೆ ಬೆಂಕಿ ಹಚ್ಚಿಕೊಂಡ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಂಗಳೂರಿನ ಬಾರೆಬೈಲ್ ನಲ್ಲಿರುವ ಅಪಾರ್ಟ್ ಮೆಂಟ್‌ವೊಂದರಲ್ಲಿ ನಿನ್ನೆ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ. ಬಾರೆಬೈಲ್ ನಲ್ಲಿರುವ ಅಪಾರ್ಟ್ ಮೆಂಟ್ ವೊಂದಲ್ಲಿ ಅಗ್ನಿ ಆಕಸ್ಮಿಕ ಘಟನೆ ಈಗ ಹೊಸ ತಿರುವು ಪಡೆದುಕೊಂಡಿದೆ. ಪಕ್ಕದ ಮನೆಯವನ ಮೇಲಿನ ಸಿಟ್ಟಿಗೆ ಸ್ವತಃ ತನ್ನ ಮನೆಗೆ ವ್ಯಕ್ತಿ ಬೆಂಕಿ ಹಚ್ಚಿಕೊಂಡಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.
ಮಂಗಳೂರು ಹೊರವಲಯದ ಬಾರೆಬೈಲಿನಲ್ಲಿರುವ ಅಪಾರ್ಟ್ ಮೆಂಟ್‌ವೊಂದರ ಐದನೇ ಮಹಡಿಯಲ್ಲಿ ವಾಸವಿದ್ದ ಮನೀಶ್ ಎಂಬುವವರ ಮನೆಯಲ್ಲಿ ನಿನ್ನೆ ರಾತ್ರಿ ಬೆಂಕಿ ಅವಘಡ ಸಂಭವಿಸಿತ್ತು. ನಿನ್ನೆ ಮನೀಶ್ ಹಾಗೂ ಅದೇ ಅಪಾರ್ಟ್ ಮೆಂಟ್‌ನಲ್ಲಿ ವಾಸವಿರುವ ವ್ಯಕ್ತಿಯೊಬ್ಬರಿಗೂ ವಾಹನದ ಪಾರ್ಕಿಂಗ್ ವಿಚಾರದಲ್ಲಿ ಜಗಳವಾಗಿತ್ತು ಎನ್ನಲಾಗಿದೆ. ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿತ್ತು ಎಂದು ಹೇಳಲಾಗಿದೆ.

ಆ ಬಳಿಕ ಮನೆಗೆ ತೆರಳಿದ ಮನೀಶ್ ತನಗಾದ ಅವಮಾನ, ನೆತ್ತಿಗೇರಿದ್ದ ಕೋಪದಿಂದ ಸ್ವತಃ ತನ್ನ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಎನ್ನಲಾಗಿದೆ. ಘಟನೆಯಲ್ಲಿ ಮನೆಯ ಪೀಠೋಪಕರಣಗಳಿಗೂ ಹಾನಿಯಾಗಿತ್ತು ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರು.












Click it and Unblock the Notifications