ಕೊನೆಗೂ ಮುಚ್ಚಿದ ಕಡಬದ ಕಲ್ಲುಗುಡ್ಡೆಯ ಮದ್ಯದಂಗಡಿ
ಮಂಗಳೂರು, ಸೆಪ್ಟೆಂಬರ್ 22 : ಪುತ್ತೂರು ತಾಲೂಕಿನ ಕಡಬದ ಕಲ್ಲುಗುಡ್ಡೆಯ ಸರಕಾರಿ ಜಮೀನಿನ ಕಟ್ಟಡದಲ್ಲಿ ತಲೆ ಎತ್ತಿದ್ದ ಮದ್ಯದಂಗಡಿ ಕೊನೆಗೂ ಬಂದ್ ಆಗಿದೆ.
ಮದ್ಯದಂಗಡಿಯನ್ನು ಮುಚ್ಚಬೇಕೆಂದು ಆಗ್ರಹಿಸಿ ಕಳೆದ 10 ದಿನಗಳಿಂದ ಇಲ್ಲಿನ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ನಡೆಸುತ್ತಿದ್ದ ನಿರಂತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಹೋರಾಟಗಾರಿಗೆ ಮಣಿದು ಜಿಲ್ಲಾಡಳಿತ ನಿನ್ನೆ (ಸೆ,21) ಸ್ಥಳದ ಸರ್ವೆಯನ್ನು ನಡೆಸಿತ್ತು. ಸರ್ವೆಯಲ್ಲಿ ಮದ್ಯದಂಗಡಿ ಇರುವ ಜಾಗ ಸರಕಾರಿ ಜಾಗವೆಂದು ತಿಳಿದುಬಂದ ಹಿನ್ನಲೆಯಲ್ಲಿ ಇದೀಗ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಮದ್ಯದಂಗಡಿ ಹಾಗೂ ಕಟ್ಟಡವನ್ನು ನೆಲಸಮಗೊಳಿಸಲು ಆದೇಶ ನೀಡಿದ್ದಾರೆ.
ಇದೀಗ ಸ್ಥಳೀಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅಧಿಕೃತ ಆದೇಶ ಪ್ರತಿಗಾಗಿ ಕಾಯುತ್ತಿದ್ದು, ಆದೇಶ ಪ್ರತಿ ಕೈಸೇರಿದ ಕೂಡಲೇ ಕಟ್ಟಡ ನೆಲಸಮ ಕಾರ್ಯ ನಡೆಯಲಿದೆ.
ಕಳೆದೆರಡು ದಿನಗಳಿಂದ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಮಕ್ಕಳನ್ನೂ ಸೇರಿಸಿಕೊಂಡಿದ್ದರು. ಅಲ್ಲದೆ ಸ್ಥಳಕ್ಕೆ ಆಗಮಿಸಿದ ಅಬಕಾರಿ ಇಲಾಖೆ ಹಾಗೂ ಪುತ್ತೂರು ಸಹಾಯಕ ಕಮಿಷನರ್ ಗೂ ದಿಗ್ಭಂಧನ ಹಾಕಿ ಹೋರಾಟ ಮುಂದುವರೆಸಿದ್ದರು, ಇದೀಗ ಅಂಗಡಿ ಮುಚ್ಚುವುದರಿಂದ ಹೋರಾಟಗಾರರಲ್ಲಿ ಸಂತಸ ತಂದಿದೆ.












Click it and Unblock the Notifications