ಮತ್ತೆ ಭಜರಂಗದಳ ಕಾರ್ಯಾಚರಣೆ; ಯುವಕನ ಡ್ರಗ್ಸ್ ಟೆಸ್ಟ್ ಪಾಸಿಟಿವ್
ಮಂಗಳೂರು, ಅಕ್ಟೋಬರ್ 04: ಕಡಲನಗರಿ ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಭಾರಿ ಸುದ್ದಿಯಾಗಿತ್ತು. ಅನ್ಯಧರ್ಮದವ ಯುವಕರ ಜೊತೆ ಸುತ್ತಾಡೋಕೆ ಹೋಗಿದ್ದ ಯುವತಿಯರಿದ್ದ ವಾಹನವನ್ನು ತಡೆದು ನಿಲ್ಲಿಸಿದ ಭಜರಂಗದಳದ ಕಾರ್ಯಕರ್ತರು, ಪೊಲೀಸರ ಎದುರೇ ಯುವಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.
ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಈ ಘಟನೆಯ ಬಳಿಕ ಕೆಲವೇ ದಿನಗಳ ಅಂತರದಲ್ಲಿ ಭಜರಂಗದಳ ಮತ್ತೊಂದು ಕಾರ್ಯಾಚರಣೆ ಮಾಡಿದೆ. ನಿರ್ಜನ ಪ್ರದೇಶನಕ್ಕೆ ಹಿಂದೂ ಯುವತಿಯರ ಜೊತೆ ಬಂದಿದ್ದ ಅನ್ಯಧರ್ಮದ ಯುವಕನೊಬ್ಬನನ್ನು ಭಜರಂಗದಳ ಕಾರ್ಯಕರ್ತರು ತಡೆದಿದ್ದು, ಈ ವೇಳೆ ಯುವಕರು ಡ್ರಗ್ಸ್ ಸೇವಿಸಿರೋದು ಬೆಳಕಿಗೆ ಬಂದಿದೆ.
ಮಂಗಳೂರು ಹೊರವಲಯದ ಗುರುಪುರ ಬಳಿಯ ಚಿಲಿಂಬಿಗುಡ್ಡೆ ಎಂಬ ನಿರ್ಜನ ಪ್ರದೇಶದಲ್ಲಿ ಇಬ್ಬರು ಯುವಕರ ಜೊತೆ ಓರ್ವಳು ಯುವತಿ, ಓರ್ವಳು ಬಾಲಕಿ ಪತ್ತೆಯಾಗಿದ್ದಾರೆ. ಇಬ್ಬರು ಯುವಕರಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕನಿದ್ದು ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಹಿಂದೂ ಯುವತಿ, ಬಾಲಕಿ, ಯುವಕ ಹಾಗೂ ಮುಸ್ಲಿಂ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯುವಕರು ಮಾದಕ ವಸ್ತು ಸೇವನೆ ಮಾಡಿರುವ ಮಾಹಿತಿಯನ್ನು ಸಂಘಟನೆಯವರನ್ನು ನೀಡಿದ್ದರಿಂದ ಯುವಕರ ಡ್ರಗ್ಸ್ ಟೆಸ್ಟ್ ಮಾಡಿಸಿದ್ದು, ವರದಿ ಪಾಸಿಟಿವ್ ಬಂದಿದೆ.
ಹೀಗಾಗಿ ಡ್ರಗ್ಸ್ ಸೇವಿಸಿರುವ ಆರೋಪದಡಿಯಲ್ಲಿ ಬಜ್ಪೆ ಠಾಣಾ ಪೊಲೀಸರು ಶಾಕೀರ್, ಧೀರಜ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ಸಂಜೆ ಈ ತಂಡ ಚಿಲಿಂಬಿಗುಡ್ಡೆಗೆ ಕಾರೊಂದರಲ್ಲಿ ಬಂದಿತ್ತು. ಆದರೆ ಬಂದಿದ್ದ ಕಾರಿಗೆ ನಂಬರ್ ಪ್ಲೇಟ್ ಇಲ್ಲದೆ ಇದ್ದುದರಿಂದ ಸ್ಥಳೀಯರಿಗೆ ಅನುಮಾನ ಬಂದಿತ್ತು.
ಹೀಗಾಗಿ ಪ್ರಾರಂಭದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ತಂಡದಲ್ಲಿದ್ದವರ ಪೂರ್ವಾಪರ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ. ಇನ್ನು ತಂಡದಲ್ಲಿ ಓರ್ವಳು ಬಾಲಕಿಯಿದ್ದು, ಬಾಲಕಿ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.
ಹೀಗಾಗಿ ಇಬ್ಬರು ಯುವಕರ ವಿರುದ್ದ ಮಾದಕವಸ್ತು ಸೇವನೆಯ ಕೇಸ್ ಜೊತೆ ಪೋಕ್ಸೋ ಪ್ರಕರಣವೂ ದಾಖಲಿಸಲಾಗಿದೆ. ಆರೋಪಿಗಳಾದ ಶಾಕೀರ್ ಮತ್ತು ಧೀರಜ್ ಚಿಲಿಂಬಿಗುಡ್ಡೆಗೆ ಡ್ರಗ್ಸ್ ಸೇವಿಸಲೇಂದೇ ಯುವತಿಯ ಜೊತೆ ಬಂದಿರುವ ಸಾಧ್ಯತೆಗಳಿವೆ. ಯುವತಿಯ ಜೊತೆಗೆ ಬಾಲಕಿಯನ್ನೂ ಕರೆದುಕೊಂಡು ಬಂದಿದ್ದರು.
ಸದ್ಯ ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಯುವ ಸಮುದಾಯ ಡ್ರಗ್ಸ್ ಸೇರಿದಂತೆ ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ದುರಂತ.
ನೈತಿಕ ಪೊಲೀಸ್ ಗಿರಿ; ಕೆಲವು ದಿನಗಳ ಹಿಂದೆ ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿತ್ತು. ಈ ಕುರಿತು ಆಡಳಿತರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಟೀಕಾಪ್ರಹಾರ ಮಾಡಿದ್ದರು. ನೈತಿಕ ಪೊಲೀಸ್ ಗಿರಿ ಮಾಡಿದ ಆರೋಪಿಗಳು ಬಂಧನವಾದ ಕೆಲವೇ ಕ್ಷಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕಾಂಗ್ರೆಸ್ ನಾಯಕರು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
"ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಮಾಜದ್ರೋಹಿ ಶಕ್ತಿಗಳು, ರೌಡಿಗಳ ಅಟ್ಟಹಾಸ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಕಾನೂನಿನ ಭಯವಿಲ್ಲದೇ ರೌಡಿಗಳು ಅಟ್ಟಹಾಸ ತೋರಿಸುತ್ತಿದ್ದಾರೆ. ಆಡಳಿತ ಪಕ್ಷದ ಒತ್ತಡದಿಂದ ಪೊಲೀಸ್ ಇಲಾಖೆ ನಿಸ್ಸಾಹಕವಾಗಿದೆ. ಹೀಗಾಗಿ ನೈತಿಕ ಪೊಲೀಸ್ ಗಿರಿ ಮಾಡಿದ ಆರೋಪಿಗಳು ಬಂಧನವಾದ ತಕ್ಷಣ ಬಿಡುಗಡೆಯಾಗಿದ್ದಾರೆ" ಎಂದು ಮಾಜಿ ಸಚಿವ ಯು. ಟಿ. ಖಾದರ್ ಆರೋಪಿಸಿದ್ದರು.
"ಪೊಲೀಸರು ಲಾಠಿ ಬಿಟ್ಟರೆ ಜನರು ಲಾಠಿ ಹಿಡಿದು ತಿರುಗುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಪೊಲೀಸ್ ಇಲಾಖೆ ದಾಳಿ ಮಾಡಿದವರ ಮೇಲೆ ಯಾವ ಕೇಸ್ ಹಾಕಿದೆ?. ಈ ಪ್ರಕರಣದಲ್ಲಿ ಯಾರ ಒತ್ತಡ ಇತ್ತು ಅಂತಾ?" ಯು. ಟಿ. ಖಾದರ್ ಪ್ರಶ್ನಿಸಿದ್ದರು.












Click it and Unblock the Notifications