ಮಂಗಳೂರು: ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ, ಪರಿಸರ ಪ್ರೇಮಿಗಳ ಆಕ್ರೋಶ
ಮಂಗಳೂರು, ಅಕ್ಟೋಬರ್ 03: ಮಂಗಳೂರು ನಗರದ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವಾಡಿಕೆಯ ಮಳೆಯಾಗದೆ, ಈ ಬೇಸಿಗೆಗೆ ನೀರಿಗೆ ಹಾಹಾಕಾರವೇ ಸೃಷ್ಟಿಯಾಗುವುದು ಖಂಡಿತ. ಇದನ್ನು ಸರಿಪಡಿಸಲು ಹೆಣಗಾಡುತ್ತಿರುವ ವೇಳೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಮಾರಕವಾಗುವ ಕಾರ್ಯ ಆಗುತ್ತಿದೆ.
ಮಂಗಳೂರು ನಗರದ ನಂತೂರಿನಿಂದ ಕೆಪಿಟಿವರೆಗೆ ವಾಹನ ದಟ್ಟಣೆ ಕಡಿಮೆ ಮಾಡಲು ಮೇಲ್ಸೇತುವೆ ನಿರ್ಮಾಣಕ್ಕೆ ಎನ್ಎಚ್ಎಐ ಸಿದ್ಧತೆ ನಡೆಸುತ್ತಿತ್ತು. ಇದಕ್ಕಾಗಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಇರುವ ಮರಗಳನ್ನು ತೆರವು ಮಾಡಲು ಗುರುತಿಸಲಾಗಿತ್ತು. ಆದರೆ ಮರಗಳ ಕಡಿಯಲು ಮಂಗಳೂರಿನ ಪರಿಸರ ಪ್ರೇಮಿ ಸಂಘಟನೆ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ವಿರೋಧ ವ್ಯಕ್ತಪಡಿಸಿದ್ದರು.

ಆದ್ದರಿಂದ ಅರಣ್ಯ ಅಧಿಕಾರಿಗಳು ಹಾಗೂ ಎನ್ಎಚ್ಎಐ ಅಧಿಕಾರಿಗಳು ಪರಿಸರ ಪ್ರೇಮಿಗಳ ಸಮಕ್ಷಮದಲ್ಲಿ ಸಭೆ ನಡೆಸಿ 602 ಮರಗಳನ್ನು ಗುರುತಿಸಿತ್ತು. ಇದರಲ್ಲಿ 370 ಮರಗಳನ್ನು ಸ್ಥಳಾಂತರ ಮಾಡಲು 372 ಮರಗಳನ್ನು ಕಡಿಯಲು ಅರಣ್ಯಾಧಿಕಾರಿಗಳು ಗುರುತಿಸಿದ್ದಾರೆ. ಆದರೆ ಇಲ್ಲಿ ಗುರುತಿಸಿರುವ ಮರಕ್ಕಿಂತ ಅಧಿಕ 40 ಮರಗಳನ್ನು ಕಡಿಯಲು ಪ್ಲ್ಯಾನ್ ಮಾಡಲಾಗಿದೆ.
ಮೊದಲು ಮರಗಳನ್ನು ಸ್ಥಳಾಂತರ ಮಾಡಿ ಬಳಿಕ ಮರಗಳ ಕಡಿಯುವ ಪ್ರಕ್ರಿಯೆ ಮಾಡಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದರು. ಮರಗಳ ಸ್ಥಳಾಂತರ ಹಾಗೂ ಕಡಿಯುವ ಪ್ರಕ್ರಿಯೆಯನ್ನು ಸಕಲೇಶಪುರದ ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಏಕಾಏಕಿ ಅರಣ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಈ ಏಜೆನ್ಸಿ ಸ್ಥಳಾಂತರ ಮಾಡಬಹುದಾದ ಮರಗಳ ಬುಡಕ್ಕೆ ಕೊಡಲಿ ಇಟ್ಟು ಮಾರಣಹೋಮ ಮಾಡಿದೆ.

ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಪರಿಸರ ಪ್ರೇಮಿ ಸಂಘಟನೆಯ ಸದಸ್ಯರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಮರ ಕಡಿಯುವುದನ್ನು ತಡೆದಿದ್ದಾರೆ. ಬಳಿಕ ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು, ಮರ ಕಡಿಯುವ ಏಜೆನ್ಸಿ ಹಾಗೂ ಪರಿಸರವಾದಿಗಳ ನಡುವೆ ವಾಗ್ವಾದ ನಡೆದಿದೆ.
ಮರಗಳ ಮಾರಣಹೋಮ ವಿರೋಧಿಸಿದ ಪರಿಸರ ಪ್ರೇಮಿಗಳು ಕಡಿದು ಬಿದ್ದ ಮರಗಳ ತುಂಡುಗಳಿಗೆ ಬಿಳಿ ಬಟ್ಟೆ ಹೊದಿಸಿ ಅಧಿಕಾರಿಗಳ ಅಣಕು ಶವಪ್ರದರ್ಶನ ಮಾಡಿದರು. ಇದರೊಂದಿಗೆ ಅಲ್ಲಿ ಸೃಷ್ಟಿಯಾಗಿದ್ದ ಹೈಡ್ರಾಮಾ ಕೊನೆಗೊಂಡಿದೆ. ಅಭಿವೃದ್ಧಿ ಬೇಕು ಆದರೆ ಪರಿಸರ ಮಾರಕವಾದ ಅಭಿವೃದ್ಧಿ ಬೇಡ ಎನ್ನುವುದು ಪರಿಸರ ಪ್ರೇಮಿಗಳ ಕಳಕಳಿಯಾಗಿದೆ.












Click it and Unblock the Notifications