ಮಂಗಳೂರು ಪಿಲಿಕುಳ ನಿಸರ್ಗಧಾಮದ ಪ್ರವೇಶ ಶುಲ್ಕ ಹೆಚ್ಚಳ
ಮಂಗಳೂರು, ಆಗಸ್ಟ್ 2: ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನದ ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದೆ.
ಇನ್ನು ಮುಂದೆ ಹಿರಿಯರಿಗೆ ಐವತ್ತರ ಬದಲು ಅರವತ್ತು ರುಪಾಯಿ ನಿಗದಿ ಮಾಡಲಾಗಿದೆ. ಆಗಸ್ಟ್ ಒಂದರಿಂದಲೇ ಈ ನೂತನ ದರ ಜಾರಿಗೆ ಬಂದಿದೆ.

ಹನ್ನೆರಡು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ನೂತನ ದರ ಅನ್ವಯಿಸಲಿದ್ದು, ಹನ್ನೆರಡು ವರ್ಷ ಕೆಳಗಿನವರಿಗೆ ಶಾಲಾ ವಿದ್ಯಾರ್ಥಿಗಳು ಮತ್ತು ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಹಿಂದಿನ ರಿಯಾಯಿತಿ ದರವೇ ಅನ್ವಯಿಸಲಿದೆ. ಮೂರು ವರ್ಷದ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.
ವಿದ್ಯಾರ್ಥಿಗಳಿಗೆ ಇಪ್ಪತ್ತು ರುಪಾಯಿ ಹಾಗೂ ಪ್ರವಾಸದಲ್ಲಿ ಬರುವ ವಿದ್ಯಾರ್ಥಿಗಳಿಗೆ ಹದಿನೈದು ರುಪಾಯಿ ಶುಲ್ಕವಿದೆ. ನೂರೈವತ್ತು ಎಕರೆ ಪ್ರದೇಶದಲ್ಲಿರುವ ಉದ್ಯಾನದಲ್ಲಿ ಒಂದು ಸಾವಿರಕ್ಕೂ ಅಧಿಕ ವಿವಿಧ ಪ್ರಾಣಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಪ್ರಾಣಿ -ಪಕ್ಷಿಗಳ ಒಟ್ಟು ನಿರ್ವಹಣೆಗೆ ತಿಂಗಳಿಗೆ ಎಂಟರಿಂದ ಒಂಬತ್ತು ಲಕ್ಷ ರುಪಾಯಿ ವೆಚ್ಚವಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಗೇಟ್ ಕಲೆಕ್ಷನ್ ನಿಂದ ಬರುತ್ತಿರುವ ವಾರ್ಷಿಕ ಆದಾಯ ಕೇವಲ ಒಂದು ಕೋಟಿ ರುಪಾಯಿ ಮಾತ್ರ.
ಕೆಲವೊಂದು ಪ್ರಾಣಿ -ಪಕ್ಷಿಗಳ ನಿರ್ವಹಣಾ ವೆಚ್ಚ ಅದನ್ನು ದತ್ತು ತೆಗೆದುಕೊಂಡಿರುವ ಬ್ಯಾಂಕ್ ಗಳು, ಖಾಸಗಿ ಸಂಘ- ಸಂಸ್ಥೆಗಳು, ವ್ಯಕ್ತಿಗಳು ಭರಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಜೈವಿಕ ಉದ್ಯಾನಕ್ಕೆ ಸರಕಾರದಿಂದ ಯಾವುದೇ ರೀತಿ ನಿರ್ವಹಣೆ ಅನುದಾನ ದೊರೆಯುತ್ತಿಲ್ಲ. ಆದ್ದರಿಂದ ಆಡಳಿತ ಮಂಡಳಿ ಶುಲ್ಕ ಹೆಚ್ಚಳ ನಿರ್ಧಾರಕ್ಕೆ ಬಂದಿದೆ.












Click it and Unblock the Notifications