ಮಂಗಳೂರು ನಗರದಲ್ಲಿ ಬಿಜೆಪಿಯ ಬೃಹತ್ ಸಭೆ
ಮಂಗಳೂರು, ಮಾ. 17 : ಏಪ್ರಿಲ್ 17ರಂದು ಒಂದು ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ಫಲಿತಾಂಶದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ನ ಪತನ ಪ್ರಾರಂಭವಾಗಲಿದೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭ್ರಷ್ಟಚಾರ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ದೇಶದ ಭದ್ರತೆ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳಾಗಿವೆ. ಲೋಕಸಭಾ ಚುನಾವಣೆಯಲ್ಲಿ ಜನ ಇದಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ ಅವರು ಸ್ಪರ್ಧೆಗಿಳಿದಿದ್ದರೆ, ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ವಿರೋಧ ಎದುರಿಸಿದ ಜನಾರ್ದನ ಪೂಜಾರಿ ಅವರು ಆಂತರಿಕ ಚುನಾವಣೆಯಲ್ಲಿ ಗೆದ್ದು ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 2009ರ ಚುನಾವಣೆಯಲ್ಲಿ ಕಟೀಲ್ ಅವರು ಪೂಜಾರಿ ಅವರನ್ನು ಕೇವಲ ಹತ್ತು ಸಾವಿರ ಮತಗಳಿಂದ ಪೂಜಾರಿ ಅವರನ್ನು ಸೋಲಿಸಿದ್ದರು. ಈಗ ಕಟೀಲ್ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ ಪೂಜಾರಿ.

ದೇಶಾದ್ಯಂತ ಮೋದಿ ಅಲೆ : ಕೆಎಸ್ ಈಶ್ವರಪ್ಪ
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಿಸಿದ ಬಳಿಕ ದೇಶದಲ್ಲಿ ಸಂಚಲನ ಮೂಡಿದೆ. ಮೋದಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಲು ಕೋಟ್ಯಂತರ ಜನರು, ಯುವಕರು ನಿರ್ಧರಿಸಿದ್ದಾರೆ. ದೇಶದಾದ್ಯಂತ ಮೋದಿ ಅಲೆ ಇದೆ. ಕರ್ನಾಟಕದಲ್ಲೂ ಇದು ಪ್ರತಿಧ್ವನಿಸಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ವಿಚಾರದ ಆಧಾರದಲ್ಲಿ ಸ್ಪರ್ಧೆ
ಸಂಸದ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲು ಹಾಗೂ ಜನಾರ್ದನ ಪೂಜಾರಿ ನಡುವಣ ಸ್ಪರ್ಧೆ ಅಲ್ಲ. ಬದಲಾಗಿ ರಾಷ್ಟ್ರೀಯ ವಿಚಾರದ ಅಧಾರದಲ್ಲಿ ಸ್ಪರ್ಧೆ ನಡೆಯುತ್ತಿದೆ. ದೇಶದ ಜನತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ ಎಂದರು.

ಅನುದಾನ ತರುವಲ್ಲಿ ಯಶಸ್ವಿ : ಕಟೀಲ್
ಕಳೆದ ಅವಧಿಯಲ್ಲಿ ಮೊದಲ ಬಾರಿಗೆ ಸಂಸತ್ಸದಸ್ಯನಾಗಿ ಲೋಕಸಭೆ ಪ್ರವೇಶಿಸಿದರೂ ಸಂಸದರ ನಿಧಿಯ ವಿನಿಯೋಗದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದೇನೆ. ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇರದಿದ್ದರೂ ಸಾವಿರಾರು ಕೋ. ರೂ. ಅನುದಾನವನ್ನು ವಿವಿಧ ಯೋಜನೆಗಳಿಗೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಇನ್ನೂ ಮುಂದೆಯೂ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.

50ಕ್ಕೂ ಅಧಿಕ ಮಂದಿ ಬಿಜೆಪಿ ಸೇರ್ಪಡೆ
ಮಾಜಿ ಕಾರ್ಪೊರೇಟರ್‌ಗಳಾದ ಜೇಮ್ಸ್ ಡಿ'ಸೋಜ, ಮುರಲೀಧರ ಬೋಳಾರ್ ಸೇರಿದಂತೆ 50ಕ್ಕೂ ಅಧಿಕ ಮಂದಿ ಬಿಜೆಪಿ ಸೇರ್ಪಡೆಗೊಂಡರು.

ಸ್ಥಳೀಯ ಬಿಜೆಪಿ ಗಣ್ಯರು ಸಭೆಯಲ್ಲಿ ಹಾಜರು
ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ವಿಧಾನಸಭಾ ಮಾಜಿ ಉಪಾಧ್ಯಕ್ಷ ಎನ್. ಯೋಗೀಶ್ ಭಟ್, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮುಖಂಡರಾದ ಶ್ರೀಕರ ಪ್ರಭು, ರವಿಶಂಕರ ಮಿಜಾರ್, ರಾಜಗೋಪಾಲ ರೈ, ಸುಧೀರ್ ಶೆಟ್ಟಿ ಕಣ್ಣೂರು, ಡಿ. ವೇದವ್ಯಾಸ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಬೆಂಬಲಿಗರು
ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರಿದ ಸಂದರ್ಭದಲ್ಲಿ ಸಹಸ್ರಾರು ಬೆಂಬಲಿಗರು ನೆರೆದಿದ್ದರು.

ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷಕ್ಕೆ ಈ ದೇಶದಲ್ಲಿ ಭವಿಷ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು ಈಶ್ವರಪ್ಪ.

ಈಶ್ವರಪ್ಪನವರಿಂದ ಭುವನೇಶ್ವರಿಗೆ ನಮನ
'ಏಕ್ ಭಾರತ್ ಶ್ರೇಷ್ಠ ಭಾರತ್' ಘೋಷಣೆಯಡಿ ನಡೆಸಲಾದ ಕಾರ್ಯಕರ್ತರ ಸಮಾವೇಶವನ್ನು ಜ್ಯೋತಿ ಬೆಳಗುವ ಮುಖಾಂತರ ಈಶ್ವರಪ್ಪ ಉದ್ಘಾಟಿಸಿದರು.

ನರೇಂದ್ರ ಮೋದಿಯೇ ಭಾರತದ ಪ್ರಧಾನಿ
ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಧೂಳಿಪಟವಾಗಲಿದೆ, ನರೇಂದ್ರ ಮೋದಿ ಪ್ರಧಾನಿ ಗದ್ದುಗೆ ಏರಲಿದ್ದಾರೆ. ಇದು ಶತಸಿದ್ಧ ಎಂದರು ಈಶ್ವರಪ್ಪ.











Click it and Unblock the Notifications